ಶನಿವಾರ, ಮಾರ್ಚ್ 6, 2021
18 °C
ಹನಿಟ್ರ್ಯಾಪ್‌ ಜಾಲದಲ್ಲಿ ಸಿಲುಕಿದ್ದ ಉದ್ಯಮಿಯಿಂದ ದೂರು; ಅನ್ನಪೂರ್ಣೇಶ್ವರಿನಗರ ಪೊಲೀಸರಿಂದ ಮಹಿಳೆ ಬಂಧನ

ದೈಹಿಕ ಸಂಪರ್ಕದ ವಿಡಿಯೊ ಹೆಸರಿನಲ್ಲಿ ₹11.62 ಲಕ್ಷ ಕಿತ್ತಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಉದ್ಯಮಿ ಕುಬೇಂದ್ರ ಎಂಬುವರನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ ₹11.62 ಲಕ್ಷ ಕಿತ್ತಿದ್ದ ಆರೋಪದಡಿ ವಿನುತಾ ಎಂಬುವರನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಾನು ಇಷ್ಟವಿರುವುದಾಗಿ ಹೇಳಿ ದೈಹಿಕ ಸಂಪರ್ಕ ಮಾಡಿದ್ದ ವಿನುತಾ, ಅದರ ವಿಡಿಯೊ ತನ್ನ ಬಳಿ ಇರುವುದಾಗಿ ಬೆದರಿಸಿ ಹಣ ಕಿತ್ತುಕೊಂಡಿದ್ದಾರೆ. ಈಗ ಹಣಕ್ಕಾಗಿ ಪುನಃ ಒತ್ತಾಯಿಸುತ್ತಿದ್ದು, ಹಣ ಕೊಡದಿದ್ದರೆ ವಿಡಿಯೊವನ್ನು ನಮ್ಮ ಮನೆಯವರಿಗೆ ತೋರಿಸುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಉದ್ಯಮಿ ದೂರು ನೀಡಿದ್ದರು’ ಪೊಲೀಸರು ಹೇಳಿದರು.

‘ಬಂಧಿತ ವಿನುತಾ, ಗೃಹಿಣಿ. ಅವರಿಗೂ ಕುಬೇಂದ್ರರಿಗೂ ಒಂದೂವರೆ ತಿಂಗಳ ಹಿಂದಷ್ಟೇ ಪರಿಚಯವಾಗಿತ್ತು. ಅವರಿಬ್ಬರ ನಡುವೆ ಸಲುಗೆ ಬೆಳೆದಿತ್ತು. ಅದನ್ನೇ ಮಹಿಳೆ ದುರುಪಯೋಗಪಡಿಸಿಕೊಂಡು ಹಣ ಕಿತ್ತಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು. 

ಉದ್ಯಮಿಯ ದೂರಿನ ವಿವರ: ‘ವಿನುತಾ ಅಲಿಯಾಸ್ ವಿಜಯಲಕ್ಷ್ಮಿ ಜೊತೆ ಪರಿಚಯವಾಗಿ, ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದೆವು. ಅವರು ಮನೆಗೂ ಕರೆದು ನನ್ನನ್ನು ಮಾತನಾಡಿಸುತ್ತಿದ್ದರು. ರಾಮನಗರ ಬಳಿ ಜಮೀನು ಇರುವುದಾಗಿ ಹೇಳಿದ್ದ ಅವರು ಅ. 28ರಂದು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ವಾಪಸ್ ತಮ್ಮ ಮನೆಗೆ ಕರೆದೊಯ್ದಿದ್ದರು’ ಎಂದು ಉದ್ಯಮಿ ಕುಬೇಂದ್ರ, ದೂರಿನಲ್ಲಿ ತಿಳಿಸಿದ್ದಾರೆ.

‘ನನ್ನನ್ನು ಇಷ್ಟಪಡುತ್ತಿರುವುದಾಗಿ ವಿನುತಾ ಹೇಳಿದ್ದರು. ಆಗ, ಇಬ್ಬರೂ ಪರಸ್ಪರ ಒಪ್ಪಿಯೇ ದೈಹಿಕ ಸಂಪರ್ಕ ಮಾಡಿದ್ದೆವು. ಅದಕ್ಕೆ ಪ್ರತಿಯಾಗಿ ಅವರು ₹45 ಸಾವಿರ ಪಡೆದುಕೊಂಡಿದ್ದರು. ನಂತರ ನಿತ್ಯವೂ ಕರೆ ಮಾಡುವುದು ಹಾಗೂ ಸಂದೇಶ ಕಳುಹಿಸುವುದು ಮಾಡುತ್ತಿದ್ದರು’.

‘ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ಫೈನಾನ್ಸ್‌ ಸಾಲ ಕಟ್ಟಬೇಕೆಂದು ಹೇಳಿ ಹಣ ಪಡೆದುಕೊಂಡಿದ್ದರು. ಪದೇ ಪದೇ ಹಣ ಎಲ್ಲಿಂದ ಕೊಡಬೇಕು ಎಂದು ಪ್ರಶ್ನಿಸಿದಾಗ, ‘ನನ್ನ ಬಳಿ ದೈಹಿಕ ಸಂಪರ್ಕದ ವಿಡಿಯೊ ಇದೆ’ ಎಂದು ವಿನುತಾ ಬ್ಲಾಕ್‌ಮೇಲ್ ಮಾಡಲಾರಂಭಿಸಿದ್ದರು. ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿದಾಗ, ‘ನನಗೆ ನೀನು ಏನು ಮಾಡಲು ಆಗುವುದಿಲ್ಲ. ನನ್ನ ಬಳಿ ಪುರಾವೆಗಳು ಇವೆ’ ಎಂದು ಹೇಳಲಾರಂಭಿಸಿದ್ದರು. ಆ ನಂತರವೂ ಅವರಿಗೆ ಹಣ ಕೊಟ್ಟಿದ್ದೇನೆ’ ಎಂದು ಉದ್ಯಮಿ ಹೇಳಿದ್ದಾರೆ. 

‘ಇತ್ತೀಚೆಗೆ ಸೀನು ಎಂಬಾತನಿಂದ ಕರೆ ಮಾಡಿಸಿದ್ದ ಮಹಿಳೆ, ಪುನಃ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆತ ಸಹ ನನ್ನನ್ನು ಬ್ಲಾಕ್‌ಮೇಲ್‌ ಮಾಡಿ ಜೀವ ಬೆದರಿಕೆ ಹಾಕಿದ್ದ. ಅದರಿಂದ ನೊಂದು ದೂರು ಕೊಡುತ್ತಿದ್ದೇನೆ’ ಎಂದು ಉದ್ಯಮಿ ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು