ದೇಗುಲ ಪ್ರವೇಶಿಸಿದವರ ಬಂಧನಕ್ಕೆ ಆಗ್ರಹ

7
ಶಬರಿಮಲೆ ಹಿತರಕ್ಷಣಾ ಸಮಿತಿ ಮತ್ತು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳಿಂದ ನಗರದಲ್ಲಿ ಪ್ರತಿಭಟನೆ, ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಕೆ

ದೇಗುಲ ಪ್ರವೇಶಿಸಿದವರ ಬಂಧನಕ್ಕೆ ಆಗ್ರಹ

Published:
Updated:
Prajavani

ಚಿಕ್ಕಬಳ್ಳಾಪುರ: ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ತರುವ ಉದ್ದೇಶದಿಂದಲೇ ಪೊಲೀಸರ ರಕ್ಷಣೆಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸಿದ ಇಬ್ಬರು ಮಹಿಳೆಯರನ್ನು ಬಂಧಿಸಿ, ಶಿಕ್ಷಿಸುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಶಬರಿಮಲೆ ಹಿತರಕ್ಷಣಾ ಸಮಿತಿ ಮತ್ತು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ನಗರದ ಬಿ.ಬಿ.ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯದಿಂದ ತಾಲ್ಲೂಕು ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಧರ್ಮ ಜಾಗರಣ ಸಂಘಟನೆಯ ಕರ್ನಾಟಕ ದಕ್ಷಿಣ ಪ್ರಾಂತ ನಿಧಿ ಪ್ರಮುಖ್ ಮೋಕ್ಷಗುಂಡಂ ವೇಣುಗೋಪಾಲ್, ‘ಸಿಪಿಎಂ ಬೆಂಬಲಿಗರಾದ ಕನಕದುರ್ಗ, ಬಿಂದು ಅವರು 18 ಮೆಟ್ಟಿಲು ಹತ್ತುವ ಬದಲು ವಿಐಪಿ ಸಾಲಿನ ಮೂಲಕ ಸ್ವಾಮಿಯ ದರ್ಶನ ಮಾಡಿ ಬಂದ್ದಿದಾರೆ. ಈ ಮೂಲಕ ಕೇರಳ ಸರ್ಕಾರ ಅಯ್ಯಪ್ಪಸ್ವಾಮಿ ಭಕ್ತರ ನಂಬಿಕೆ, ಹಿಂದೂ ಸಂಪ್ರದಾಯ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ಕೆಲಸ ಮಾಡಿದೆ’ ಎಂದು ಆರೋಪಿಸಿದರು.

‘ಅಯ್ಯಪ್ಪ ದೇಗುಲವನ್ನು 10 ವರ್ಷದಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬ ಸಂಪ್ರದಾಯವನ್ನು ಈ ಇಬ್ಬರು ಮಹಿಳೆಯರು ಉಲ್ಲಂಘನೆ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ಶಾಂತಿ ಕದಡಲು ಈ ರೀತಿ ನಡೆದುಕೊಂಡಿದ್ದಾರೆ. ಇರುಮುಡಿ ತುಪ್ಪವನ್ನು ದೇವರಿಗೆ ಅರ್ಪಿಸದೇ ಪಾವಿತ್ರ್ಯ ಹಾಳು ಮಾಡುವ ಉದ್ದೇಶವನ್ನಷ್ಟೇ ಇರಿಸಿಕೊಂಡಿದ್ದರು’ ಎಂದು ದೂರಿದರು.

‘ಎಡ ಪಂಥೀಯ ಸಂಘಟನೆಗಳು ಮುಂದಿನ ದಿನಗಳಲ್ಲಿ ಕರ್ನಾಟಕದ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಚಟುವಟಿಕೆಗಳನ್ನು ಹತ್ತಿಕ್ಕಲು ವ್ಯವಸ್ಥಿತ ಸಂಚು ಮಾಡುವ ಸಂಶಯ ಉಂಟಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಪ್ರಮುಖ ದೇವಸ್ಥಾನಗಳಿಗೆ ವಿಶೇಷ ಭದ್ರತೆ ನೀಡಬೇಕು. ಹಿಂದುಗಳ ಧಾರ್ಮಿಕ ಭಾವನೆ ಹತ್ತಿಕ್ಕುವ ಪ್ರಯತ್ನ ನಡೆಯು ತ್ತಿರುವರಿಂದ ಇಂತಹ ಸಂಘಟನೆಗಳನ್ನು ಪತ್ತೆ ಮಾಡಿ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.

ಶಬರಿಮಲೆ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಾಮ ಸುಬ್ಬಾರೆಡ್ಡಿ ಮಾತನಾಡಿ, ‘ಹಿಂದೂಗಳ ಭಕ್ತಿ ಮತ್ತು ಭಾವನೆಗೆ ಧಕ್ಕೆ ಆದಾಗ ಭಕ್ತರು ಹೋರಾಟ ನಡೆಸಬೇಕು. ಶಬರಿಮಲೆಯ ಪಾವಿತ್ರ್ಯ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸುಪ್ರೀಂಕೋರ್ಟ್‌ ತೀರ್ಪು ಮರುಪರಿಶೀಲಿಸಿ, ಭಕ್ತರಿಗೆ ಒಳಿತು ಮಾಡಲೇಬೇಕು’ ಎಂದು ಆಗ್ರಹಿಸಿದರು.

‘ಸನಾತನ ಧರ್ಮದ ಮೇಲೆ ನಡೆಯುತ್ತಿರುವ ಇಂತಹ ಆಘಾತಕಾರಿ ಬೆಳವಣಿಗಳು ಹಿಂದೂಗಳಲ್ಲಿ ಆತಂಕ ಹುಟ್ಟಿಸಿವೆ. ಕೇರಳವು ದೇವರ ನಾಡು ಹೋಗಿ ರಾಕ್ಷಸರ ನಾಡಾಗಿದೆ. ಶಬರಿಮಲೆಗೆ ತೆರಳಲು ಪುರುಷರಿಗೂ ನಿಯಮವಿದೆ. ಮಹಿಳೆಯರು ತೆರಳಬಾರದೆಂದು ಎಲ್ಲೂ ಹೇಳಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿನಿಂದ ಧಾರ್ಮಿಕ ಭಾವನೆಗೆ ಘಾಸಿಯಾಗಿದೆ’ ಎಂದು ಹೇಳಿದರು.

ವಿವಿಧ ಸಂಘಟನೆಗಳ ಮುಖಂಡರಾದ ಗಿರೀಶ್ ಗುರುಸ್ವಾಮಿ, ಅನೀಲ್, ಅಗಲಗುರ್ಕಿ ಚಂದ್ರಶೇಖರ್, ಬೈರೇಗೌಡ, ಕಿರಣ್, ಪ್ರೇಮಲೀಲಾ ವೆಂಕಟೇಶ್‌, ಲಕ್ಷ್ಮೀನಾರಾಯಣ ಗುಪ್ತಾ, ನವೀನ್‌ಕುಮಾರ್, ಪತಿ, ನರಸಿಂಹಾಚಾರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !