ಗುರುವಾರ , ಡಿಸೆಂಬರ್ 12, 2019
25 °C

ಸಮರಕ್ಕೆ ಬಿಜೆಪಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜ್ಯದ ಸಮ್ಮಿಶ್ರ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ, ಎಲ್ಲ ಕ್ಷೇತ್ರಗಳಲ್ಲಿ ‌ವಿಫಲವಾಗಿದೆ ಎಂದು ಟೀಕೆ ಮಾಡಿರುವ ಬಿಜೆಪಿ, ದಿನಕ್ಕೊಂದು ವಿಚಾರ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಸದನದಲ್ಲಿ ಮುಗಿಬೀಳಲು ನಿರ್ಧರಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

100 ತಾಲ್ಲೂಕುಗಳು ಬರಪೀಡಿತವಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರು ಅತ್ತ ತಲೆ ಹಾಕಿಲ್ಲ. ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಟೆಂಪಲ್ ರನ್‌ನಲ್ಲಿ ತಲ್ಲೀನರಾಗಿದ್ದಾರೆ. ಕಬ್ಬು ಬೆಳೆಗಾರರು ಸೇರಿದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂಬ ವಿಚಾರಗಳನ್ನು ಮುಖ್ಯವಾಗಿಟ್ಟುಕೊಂಡು ಹೋರಾಟ ನಡೆಸಬೇಕು ಎಂದು ಚರ್ಚಿಸಲಾಯಿತು.

ಉತ್ತರ ಕರ್ನಾಟಕದ ಬಗ್ಗೆ ಮೊದಲಿನಿಂದಲೂ ಕುಮಾರಸ್ವಾಮಿ ಮಲತಾಯಿ ಧೋರಣೆ ತಳೆದಿದ್ದಾರೆ. ಸರ್ಕಾರಿ ಕಚೇರಿಗಳನ್ನು ಬೆಳಗಾವಿ ಸುವರ್ಣ ಸೌಧ ಹಾಗೂ ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಅವರು, ಅದನ್ನು ಮರೆತಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ನಿರ್ಲಕ್ಷ್ಯದ ಕುರಿತು ಧ್ವನಿ ಎತ್ತಬೇಕು. ಈ
ವಿಷಯದಲ್ಲಿ ಸಭಾತ್ಯಾಗಕ್ಕೆ ಸಿದ್ಧರಿರಬೇಕು ಎಂದು ಯಡಿಯೂರಪ್ಪ ಸೂಚಿಸಿದರು.

ಜತೆಗೆ, ವಿವಾದಾಸ್ಪದ ಹೇಳಿಕೆ ನೀಡುವ ನಾಯಕರ ಮಾತುಗಳಿಗೆ ಕಡಿವಾಣ ಹಾಕಬೇಕು. ಇದೇ 21ರವರೆಗೆ ಸದನದ ಕಲಾಪ ನಡೆಯುವಂತೆ ನೋಡಿಕೊಳ್ಳಬೇಕು. ಬಿಜೆಪಿ ಕಲಾಪಕ್ಕೆ ಅಡ್ಡಿಪಡಿಸಿತು ಎಂಬ ಕೆಟ್ಟ ಹೆಸರು ಬಾರದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು ಎಂದು ಗೊತ್ತಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು