17ಕ್ಕೆ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್ ಜನ್ಮ ಶತಮಾನೋತ್ಸವ

7
ಯೋಗ ವಿ.ವಿ ಸ್ಥಾಪನೆಗೆ ವಿಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್ ಒತ್ತಾಯ

17ಕ್ಕೆ ಯೋಗಾಚಾರ್ಯ ಬಿಕೆಎಸ್ ಅಯ್ಯಂಗಾರ್ ಜನ್ಮ ಶತಮಾನೋತ್ಸವ

Published:
Updated:

ಕೋಲಾರ: ‘ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಜನ್ಮ ಶತಮಾನೋತ್ಸವವನ್ನು ತಾಲ್ಲೂಕಿನ ಬೆಳ್ಳೂರು ಗ್ರಾಮದ ಯೋಗಾಚಾರ್ಯ ಸಭಾಂಗಣದಲ್ಲಿ ಡಿ.17ರಂದು ಹಮ್ಮಿಕೊಳ್ಳಲಾಗಿದೆ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅಯ್ಯಂಗಾರ್‌ ಅವರ ನೆನಪಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಯೋಗ ಮತ್ತು ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಶತಮಾನೋತ್ಸವ ದಿನದಂದು ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಯೋಗ ಮತ್ತು ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ತಾಲ್ಲೂಕಿನ ರಮಾಮಣಿ ನಗರ ಸೂಕ್ತ ಸ್ಥಳವಾಗಿದೆ. ಅದಕ್ಕೆ ಪೂರಕವಾದ ಎಲ್ಲಾ ಸೌಕರ್ಯ ಇಲ್ಲಿವೆ. ಅಯ್ಯಂಗಾರ್‌ ಅವರ ಜನ್ಮಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲೇ ವಿ.ವಿ ಸ್ಥಾಪನೆ ಘೋಷಣೆ ಹೊರ ಬಿದ್ದರೆ ಸೂಕ್ತ’ ಎಂದು ಹೇಳಿದರು.

‘ವಿಶ್ವ ವಿಖ್ಯಾತಿ ಗಳಿಸಿದರೂ ಅಯ್ಯಂಗಾರ್‌ ತಮ್ಮ ಹುಟ್ಟೂರಾದ ಬೆಳ್ಳೂರನ್ನು ಮರೆಯಲಿಲ್ಲ. ಅವರು ಇಲ್ಲಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಪದವಿವರೆಗೂ ಉಚಿತ ಶಿಕ್ಷಣ ಸೌಲಭ್ಯ, ಆರೋಗ್ಯ ಸೇವೆ ಸಿಗುತ್ತಿದೆ. 1967ರಲ್ಲಿ ಬೆಳ್ಳೂರಿನಲ್ಲಿ ಸರ್ಕಾರಿ ಶಾಲೆ ಆರಂಭಿಸಿದ ಅವರು ನಂತರ ಶಾಲೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದರು. ಅವರು ಈ ಭಾಗದ ಜನರ ಆರಾಧ್ಯ ದೈವ’ ಎಂದು ಸ್ಮರಿಸಿದರು.

‘ಅಧ್ಯಾತ್ಮಕ್ಕೂ ಹೆಚ್ಚು ಒತ್ತು ನೀಡಿದ್ದ ಅಯ್ಯಂಗಾರ್‌ ಅವರು ಬೆಳ್ಳೂರಿನ ವಾಲ್ಮೀಕಿ, ಪತಂಜಲಿ ದೇವಾಲಯ ನಿರ್ಮಿಸುವ ಜತೆಗೆ ಗ್ರಾಮದ ಎಲ್ಲಾ ದೇವಾಲಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. 2006ರಲ್ಲಿ ರಮಾಮಣಿ ಸುಂದರರಾಜ ಅಯ್ಯಂಗಾರ್ ಆಸ್ಪತ್ರೆ ಆರಂಭಿಸಿ ಉಚಿತವಾಗಿ ಆರೋಗ್ಯ ಸೇವೆ ಕಲ್ಪಿಸಿದ್ದಾರೆ’ ಎಂದರು.

ಪುಣೆಯಲ್ಲಿ ಹುಟ್ಟು ಹಬ್ಬ: ‘ಮಹಾರಾಷ್ಟ್ರದ ಪುಣೆಯಲ್ಲಿ ಡಿ.14ರಂದು ಅಯ್ಯಂಗಾರ್‌ರ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಅಲ್ಲಿಗೆ 1,500ಕ್ಕೂ ಹೆಚ್ಚು ವಿದೇಶಿ ಗಣ್ಯರು ಈಗಾಗಲೇ ಆಗಮಿಸಿದ್ದಾರೆ’ ಎಂದು ಬೆಳ್ಳೂರು ಕೃಷ್ಣಮಾಚಾರ್ ಮತ್ತು ಶೇಷಮ್ಮ ಸ್ಮಾರಕ ನಿಧಿ ಟ್ರಸ್ಟ್ ಅಧ್ಯಕ್ಷ ಭಾಷ್ಯಂ ರಘು ಮಾಹಿತಿ ನೀಡಿದರು.

‘ಬೆಳ್ಳೂರಿನ ರಮಾಮಣಿ ನಗರದಲ್ಲಿ ನಡೆಯುವ ಜನ್ಮ ಶತಮಾನೋತ್ಸವದಲ್ಲಿ 3 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ ಸಾನಿಧ್ಯ ವಹಿಸುತ್ತಾರೆ. ಶಾಸಕ ಕೆ.ಶ್ರೀನಿವಾಸಗೌಡ, ಸಿಬಿಐ ನಿವೃತ್ತ ನಿರ್ದೇಶಕ ಡಿ.ಆರ್.ಕಾರ್ತಿಕೇಯನ್, ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್, ಎಸ್‍ಎಲ್‌ಕೆ ಸಮೂಹ ಸಂಸ್ಥೆ ಮುಖ್ಯಸ್ಥ ಪಾರ್ಥ ಅಮಿನ್ ಭಾಗವಹಿಸುತ್ತಾರೆ’ ಎಂದು ತಿಳಿಸಿದರು.

ಅಂಚೆ ಲಕೋಟೆ: ‘ಜನ್ಮ ಶತಮಾನೋತ್ಸವದಲ್ಲಿ ಅಯ್ಯಂಗಾರ್‌ ಅವರ ಹೆಸರಿನಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲಾಗುತ್ತಿದೆ. 2019ರ ಜ.20ರಂದು ಪುಣೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ. ಬಾಷ್‌ ಕಂಪನಿ ಸಹಯೋಗದೊಂದಿಗೆ ಈ ಭಾಗದ ನಿರುದ್ಯೋಗಿಗಳಿಗೆ ಕೌಶಲ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಪ್ರೌಢ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ ಮತ್ತು ಊಟ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಟ್ರಸ್ಟ್ ಸದಸ್ಯ ಕೆ.ಅನಂತಕೃಷ್ಣ ಹಾಜರಿದ್ದರು.

ಇದನ್ನೂ ಓದಿ...

ಯೋಗ ತಂತ್ರಗಳ ಬಗ್ಗೆ 14 ಗ್ರಂಥ ರಚಿಸಿದ ಯೋಗಾಚಾರ್ಯ ಬಿಕೆಎಸ್‌ ಅಯ್ಯಂಗಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !