ಸೋಮವಾರ, ಮೇ 17, 2021
23 °C
ನರಸಾಪುರ ಕೆರೆಯಿಂದ ದೊಡ್ಡವಲ್ಲಭಿ ಕೆರೆಗೆ ಕೊಳಚೆ ನೀರು ಹರಿದ ವದಂತಿ

ಕೆ.ಸಿ ವ್ಯಾಲಿ ಬಗ್ಗೆ ಅಪಪ್ರಚಾರ: ಡಿ.ಸಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಮಾನದಂಡದ ಪ್ರಕಾರವೇ ಜಿಲ್ಲೆಯ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಸಲಾಗುತ್ತಿದೆ. ಆದರೆ, ಕೆಲವರು ನೀರಿನ ಗುಣಮಟ್ಟದ ವಿಚಾರವಾಗಿ ವದಂತಿ ಹಬ್ಬಿಸಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

ಕೆ.ಸಿ ವ್ಯಾಲಿ ಯೋಜನೆಯಿಂದ ತಾಲ್ಲೂಕಿನ ದೊಡ್ಡವಲ್ಲಭಿ ಕೆರೆಗೆ ಕೊಳಚೆ ನೀರು ಹರಿದು ಬರುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮತ್ತು ಚಿತ್ರ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಯೋಜನೆ ವ್ಯಾಪ್ತಿಯ ನರಸಾಪುರ ಕೆರೆ ಹಾಗೂ ದೊಡ್ಡವಲ್ಲಬಿ ಕೆರೆಯ ಸಂಪರ್ಕ ಕಾಲುವೆಯನ್ನು ಗುರುವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬರಪೀಡಿತ ಜಿಲ್ಲೆ ಕೋಲಾರಕ್ಕೆ ಕೆ.ಸಿ ವ್ಯಾಲಿ ಯೋಜನೆ ನೀರು ವರದಾನವಾಗಿದೆ. ಕೆಲವರು ಯೋಜನೆಯ ನೀರಿನ ಗುಣಮಟ್ಟದ ಸಂಬಂಧ ಆಧಾರರಹಿತ ಅಪಪ್ರಚಾರ ಮಾಡುತ್ತಿದ್ದಾರೆ. ಜನಪರ ಯೋಜನೆ ಬಗ್ಗೆ ಜನರಲ್ಲಿ ಆತಂಕ ಹುಟ್ಟಿಸುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ನೀರಿನ ಕಾಲುವೆ, ಗ್ರಾಮದ ಎ ಮತ್ತು ಬಿ ಬ್ಲಾಕ್‌ ಪರಿಶೀಲಿಸಿದ ಜಿಲ್ಲಾಧಿಕಾರಿ, ‘ನರಸಾಪುರ ಗ್ರಾಮದಲ್ಲಿ 7,500 ಜನಸಂಖ್ಯೆ ಮತ್ತು 2500 ಮನೆಗಳಿವೆ. ಗ್ರಾಮದ ಎ ಬ್ಲಾಕ್‌ನಲ್ಲಿ ಸಂಪೂರ್ಣವಾಗಿ ಮತ್ತು ಬಿ ಬ್ಲಾಕ್‌ನಲ್ಲಿ ಶೇ 30ರಷ್ಟು ಮನೆಗಳಲ್ಲಿ ಒಳಚರಂಡಿ ವ್ಯವಸ್ಥೆ (ಯುಜಿಡಿ) ಇಲ್ಲ. ಹೀಗಾಗಿ ಮನೆ ಮಾಲೀಕರು ಕೊಳಚೆ ನೀರು ಮತ್ತು ಮಲಮೂತ್ರವನ್ನು ನೇರವಾಗಿ ನೀರಿನ ಕಾಲುವೆಗೆ ಹರಿಬಿಟ್ಟಿದ್ದಾರೆ. ಈ ನೀರು ಕಾಲುವೆ ಮೂಲಕ ದೊಡ್ಡವಲ್ಲಬಿ ಕೆರೆಗೆ ಹರಿದು ಬರುತ್ತಿದೆ’ ಎಂದು ಹೇಳಿದರು.

‘ಕೆರೆ ನೀರಿನ ಜತೆ ಕೊಳಚೆ ನೀರು ಸೇರಿ ಕೆರೆ ಸೌಂದರ್ಯ ಹಾಳಾಗುತ್ತಿದೆ. ಮನೆಗಳ ಕೊಳಚೆ ನೀರು ಸಮಸ್ಯೆಗೆ ಮೂಲ ಕಾರಣವಾಗಿದ್ದು, ಮನೆ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಿ ಕೊಳಚೆ ನೀರು ನಿಲ್ಲಿಸುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಲಾಗಿದೆ. ಮನೆಗಳಲ್ಲಿ ಆದಷ್ಟು ಬೇಗ ಮಲದ ಗುಂಡಿ ನಿರ್ಮಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಯುಜಿಡಿಗೆ ಮನವಿ: ‘ಗ್ರಾಮವು ಬೆಟ್ಟದ ತಪ್ಪಲಿನಲ್ಲಿದ್ದು, ಶೌಚಾಲಯದ ಪಾಯಕ್ಕೆ ಭೂಮಿ ಅಗೆದರೆ ನೀರು ಜಿನುಗುತ್ತದೆ. ಹೀಗಾಗಿ ಬೇರೆ ದಾರಿ ಕಾಣದೆ ಕಾಲುವೆಗೆ ಮನೆಯ ಕೊಳಚೆ ನೀರು ಹರಿಸುತ್ತಿದ್ದೇವೆ. ಯುಜಿಡಿ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ನರಸಾಪುರದಲ್ಲಿ ಯುಜಿಡಿ ಕಾಮಗಾರಿ ನಡೆಸಲು ಶೀಘ್ರವೇ ಅನುಮೋದನೆ ನೀಡುತ್ತೇವೆ. ಕೂಡಲೇ ನೀಲಿನಕ್ಷೆ ತಯಾರಿಸಿ ಕಾಮಗಾರಿ ಆರಂಭಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸುತ್ತೇವೆ’ ಎಂದು ಭರವಸೆ ನೀಡಿದರು.

‘ಕೈಗಾರಿಕಾ ಪ್ರದೇಶಾಭಿವೃದ್ಧಿ ಅನುದಾನದಡಿ ಗ್ರಾಮದಲ್ಲಿ ಯುಜಿಡಿ ಕಾಮಗಾರಿ ನಡೆಸಲು 2017ರಲ್ಲೇ ಅನುಮೋದನೆ ನೀಡಿದ್ದೇವೆ. ಈ ಸಂಬಂಧ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗೆ ಪ್ರಸ್ತಾವ ಸಹ ಸಲ್ಲಿಸಿದ್ದೇವೆ’ ಎಂದು ನರಸಾಪುರ ಗ್ರಾ.ಪಂ ಸದಸ್ಯರು ವಿವರಿಸಿದರು.

ಸಂಸ್ಕರಣಾ ಘಟಕ: ‘ನರಸಾಪುರದ ಬಂಜರಗುಂಟೆ ಸ್ಥಳದಲ್ಲಿ 2.7 ಎಕರೆ ಸರ್ಕಾರಿ ಜಾಗವಿದ್ದು, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಆರಂಭಿಸಲು ಗ್ರಾ.ಪಂ ಸದಸ್ಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ನರಸಾಪುರವು ಹೋಬಳಿ ಕೇಂದ್ರ ಆಗಿರುವುದರಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನ ಮತ್ತು ಧ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಗುವುದು. ಪ್ರತಿ ಮನೆಯಲ್ಲಿ ಕಸ ವಿಂಗಡಿಸಿ ವಿಲೇವಾರಿ ಮಾಡಬೇಕು’ ಎಂದು ಸೂಚಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ‘ಶೀಘ್ರವೇ ಮಲದ ಗುಂಡಿ ನಿರ್ಮಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿಯಿಂದ ಎ ಮತ್ತು ಬಿ ಬ್ಲಾಕ್‌ ನಿವಾಸಿಗಳಿಗೆ ನೋಟಿಸ್‌ ನೀಡಿ’ ಎಂದು ಪಿಡಿಒಗೆ ಆದೇಶಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಪಿಡಿಒ ಮಹೇಶ್‌ಕುಮಾರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು