ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

7
ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾದ ಪಾಲಿಕೆ ಸಭೆ

ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

Published:
Updated:
Deccan Herald

ಬೆಂಗಳೂರು: ಬಿಬಿಎಂಪಿಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆಯಬೇಕಿದ್ದ ಚುನಾವಣೆಯನ್ನು ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ದಿಢೀರ್‌ ಮುಂದೂಡಲಾಯಿತು. 

ಬೆಳಿಗ್ಗೆ 11.30ಕ್ಕೆ ಆರಂಭವಾಗಬೇಕಿದ್ದ ಚುನಾವಣಾ ಪ್ರಕ್ರಿಯೆ ಮಧ್ಯಾಹ್ನ 1 ಗಂಟೆ ಕಳೆದರೂ ಆರಂಭವಾಗಲಿಲ್ಲ. 12.30ರ ವೇಳೆಗೆ ಬಿಜೆಪಿ ಸದಸ್ಯರು ಸಭಾಂಗಣದಲ್ಲಿ ಕಾದು ಕುಳಿತಿದ್ದರು. ಚುನಾವಣಾ ಪ್ರಕ್ರಿಯೆ ನಡೆಯದಿದ್ದದ್ದನ್ನು ಕಂಡು ಪ್ರತಿಭಟನೆ ಆರಂಭಿಸಿದರು. ಅದು ತಾರಕಕ್ಕೇರುವ ಲಕ್ಷಣ ಅರಿತ ಮೇಯರ್‌ ಗಂಗಾಂಬಿಕೆ ಸಭಾಂಗಣಕ್ಕೆ ಬಂದು, ‘ಚುನಾವಣೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಲಾಗಿದೆ’ ಎಂದು ಘೋಷಿಸಿದರು.

‘ಚುನಾವಣಾ ಪ್ರಕ್ರಿಯೆಗೆ ಬಿಜೆಪಿ ಸದಸ್ಯರು ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ಚುನಾವಣೆಯನ್ನು ಮುಂದೂಡಲಾಗಿದೆ’ ಎಂದು ಮೇಯರ್‌ ಸುದ್ದಿಗಾರರಿಗೆ ತಿಳಿಸಿದರು. 

ಬೆಳಿಗ್ಗೆಯಿಂದ ನಡೆದ ಹೈಡ್ರಾಮಾ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಮಂಜುಳಾ ನಾರಾಯಣಸ್ವಾಮಿ ಅವರು ಆಕಾಂಕ್ಷಿಯಾಗಿದ್ದರು. ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ದೇವದಾಸ್‌ ಆಕಾಂಕ್ಷಿಯಾಗಿದ್ದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ನ ಸೌಮ್ಯಾ ಶಿವಕುಮಾರ್ ಅವರಿಗೆ ನೀಡಲು ಕಾಂಗ್ರೆಸ್‌– ಜೆಡಿಎಸ್‌ ಮಧ್ಯೆ ಒಪ್ಪಂದ ನಡೆದಿತ್ತು. 

ಈ ಸ್ಥಾನಕ್ಕೆ ನಾಮಪತ್ರ ಸಲ್ಲಿಸದಂತೆ ಶಾಸಕ ಗೋಪಾಲಯ್ಯ ಅವರು ಮಂಜುಳಾ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಪಾಲಿಕೆ ಮೂಲಗಳು ಹೇಳಿವೆ.

ಇತ್ತ ಕಾಂಗ್ರೆಸ್‌ ಸದಸ್ಯರೊಳಗೂ ಭಿನ್ನಾಭಿಪ್ರಾಯ ಇತ್ತು. ವಿವಿಧ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಶಾಸಕ ರಾಮಲಿಂಗಾರೆಡ್ಡಿ ಹರಸಾಹಸ ನಡೆಸಿದರು. ಮನವೊಲಿಕೆಯ ಕಸರತ್ತು ಫಲ ನೀಡಲಿಲ್ಲ. 

ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದ ಭೈರಸಂದ್ರ ವಾರ್ಡ್‍ನ ಬಿಜೆಪಿ ಸದಸ್ಯ ನಾಗರಾಜ್ ಅವರು ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪಕ್ಷ ಅವರಿಗೆ ವಿಪ್‌ ಜಾರಿ ಮಾಡಿತ್ತು. ಈ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಮಮತಾ ಸರವಣ ಅವರನ್ನು ಬೆಂಬಲಿಸಲು ಬಿಜೆಪಿ ಸದಸ್ಯರು ನಿರ್ಧರಿಸಿದ್ದರು.

ಎಲ್ಲ ‘ಅಪಾಯ’ಗಳ ಸೂಚನೆ ಅರಿತ ಕಾಂಗ್ರೆಸ್‌– ಜೆಡಿಎಸ್‌ ಮುಖಂಡರು ಸಭೆ ಮುಂದೂಡಲು ನಿರ್ಧರಿಸಿದರು.

‘ಸರಿಯಾಗಿ ಚುನಾವಣೆ ನಡೆಸಲು ಆಗದೆ ಆಡಳಿತ ಪಕ್ಷದವರು ಪಲಾಯನ ಮಾಡಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಲೇವಡಿ ಮಾಡಿದರು. ಸಂಭವನೀಯ ಅಧ್ಯಕ್ಷರ ಬೆಂಬಲಿಗರು ದೊಡ್ಡ ಹೂಗುಚ್ಛಗಳನ್ನು ಹಿಡಿದು ಸಭಾಂಗಣದ ಹೊರಗೆ ಕಾದಿದ್ದರು. ಸಭೆ ಮುಂದೂಡಿದ ಕಾರಣ ನಿರಾಶರಾಗಿ ವಾಪಸಾದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !