ತತ್ವಾದರ್ಶ ಭಾಷಣಕ್ಕೆ ಸೀಮಿತಗೊಳಿಸಬೇಡಿ

7
ವಿದ್ಯಾರ್ಥಿಗಳಿಗೆ ಬೆಂಗಳೂರು ಉತ್ತರ ವಿ.ವಿ ಉಪ ಕುಲಪತಿ ಕೆಂಪರಾಜು ಕಿವಿಮಾತು

ತತ್ವಾದರ್ಶ ಭಾಷಣಕ್ಕೆ ಸೀಮಿತಗೊಳಿಸಬೇಡಿ

Published:
Updated:
Deccan Herald

ಕೋಲಾರ: ‘ವಿದ್ಯಾರ್ಥಿಗಳು ಅಭಿವೃದ್ಧಿಗೆ ಪೂರಕವಾಗಿ ಚಿಂತನೆ, ಚರ್ಚೆ ನಡೆಸಿದರೆ ಸಮ ಸಮಾಜ ನಿರ್ಮಾಣವಾಗುತ್ತದೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಇಲ್ಲಿ ಗುರುವಾರ ನಡೆದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ‘ಪದವಿ, ಘಟಿಕೋತ್ಸವ ಪ್ರಮಾಣಪತ್ರ ಪಡೆದ ಮಾತ್ರಕ್ಕೆ ವಿದ್ಯಾರ್ಥಿಗಳ ಜವಾಬ್ದಾರಿ ಮುಗಿಯುವುದಿಲ್ಲ. ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲಾ ಜೀವನ ರೂಪಿಸಿಕೊಳ್ಳುತ್ತಿದ್ದೇವೆ. ಅವರ ಆಶಯ, ಸಿದ್ಧಾಂತ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಅವರ ತತ್ವಾದರ್ಶವನ್ನು ಕೇವಲ ಭಾಷಣ, ಜಯಂತಿಗೆ ಸೀಮಿತಗೊಳಿಸಬಾರದು’ ಎಂದು ಕಿವಿಮಾತು ಹೇಳಿದರು.

‘ಮಹನೀಯರ ಜಯಂತಿಯು ಆಚರಣೆಗೆ ಸೀಮಿತವಾಗಬಾರದು. ಬದಲಿಗೆ ಅವರ ಸಾಧನೆ, ಆಶಯ, ಸಿದ್ಧಾಂತದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಕಾಲೇಜು, ವಿಶ್ವವಿದ್ಯಾಲಯ ಮಟ್ಟದಿಂದ ಆಗಬೇಕು. ವಿ.ವಿ ಸ್ನಾತಕೋತ್ತರ ಕೇಂದ್ರಗಳ ಪ್ರತಿ ವಿಭಾಗದಲ್ಲೂ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗೆ ವೇದಿಕೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಕ್ರಮ ರೂಪಿಸಲಾಗುವುದು’ ಎಂದರು.

ಕಲ್ಪನೆ ಮೂಡುತ್ತದೆ: ‘ಅಂಬೇಡ್ಕರ್ ರಚಿಸಿರುವ ಪುಸ್ತಕಗಳನ್ನು ಓದಿದರೆ ವಿದ್ಯಾರ್ಥಿಗಳು ಜೀವನದಲ್ಲಿ ಏನು ಸಾಧನೆ ಮಾಡಬೇಕೆಂಬ ಕಲ್ಪನೆ ಮೂಡುತ್ತದೆ. ಸಮಾಜಕ್ಕೆ ನಾವು ನೀಡಬೇಕಾದ ಕೊಡುಗೆ ಏನು? ಸಾರ್ವಜನಿಕ ವಲಯದಲ್ಲಿ ಜವಾಬ್ದಾರಿ ಏನು ಎಂಬ ಅರಿವು ಮೂಡುತ್ತದೆ’ ಎಂದು ಬೆಂಗಳೂರು ವಿ.ವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಡಿ.ಡೊಮಿನಿಕ್ ಹೇಳಿದರು.

‘ಎಲ್ಲಾ ಶೋಷಿತ ವರ್ಗದವರಿಗೂ ಮೀಸಲಾತಿ ಕಲ್ಪಿಸಿದ ಅಂಬೇಡ್ಕರ್ ಪರಿನಿಬ್ಬಾಣ ದಿನ ಆಚರಿಸಬೇಕು. ಸಮಾಜದ ಒಳಿತಿಗೆ ದಿಕ್ಸೂಚಿ ರೂಪಿಸಿಕೊಳ್ಳಲು ಇದೊಂದು ಅವಕಾಶ’ ಎಂದು ಅಭಿಪ್ರಾಯಪಟ್ಟರು.

ವಿಚಾರಗಳು ಗೊತ್ತಿಲ್ಲ: ‘ಅಂಬೇಡ್ಕರ್‌ ಅವರ ವಿಚಾರಗಳು ಸಂಪೂರ್ಣವಾಗಿ ಜನರಿಗೆ ಗೊತ್ತಿಲ್ಲ. ಸಮಾಜಕ್ಕೆ ಅವರ ವ್ಯಾಪಕತೆ ತಿಳಿಸುವ ಕೆಲಸ ಆಗಬೇಕು. ಸಮಾಜದಲ್ಲಿ ಎಂತಹ ಪರಿಸ್ಥಿಯಲ್ಲೂ ಸಮಸ್ಯೆ ಇದ್ದೇ ಇರುತ್ತವೆ. ಸಮಸ್ಯೆ ಹೇಗೆ ನಿವಾರಿಸಬಹುದು ಎಂಬುದನ್ನು ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ’ ಎಂದು ಬೆಂಗಳೂರು ವಿ.ವಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಶಶಿಧರ್ ಸ್ಮರಿಸಿದರು.

‘ಅಸ್ಪೃಶತೆಯ ನಿರ್ಮೂಲನೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಕಲ್ಪಿಸುಬ ಉದ್ದೇಶದಿಂದ ಅಂಬೇಡ್ಕರ್‌ ಸಂವಿಧಾನ ರಚಿಸಿದರು. ಆದರೆ, ಆ ಉದ್ದೇಶ ಇಂದಿಗೂ ಈಡೇರಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಭಾಗವಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಬೆಂಗಳೂರು ವಿ.ವಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಕುಮುದಾ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !