ಒತ್ತುವರಿ ತೆರವಿಗೆ ರೈತರ ಆಕ್ರೋಶ

7
ಅತಿಕ್ರಮಣ ತೆರವುಗೊಳಿಸುತ್ತಿದ್ದ ಜೆಸಿಬಿ ತಲೆ ಕೊಟ್ಟು ರೈತನ ಪ್ರತಿರೋಧ, ಗ್ರಾಮಸ್ಥರ ವಿರೋಧದಿಂದ ಬಿಗುವಿನ ವಾತಾವರಣ ನಿರ್ಮಾಣ

ಒತ್ತುವರಿ ತೆರವಿಗೆ ರೈತರ ಆಕ್ರೋಶ

Published:
Updated:
Deccan Herald

ಚಿಕ್ಕಬಳ್ಳಾಪುರ: ತಾಲ್ಲೂಕಿನ ತೌಡನಹಳ್ಳಿಯಲ್ಲಿ ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಮೀಸಲು ಅರಣ್ಯದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಒತ್ತುವರಿದಾರರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.

ತೌಡನಹಳ್ಳಿಯ ಸರ್ವೇ ನಂಬರ್ 12 ರಲ್ಲಿ 1,300 ಎಕರೆ ಮೀಸಲು ಅರಣ್ಯ ಪ್ರದೇಶವಿದೆ. ಆ ಪೈಕಿ ಸುಮಾರು 45 ಎಕರೆಯನ್ನು ತೌಡನಹಳ್ಳಿಯ ಗ್ರಾಮಸ್ಥರು ಒತ್ತುವರಿ ಮಾಡಿಕೊಂಡು ಅನೇಕ ದಶಕಗಳಿಂದ ಉಳುಮೆ ಮಾಡುತ್ತಿದ್ದರು.

ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್‌ ಭದ್ರತೆಯಲ್ಲಿ ಒತ್ತುವರಿ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಂತೆ ಜಮೀನು ಕಳೆದುಕೊಳ್ಳುವವರ ರೋಧನ ಮುಗಿಲು ಮುಟ್ಟಿತ್ತು. ಒಂದು ಹಂತದಲ್ಲಿ ರೋಸಿ ಹೋದ ರೈತ ಮುನಿರಾಜು ಎಂಬುವರು ಜಮೀನು ಕಸಿದುಕೊಳ್ಳದಂತೆ ರೋಧಿಸುತ್ತ, ಜೆಸಿಬಿ ಮಣ್ಣು ತೆಗೆಯುತ್ತಿದ್ದ ಗುಂಡಿಗೆ ಜಿಗಿದು, ಜೆಬಿಸಿ ಅಡಿಗೆ ತಲೆ ಕೊಟ್ಟು ಗೋಳಾಡುತ್ತ ಕಾರ್ಯಾಚರಣೆ ಅಡ್ಡಿಗೆ ಮುಂದಾದರು.

ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು, ಪೊಲೀಸರು ಅವರನ್ನು ಮೇಲೆಕ್ಕೆತ್ತಿ ಪಕ್ಕಕ್ಕೆ ಕರೆದುಕೊಂಡು ಹೋದರು. ಕಾರ್ಯಾಚರಣೆ ಪ್ರದೇಶದಲ್ಲಿ ಗ್ರಾಮಸ್ಥರು ಜಮಾವಣೆಗೊಂಡು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಕಾರಣ ಸ್ಥಳದಲ್ಲಿ ಕೆಲ ಹೊತ್ತು ಉದ್ವಿಗ್ನ ವಾತಾವರಣ ಮನೆ ಮಾಡಿತ್ತು. ಪೊಲೀಸರು ಸ್ಥಳದಲ್ಲಿದ್ದ ಜನರನ್ನು ಚದುರಿಸಿದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ತೆರವು ಕಾರ್ಯಾಚರಣೆ ಮುಂದುವರಿಸಿದರು.

‘ನಾವು ಸುಮಾರು 80 ವರ್ಷಗಳಿಂದ ಇಲ್ಲಿ ಉಳುಮೆ ಮಾಡುತ್ತ ಜೀವನ ಮಾಡುತ್ತಿದ್ದೇವೆ. ಈ ಭೂಮಿ ಬಿಟ್ಟು ನಮಗೆ ಬೇರೆ ಗತಿ ಇಲ್ಲ. ಮಧ್ಯವರ್ತಿಗಳು ಜಮೀನು ನಿಮ್ಮ ಹೆಸರಿಗೆ ದಾಖಲೆ ಮಾಡಿಸಿಕೊಡುತ್ತೇವೆ ಎಂದು ಒಬ್ಬೊಬ್ಬರಿಂದ ₹20, ₹30 ಸಾವಿರಗಟ್ಟಲೇ ಹಣ ಪಡೆದಿದ್ದಾರೆ. ಹಣ ಇಲ್ಲದವರು ಒಡವೆ ಮಾರಿ ಹಣ ಹೊಂದಿಸಿ ಕೊಟ್ಟಿದ್ದಾರೆ. ಆದರೆ ಈವರೆಗೆ ಜಮೀನು ನಮ್ಮ ಹೆಸರಿಗೆ ಮಾಡದೆ ಮೋಸ ಮಾಡಿದ್ದಾರೆ’ ಎಂದು ಗ್ರಾಮದ ಅನೇಕರು ಅಳಲು ತೋಡಿಕೊಂಡರು.

‘ನಾವು ಗಂಜಿ ಕುಡಿದು, ಕಷ್ಟ ಬಿದ್ದು ಜಮೀನು ಹದಗೊಳಿಸಿ 30–40 ವರ್ಷಗಳಿಂದ ಉಳುಮೆ ಮಾಡುತ್ತ ಬದುಕುತ್ತಿದ್ದೇವೆ. ಇದೀಗ ಅಧಿಕಾರಿಗಳು ಹೊಸ ಕಾನೂನು ಬಂದಿದೆ ಎಂದು ಹೇಳಿ ಏಕಾಏಕಿ ತೆರವು ಮಾಡುತ್ತಿದ್ದಾರೆ. ಈ ಕಾನೂನು ಹಿಂದೆಯೇ ಬಂದಿದ್ದರೆ ನಾವು ಹೊಲದ ಆಸೆ ಬಿಟ್ಟು ಹೇಗೋ ಹೊಟ್ಟೆ ಹೊರೆಯುತ್ತಿದ್ದೆವು. ಜಮೀನು ಬಿಟ್ಟು ನಮಗೆ ಬೇರೆ ಗತಿ ಇಲ್ಲ. ಇಳಿ ವಯಸ್ಸಿನಲ್ಲಿ ನಾವು ಎಲ್ಲಿಗೆ ಹೋಗೋಣ’ ಎಂದು ಹಿರಿಯ ಜೀವಗಳು ಕಣ್ಣೀರು ಹಾಕುತ್ತಿದ್ದವು.

ಸಂಜೆ ಹೊತ್ತಿಗೆ ಗ್ರಾಮಸ್ಥರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಮೀನಿನಿಂದ ತಮ್ಮನ್ನು ಒಕ್ಕಲು ಎಬ್ಬಿಸಿದಂತೆ ಸರ್ಕಾರಕ್ಕೆ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ತೆರವು ಕಾರ್ಯಾಚರಣೆ ನಿಲ್ಲಿಸಿ, ತಾವು ಉಳುಮೆ ಮಾಡುತ್ತಿರುವ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !