ಕೋಲಾರ: ಜನಜೀವನಕ್ಕೆ ತಟ್ಟದ ಬಂದ್‌ ಬಿಸಿ

7
ಬಸ್‌– ಆಟೊ ಸೇವೆ ಅಬಾಧಿತ: ವಾಣಿಜ್ಯ ವಹಿವಾಟು ಸಹಜ

ಕೋಲಾರ: ಜನಜೀವನಕ್ಕೆ ತಟ್ಟದ ಬಂದ್‌ ಬಿಸಿ

Published:
Updated:
Prajavani

ಕೋಲಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ನೀಡಿದ್ದ ‘ಭಾರತ ಬಂದ್‌’ ಕರೆಗೆ ಎರಡನೇ ದಿನ ಜಿಲ್ಲೆಯಲ್ಲಿ ಬುಧವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಜನಜೀವನಕ್ಕೆ ಬಂದ್‌ನ ಬಿಸಿ ತಟ್ಟಲಿಲ್ಲ.

ಕಾರ್ಮಿಕ ಸಂಘಟನೆಗಳನ್ನು ಹೊರತುಪಡಿಸಿ ಬೇರೆ ಸಂಘಟನೆಗಳ ಸದಸ್ಯರು ಹಾಗೂ ಜನರು ಬಂದ್‌ಗೆ ಬೆಂಬಲ ಸೂಚಿಸಲಿಲ್ಲ. ಸಿಐಟಿಯು, ಜಿಲ್ಲಾ ಔಷಧ ಮಾರಾಟ ಪ್ರತಿನಿಧಿಗಳ ಸಂಘದ ಸದಸ್ಯರು ಕೆಲವೆಡೆ ರಸ್ತೆ ತಡೆ, ಮಾನವ ಸರಪಳಿ, ಪ್ರತಿಭಟನಾ ಮೆರವಣಿಗೆ ನಡೆಸಿದ್ದನ್ನು ಹೊರತುಪಡಿಸಿದರೆ ಎಲ್ಲಿಯೂ ಬಂದ್‌ನ ಛಾಯೆ ಇರಲಿಲ್ಲ.

ವಾಣಿಜ್ಯ ವಹಿವಾಟು ಹಾಗೂ ವಾಹನ ಸಂಚಾರ ಎಂದಿನಂತೆಯೇ ಇತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು, ಆಟೊಗಳು ಪ್ರತಿನಿತ್ಯದಂತೆ ರಸ್ತೆಗಿಳಿದವು. ಹೀಗಾಗಿ ಜನಜೀವನಕ್ಕೆ ತೊಂದರೆಯಾಗಲಿಲ್ಲ. ಕೆಎಸ್‌ಆರ್‌ಟಿಸಿ ಮತ್ತು ಹಳೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ದೊಡ್ಡ ದಂಡೇ ಕಂಡುಬಂತು.

ಎಪಿಎಂಸಿ, ರೇಷ್ಮೆಗೂಡು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ದಿನನಿತ್ಯದಂತೆ ವಹಿವಾಟು ನಡೆಯಿತು. ಪ್ರಮುಖ ವಾಣಿಜ್ಯ ಸ್ಥಳಗಳಾದ ಎಂ.ಜಿ.ರಸ್ತೆ, ಎಂ.ಬಿ.ರಸ್ತೆ, ಅಮ್ಮವಾರಿಪೇಟೆ, ದೊಡ್ಡಪೇಟೆ, ಹಳೆ ಬಸ್‌ ನಿಲ್ದಾಣ, ಕ್ಲಾಕ್‌ ಟವರ್‌, ಗೌರಿಪೇಟೆಯಲ್ಲಿನ ಅಂಗಡಿಗಳು ತೆರೆದಿದ್ದವು. ತರಕಾರಿ, ಹಾಲು, ದಿನಸಿ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಲಿಲ್ಲ.

ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಬಿಎಸ್‌ಎನ್‌ಎಲ್‌ ಮತ್ತು ಅಂಚೆ ಕಚೇರಿಗಳು ಇಡೀ ದಿನ ಕಾರ್ಯ ನಿರ್ವಹಿಸಿದವು. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು. ಹೋಟೆಲ್‌ಗಳು, ಆಸ್ಪತ್ರೆಗಳು ಮತ್ತು ಔಷಧ ಮಾರಾಟ ಮಳಿಗೆಗಳು ಸೇವೆ ಒದಗಿಸಿದವು. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಡೆಯಿತು. ಪೆಟ್ರೋಲ್‌ ಬಂಕ್‌ಗಳಲ್ಲೂ ವಹಿವಾಟು ಸಹಜವಾಗಿತ್ತು. ವಾಹನ ಸವಾರರು ಸಾಲಿನಲ್ಲಿ ನಿಂತು ಪೆಟ್ರೋಲ್‌ ಮತ್ತು ಡೀಸೆಲ್‌ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಹಾಜರಾತಿ ಕಡಿಮೆ: ಜಿಲ್ಲೆಯಾದ್ಯಂತ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ತರಗತಿಗಳು ನಡೆದವು. ಆದರೆ, ಕೆಲ ಖಾಸಗಿ ಶಾಲಾ ಕಾಲೇಜುಗಳಲ್ಲಿ ರಜೆ ಘೋಷಿಸಲಾಗಿತ್ತು. ಜಿಲ್ಲಾಡಳಿತವು ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಮುಂಚಿತವಾಗಿ ತಿಳಿಸಿತ್ತು. ಆದರೂ ಬಂದ್‌ನ ಗೊಂದಲದಿಂದಾಗಿ ಸಾಕಷ್ಟು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಗೈರಾಗಿದ್ದರಿಂದ ಹಾಜರಾತಿ ಕಡಿಮೆಯಿತ್ತು.

ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಪರಿಷತ್‌, ಜಿಲ್ಲಾ ತ್ರಿಚಕ್ರ ವಾಹನ ಚಾಲಕರ ಸಂಘ, ಜಿಲ್ಲಾ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಒಕ್ಕೂಟದ ಸದಸ್ಯರು ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿ ಬೇಡಿಕೆಗಳ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪೊಲೀಸ್ ಭದ್ರತೆ: ಬಂದ್‌ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಸರ್ಕಾರಿ ಕಚೇರಿಗಳು, ಪ್ರಮುಖ ವೃತ್ತ, ಜಂಕ್ಷನ್‌ಗಳು ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ಸೂಕ್ಷ್ಮ ಪ್ರದೇಶಗಳಲ್ಲಿ ನಿಯಮಿತವಾಗಿ ಗಸ್ತು ನಡೆಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !