ಬುಧವಾರ, ಮಾರ್ಚ್ 3, 2021
19 °C
ಬಿಎಸ್‌ಪಿ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಬಿಎಸ್‌ಪಿ ಕರ್ನಾಟಕ ಉಸ್ತುವಾರಿ ಎಂ.ಎಲ್.ತೋಮರ್‌ ಸಲಹೆ

ಮಾಯಾವತಿ ಪ್ರಧಾನಿಯಾಗಬೇಕಾದರೆ ಪಕ್ಷ ಸಂಘಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ‘ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿಯಾಗಬೇಕಾದರೆ ಕಾರ್ಯಕರ್ತರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು’ ಎಂದು ಬಿಎಸ್‌ಪಿ ಕರ್ನಾಟಕ ಉಸ್ತುವಾರಿ ಎಂ.ಎಲ್.ತೋಮರ್‌ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಬಿಎಸ್‌ಪಿ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.

‘ಪಕ್ಷದ ಕಾರ್ಯಕರ್ತರು ಮನೆ, ಮನೆಗೆ ತೆರಳಿ ಅಂಬೇಡ್ಕರ್, ಕಾನ್ಸಿರಾಮ್, ಪೆರಿಯಾರ್, ನಾಲ್ವಡಿ ಕೃಷ್ಣ ರಾಜ್ ಒಡೆಯರು, ಛತ್ರಪತಿ ಶಾಹು ಮಹಾರಾಜ್ ಮತ್ತು ಮಾಯಾವತಿ ಅವರ ಸಾಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಹರಿರಾಮ್ ಮಾತನಾಡಿ, ‘ನೋಟು ಅಮಾನ್ಯೀಕರಣದಿಂದ ಭಾತರದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಿಜೆಪಿಯವರು ಹಿಂದೆ ಜಾತಿ, ಧರ್ಮದ ಹೆಸರಲ್ಲಿ ಸಮಾಜ ಒಡೆಯುತ್ತಿರುವವರು ಇದೀಗ ದೇವರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಗೊಂದಲ ಸೃಷ್ಟಿಸಿ ಮತ್ತೆ ಚುನಾವಣೆಯಲ್ಲಿ ಗೆಲ್ಲುವ ಅವರ ಪ್ರಯತ್ನ ಕೈಗೂಡುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದು ವರ್ಷಕ್ಕೆ 2 ಕೋಟಿ ಉದ್ಯೋಗ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದ್ದರು. ಅದರ ಬದಲು ಇದೀಗ ಕೋಟಿ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಶ್ರೀಮಂತರ ದುಡ್ಡಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿಯೇ ಮೋದಿ ಅವರು ಇವತ್ತು ಜನಸೇವೆಗಿಂತಲೂ ಹೆಚ್ಚಾಗಿ ಶ್ರೀಮಂತರ ಸೇವೆ ಮಾಡುತ್ತಿದ್ದಾರೆ. ಇನ್ನೂ ಐದು ವರ್ಷ ಅವರ ಕೈಗೆ ಆಡಳಿತ ಕೊಟ್ಟರೆ ಖಂಡಿತ ದೇಶ ಮಾರುತ್ತಾರೆ’ ಎಂದು ಹೇಳಿದರು.

‘ಬಿಜೆಪಿ ಆಡಳಿತದಲ್ಲಿರುವ ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಪೊಲೀಸ್ ಎಸ್‌ಐ ಒಬ್ಬರನ್ನು ಹತ್ಯೆ ಮಾಡಲಾಯಿತು. ಇದು ಅಲ್ಲಿನ ಹದಗೆಟ್ಟ ಕಾನೂನು ಸುವ್ಯವಸ್ಥೆ ಬಿಂಬಿಸುತ್ತದೆ. ಒಬ್ಬ ಸರ್ಕಾರಿ ಅಧಿಕಾರಿಗೆ ಹೀಗಾದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು? ರಾಷ್ಟ್ರಮಟ್ಟದಲ್ಲಿ ಮೋದಿ ಅವರಿಗೆ ಸೆಡ್ಡು ಹೊಡೆಯುವವರು ಯಾರಾದರೂ ಇದ್ದರೆ ಅದು ಮಾಯವತಿ ಅವರು ಮಾತ್ರ. ಹೀಗಾಗಿಯೇ ಎಲ್ಲಾ ಪ್ರಾದೇಶಿಕ ಪಕ್ಷಗಳು ಬಿಎಸ್‌ಪಿ ಜತೆ ಸೇರಲು ಮುಂದಾಗುತ್ತಿವೆ’ ಎಂದರು.

‘ಸುಳ್ಳು ಹೇಳಿ ಬಿಜೆಪಿ ಅಧಿಕಾರಕ್ಕೆ ಬರುವುದಾದರೆ, ಮಾನವಿಯತೆಯ ಸಿದ್ಧಾಂತ ಹೊಂದಿರುವ ಬಿಎಸ್‌ಪಿ ಯಾಕೆ ಅಧಿಕಾರಕ್ಕೆ ಬರಬಾರದು? ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯಾಗುತ್ತದೆ. ಕಾರ್ಯಕರ್ತರು ಪಕ್ಷವನ್ನು ಸಂಘಟಿಸಲು ಪ್ರತಿ ದಿನ ಎರಡು ಗಂಟೆ ಶ್ರಮಿಸಬೇಕು. ಪಕ್ಷವನ್ನು ಹಂತ ಹಂತವಾಗಿ ಗಟ್ಟಿಗೊಳಿಸಬೇಕು’ ಎಂದು ಸಲಹೆ ನೀಡಿದರು.

ಬಿಎಸ್‌ಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಕಾರ್ದರ್ಶಿಗಳಾದ ಪಿ.ವಿ ನಾಗಪ್ಪ, ಬೆಂಗಳೂರು ವಿಭಾಗ ಮಟ್ಟದ ಉಸ್ತುವಾರಿ ಗುರುಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಜುಟ್ಟನಹಳ್ಳಿ ಮುನಿಕೃಷ್ಣ, ಮುಖಂಡರಾದ ಎಂ.ಮುನಿಕೃಷ್ಣಯ್ಯ, ಪುರುಷೋತ್ತಮ್ , ಸೋಮಶೇಖರ್, ಆರ್.ಮುನಿಯಪ್ಪ, ದಿಲೀಪ್ ಕುಮಾರ್, ಮೂರ್ತಿ, ಶ್ರೀನಿವಾಸ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು