ದೊಡ್ಡ ಭಿತ್ತಿಯ ಮೇಲೆ ಎನ್‌ಟಿಆರ್ ಬದುಕು

7

ದೊಡ್ಡ ಭಿತ್ತಿಯ ಮೇಲೆ ಎನ್‌ಟಿಆರ್ ಬದುಕು

Published:
Updated:
Prajavani

ಚಿತ್ರ: ಎನ್‌ಟಿಆರ್–ಕಥಾನಾಯಕುಡು (ತೆಲುಗು)
ನಿರ್ದೇಶನ: ಕೃಷ್ (ರಾಧಾಕೃಷ್ಣ ಜಗರ್ಲಮುಂದಿ)
ನಿರ್ಮಾಣ: ನಂದಮೂರಿ ಬಾಲಕೃಷ್ಣ, ಸಾಯಿ ಕೊರ್ರಪಾಟಿ, ವಿಷ್ಣು ಇಂದೂರಿ
ತಾರಾಗಣ: ನಂದಮೂರಿ ಬಾಲಕೃಷ್ಣ, ವಿದ್ಯಾಬಾಲನ್, ಪ್ರಕಾಶ್ ರಾಜ್, ರಕುಲ್ ಪ್ರೀತ್ ಸಿಂಗ್.

---

ಎನ್‌.ಟಿ. ರಾಮರಾವ್ ಬದುಕಿನ ಗ್ರಾಫುಗಳ ಬಹುತೇಕ ಗೆರೆಗಳು ಅವರ ಬೆಳವಣಿಗೆಯನ್ನು ಗಮನಿಸಿಕೊಂಡು ಬಂದ ಒಂದು ವರ್ಗಕ್ಕೆ ಗೊತ್ತೇ ಇದೆ. ಅದರಲ್ಲೂ ಸಿನಿಮೋಹಿಗಳಿಗೆ ಅವರ ಕಾಲದ ಚಲನಚಿತ್ರಗಳ ಪ್ರಯೋಗಶೀಲತೆಯ ಅರಿವು ಚೆನ್ನಾಗೇ ಇದ್ದಿರಲಿಕ್ಕೆ ಸಾಕು. ಆದರೆ, ಹೀಗೆ ತಿಳಿದಿರುವ ಸಂಗತಿಗಳನ್ನು ದೃಶ್ಯವತ್ತಾಗಿ ಮರುಸೃಷ್ಟಿಸುವುದು ದೊಡ್ಡ ಸವಾಲು. ನಿರ್ದೇಶಕ ಕೃಷ್ ಅಂಥ ಸವಾಲಿಗೆ ಎದೆಗೊಟ್ಟಿದ್ದಾರೆ.

ಕೃಷಿ ಹಿನ್ನೆಲೆ, ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿನ ಕೆಲಸ ಎರಡನ್ನೂ ಅಭಿನಯದ ಪ್ರೀತಿಗಾಗಿ ತೊರೆದು, ಸ್ಟಾರ್‌ಗಿರಿಯ ಪ್ರಭೆಯನ್ನು ಮುಡಿಗೆ ಸಿಕ್ಕಿಸಿಕೊಳ್ಳುವ ನಾಯಕನಾಗಿ ಎನ್‌ಟಿಆರ್‌ ಬೆಳೆದ ಬಗೆ ಸಿನಿಮಾದಲ್ಲಿ ಮೇಲುನೋಟಕ್ಕೆ ಕಾಣುತ್ತದೆ. ನಿರ್ದೇಶಕರ ಉದ್ದೇಶ ಇದಕ್ಕಷ್ಟೇ ಸೀಮಿತವಾಗದೆ ಅವರಲ್ಲಿ ರಾಜಕೀಯದ ಆಸಕ್ತಿ ಮೊಳೆತದ್ದು ಹೇಗೆ ಎನ್ನುವುದರತ್ತಲೂ ಚಾಚಿಕೊಂಡಿರುವುದು ಆಸಕ್ತಿಕರ. ‘ತೆಲುಗು ದೇಸಂ’ ಪಕ್ಷವನ್ನು ಅವರು ಘೋಷಿಸುವುದರೊಂದಿಗೆ ಸಿನಿಮಾ ಮುಗಿಯುತ್ತದೆ.

ಎನ್‌ಟಿಆರ್‌ ಬದುಕಿನ ಕ್ಯಾನ್ವಾಸ್‌ ತುಂಬಾ ವಿಸ್ತೃತವಾದುದು. ನಟನಾಗಿ, ನಿರ್ಮಾಪಕನಾಗಿ ಅವರು ಹಲವು ಪ್ರಯೋಗಗಳಿಗೆ ಎದೆಗೊಟ್ಟವರು. ಕೃಷ್ಣ, ಬೃಹನ್ನಳೆಯಾಗಿ ಅಭಿನಯಿಸಿದ್ದಷ್ಟೇ ಅಲ್ಲದೆ ರಾವಣನ ಹನ್ನೊಂದು ತಲೆಗಳು ಕಾಣುವಂತೆ ಮಾಡಲು ತಾಸುಗಟ್ಟಲೆ ಒಂದೇ ಭಂಗಿಯಲ್ಲಿ ನಿಂತವರು. ತ್ರಿಪಾತ್ರಗಳಲ್ಲಿ ಕಾಣಿಸಿಕೊಂಡೂ ತಾವೇ ನಿರ್ದೇಶಕನ ಟೊಪ್ಪಿಯನ್ನೂ ತೊಟ್ಟ ಅವರು, ಸುಯೋಧನ–ಭಾನುಮತಿಗೆ ಯುಗಳ ಗೀತೆ ಕೊಟ್ಟವರು. ಪೌರಾಣಿಕ ಚಿತ್ರಪ್ರಯೋಗಗಳಿಂದ ಸಾಮಾಜಿಕ ಪಾತ್ರಗಳಿಗೆ ಹೊರಳಿಕೊಂಡದ್ದೂ ರಸ ಪ್ರಸಂಗಗಳೇ. ಸಾಂಸಾರಿಕ ಬದುಕಿನ ಬದ್ಧತೆಯೊಟ್ಟಿಗೆ ಸಿನಿಮಾ ಪ್ರೀತಿಯನ್ನು ಅವರು ಯಾವ ಹಂತದಲ್ಲಿಯೂ ಬಿಟ್ಟುಕೊಡದೇ ಇದ್ದುದಕ್ಕೆ ಅಸಂಖ್ಯ ಉದಾಹರಣೆಗಳಿವೆ.

ನಿರ್ದೇಶಕ ಕೃಷ್ ಇವೆಲ್ಲವನ್ನೂ ರಾಶಿ ಹಾಕಿಕೊಂಡು ಪೋಣಿಸಲು ಹೊರಟಿದ್ದಾರೆ. ಬಿಡಿ ಬಿಡಿಯಾಗಿ ಒಂದೊಂದೂ ದೃಶ್ಯ ಸಿಂಗರಗೊಂಡಂತೆ ಕಾಣುತ್ತದೆ. ಸೆಟ್‌, ಹಳೆಯ ಚಿತ್ರಪಾತ್ರಗಳ ಮರುಸೃಷ್ಟಿ, ಅವೇ ರಾಗಗಳು–ಪರಿಕರಗಳ ಬಳಕೆ ಎಲ್ಲವೂ ಹೆಚ್ಚೇ ಶ್ರಮವನ್ನು ಬೇಡುವಂಥವು. ಆದರೆ, ಎಲ್ಲವನ್ನೂ ಇಡಿಯಾಗಿ ಒಂದು ಬಲವಾದ ಶಿಲ್ಪದಲ್ಲಿ ಬಂಧಿಸಿಡಲು ಅವರಿಗೆ ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿಯೇ ಭಾವದಲ್ಲಿ ನಿರ್ದಿಷ್ಟ ಲಯವಿಲ್ಲ.

ಸಿನಿಮಾ ಶುರುವಾಗುವ ಬಗೆ ಹುಟ್ಟಿಸುವ ಕೌತುಕ ಹತ್ತು ಹದಿನೈದು ದೃಶ್ಯಗಳ ನಂತರ ದುರ್ಬಲವಾಗಲು ಎನ್‌ಟಿಆರ್‌ ಕಾಲದ ಪಾತ್ರಗಳ ಮರುಸೃಷ್ಟಿಯೇ ಕಾರಣವಾಗಿಬಿಡುವುದು ಎದ್ದುಕಾಣುತ್ತದೆ.

ನಂದಮೂರಿ ಬಾಲಕೃಷ್ಣ ತಮ್ಮ ತಂದೆಯ ಪಾತ್ರವನ್ನು ಜೀವಿಸಲು ಈ ವಯಸ್ಸಿನಲ್ಲಿಯೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ವಯಸ್ಸಾದ ಕಾಲದ ಎನ್‌ಟಿಆರ್‌ ಆಗಿ ಅವರು ಹೆಚ್ಚು ಆಪ್ತರಾಗುತ್ತಾರೆ. ಯುವತ್ವಕ್ಕೆ ಬೇಕಾದ ದೇಹ, ಚಹರೆ ಅವರಿಗೆ ಈಗ ಇಲ್ಲದಿರುವ ಕೊರತೆಯನ್ನು ಮೇಕಪ್‌ ಎಷ್ಟು ಸಾಧ್ಯವೋ ಅಷ್ಟೂ ಮುಚ್ಚಲು ಯತ್ನಿಸಿದೆ. ಹೀಗಾಗಿಯೇ ಬಹುತೇಕ ಸನ್ನಿವೇಶಗಳು ‘ಡ್ರಾಮಾ’ದಂತೆ ಭಾಸವಾಗುತ್ತವೆ.

ಎನ್‌ಟಿಆರ್ ಪತ್ನಿ ಬಸವತಾರಕಂ ಪಾತ್ರದಲ್ಲಿ ವಿದ್ಯಾ ಬಾಲನ್ ಅಭಿನಯ ಚೆನ್ನಾಗಿದೆ. ಅವರ ಪಾತ್ರಪೋಷಣೆಗೂ ಹೆಚ್ಚು ಅಂಕ ಸಲ್ಲಬೇಕು. ಪೋಷಕಪಾತ್ರಗಳ ದೊಡ್ಡ ದಂಡೇ ಇದ್ದು, ಅವರನ್ನೆಲ್ಲ ನಿಭಾಯಿಸಿರುವ ಬಗೆ ಹಾಗೂ ಎಲ್ಲರ ಅಭಿನಯ ಕಾಣ್ಕೆ ಗಮನಾರ್ಹ. ನಂದಮೂರಿ ಕಲ್ಯಾಣ ರಾಮ್, ರಾನಾ ದಗ್ಗುಬಾಟಿ, ಪ್ರಕಾಶ್ ರಾಜ್, ರಕುಲ್‌ ಪ್ರೀತ್‌ ಸಿಂಗ್, ಶ್ರಿಯಾ ಸರಣ್, ನಿತ್ಯಾ ಮೆನನ್, ಹಂಸಿಕಾ ಮೋಟ್ವಾನಿ ಹೀಗೆ ಬೇರೆ ಬೇರೆ ವಯೋಮಾನದ ನಟ–ನಟಿಯರು ಗತಕಾಲದ ಕಥೆಗಳ ಪಾತ್ರಗಳಾಗಿ ಮಿಂಚುಹುಳುಗಳಂತೆ ಕೋರೈಸಿದ್ದಾರೆ.

ಬರಹ ಇಷ್ಟವಾಯಿತೆ?

 • 19

  Happy
 • 3

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !