ಸಮಸ್ಯೆಗಳ ಸರಮಾಲೆ: ಬದುಕು ನರಕ ಸದೃಶ

7
27ನೇ ವಾರ್ಡ್‌ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಮರೀಚಿಕೆ

ಸಮಸ್ಯೆಗಳ ಸರಮಾಲೆ: ಬದುಕು ನರಕ ಸದೃಶ

Published:
Updated:
Prajavani

ಕೋಲಾರ: ನಗರಸಭೆ ಆಡಳಿತ ಯಂತ್ರವು 27ನೇ ವಾರ್ಡ್‌ನ ಅಭಿವೃದ್ಧಿ ನಿರ್ಲಕ್ಷಿಸಿದ್ದು, ಸ್ಥಳೀಯರ ಮೂಲಸೌಕರ್ಯದ ಕೂಗು ಅರಣ್ಯರೋದನವಾಗಿದೆ.

ಶಾಂತಿನಗರ, ಶಿವಗಿರಿನಗರ, ಭೋವಿ ಕಾಲೊನಿ, ಸಂತೆ ಮೈದಾನ ಬಡಾವಣೆಗಳನ್ನು ಒಳಗೊಂಡಿರುವ ಈ ವಾರ್ಡ್‌ನಲ್ಲಿ ಸುಮಾರು 1,800 ಮನೆಗಳಿವೆ. ಜನಸಂಖ್ಯೆ 5 ಸಾವಿರದ ಗಡಿ ದಾಟಿದ್ದು, ದಿನದಿಂದ ದಿನಕ್ಕೆ ಮನೆಗಳ ಸಂಖ್ಯೆ ಹೆಚ್ಚುತ್ತಿದೆ.

ನೀರು, ಕಸ, ಸ್ವಚ್ಛತೆ, ಚರಂಡಿ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಮೂಲಸೌಕರ್ಯ ಸಮಸ್ಯೆ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು. ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಹಾಗೂ ಅಧಿಕಾರಿಗಳು ಸಮಸ್ಯೆ ಪರಿಹರಿಸದೆ ಕೈಚೆಲ್ಲಿದ್ದು, ಸ್ಥಳೀಯರ ಅಳಲು ಕೇಳುವವರಿಲ್ಲ.

ನಗರದ ಇತರೆ ಬಡಾವಣೆಗಳಂತೆಯೇ ಶಾಂತಿನಗರದ ಕೆಲವೆಡೆ ನೀರಿನ ಸಮಸ್ಯೆ ಗಂಭೀರವಾಗಿದೆ. ವಾರ್ಡ್‌ನ ವ್ಯಾಪ್ತಿಯಲ್ಲಿ 10 ಕೊಳವೆ ಬಾವಿಗಳಿದ್ದರೂ 6 ಮಾತ್ರ ಸುಸ್ಥಿತಿಯಲ್ಲಿವೆ. 4 ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಶಾಂತಿನಗರದಲ್ಲಿ ರಾಜಕಾಲುವೆಗೆ ಹೊಂದಿಕೊಂಡಂತಿರುವ ಮನೆಗಳ ನಲ್ಲಿಯಲ್ಲಿ ನೀರು ಬಂದು ನಾಲ್ಕೈದು ತಿಂಗಳಾಗಿದೆ.

ಈ ಭಾಗದಲ್ಲಿ ರಸ್ತೆಗಳು ತುಂಬಾ ಕಿರಿದಾಗಿರುವ ಕಾರಣ ಟ್ಯಾಂಕರ್‌ಗಳ ಸಂಚಾರಕ್ಕೆ ಹೆಚ್ಚಿನ ಸ್ಥಳಾವಕಾಶವಿಲ್ಲ. ಹೀಗಾಗಿ ನಗರಸಭೆಯ ಟ್ಯಾಂಕರ್‌ ಚಾಲಕರು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಾರೆ. ನೀರಿನ ಸಮಸ್ಯೆಯಿಂದ ರೋಸಿ ಹೋಗಿರುವ ಸಾರ್ವಜನಿಕರು ಖಾಸಗಿ ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ. ಟ್ಯಾಂಕರ್‌ ಲೋಡ್‌ ನೀರಿಗೆ ₹ 500 ಇದ್ದು, ಸ್ಥಳೀಯರು ದುಡಿಮೆಯ ಬಹುಪಾಲು ಹಣವನ್ನು ನೀರು ಖರೀದಿಗೆ ಖರ್ಚು ಮಾಡುವ ಪರಿಸ್ಥಿತಿ ಇದೆ.

ಚರಂಡಿ ಅವಾಂತರ: ವಾರ್ಡ್‌ನ ಬಹುಪಾಲು ಚರಂಡಿಗಳನ್ನು ಏಳೆಂಟು ತಿಂಗಳಿಂದ ಸ್ವಚ್ಛಗೊಳಿಸಿಲ್ಲ. ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದು, ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಹಲವೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದು ನಿಂತು ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಮಳೆಗಾಲದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ.

ಕೊಳೆಗೇರಿಯಾದ ವಾರ್ಡ್‌: ವಾರ್ಡ್‌ನಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳ್ಳ ತಪ್ಪಿದ್ದು, ನೈರ್ಮಲ್ಯ ಸಮಸ್ಯೆ ಎದುರಾಗಿದೆ. ವಾರ್ಡ್‌ನಲ್ಲಿ ಬೆರಳೆಣಿಕೆ ಪೌರ ಕಾರ್ಮಿಕರಿದ್ದು, ಪ್ರತಿನಿತ್ಯ ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ವಾರ್ಡ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿಲ್ಲ. ಹೀಗಾಗಿ ಸ್ಥಳೀಯರು ರಸ್ತೆ ಬದಿಯಲ್ಲಿ, ಚರಂಡಿಗಳ ಪಕ್ಕ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಎಸೆಯುತ್ತಿದ್ದಾರೆ. ಕಸವು ಚರಂಡಿ ಹಾಗೂ ರಸ್ತೆಗಳಿಗೆ ಹರಡಿಕೊಂಡಿದ್ದು, ಇಡೀ ವಾರ್ಡ್‌ ಕೊಳೆಗೇರಿಯಂತಾಗಿದೆ.

ಖಾಲಿ ಜಾಗದಲ್ಲಿ ರಾಶಿಯಾಗಿ ಬಿದ್ದಿರುವ ಕಸದ ತೆರವಿಗೆ ಪೌರ ಕಾರ್ಮಿಕರು ಕ್ರಮ ಕೈಗೊಂಡಿಲ್ಲ. ಇದರಿಂದ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಕಸದ ರಾಶಿಯಿಂದ ಸೊಳ್ಳೆ, ನೊಣ, ಹಂದಿ ಹಾಗೂ ಬೀದಿ ನಾಯಿ ಕಾಟ ಹೆಚ್ಚಿದೆ. ಮೂಲಸೌಕರ್ಯ ಸಮಸ್ಯೆಯಿಂದ ಸ್ಥಳೀಯರ ಬದುಕು ನರಕ ಸದೃಶವಾಗಿದೆ.

ಅಂಕಿ ಅಂಶ.....
* 1,800 ಮನೆಗಳು ವಾರ್ಡ್‌ನಲ್ಲಿವೆ
* 5 ಸಾವಿರ ದಾಟಿದ ಜನಸಂಖ್ಯೆ
* 6 ಕೊಳವೆ ಬಾವಿಗಳು
* ₹ 500 ಟ್ಯಾಂಕರ್ ನೀರಿನ ದರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !