ಒಣಗಿದ ಬೆಳೆ ತೋರಿಸಿ ಕಣ್ಣೀರಿಟ್ಟ ಅನ್ನದಾತರು

7
ಬರ ಪರಿಸ್ಥಿತಿ ಅವಲೋಕಿಸಿದ ಸಚಿವ ಸಂಪುಟ ಉಪ ಸಮಿತಿ ಸದಸ್ಯರು

ಒಣಗಿದ ಬೆಳೆ ತೋರಿಸಿ ಕಣ್ಣೀರಿಟ್ಟ ಅನ್ನದಾತರು

Published:
Updated:
Prajavani

ಕೋಲಾರ: ಬರ ಪರಿಸ್ಥಿತಿ ಅವಲೋಕನಕ್ಕಾಗಿ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ ಸಚಿವ ಸಂಪುಟ ಉಪ ಸಮಿತಿ ಸದಸ್ಯರ ಎದುರು ಅನ್ನದಾತರು ಒಣಗಿದ ಬೆಳೆ ತೋರಿಸಿ ಕಣ್ಣೀರಿಟ್ಟರು. ತಂಡದ ಸದಸ್ಯರು ಪರಿಶೀಲನೆ ನಡೆಸಿದ ಕಡೆಯಲೆಲ್ಲಾ ಬರದ ದಿಗ್ದರ್ಶನವಾಯಿತು.

ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಸಚಿವರಾದ ಡಿ.ಸಿ.ತಮ್ಮಣ್ಣ, ವೆಂಕಟರಮಣಪ್ಪ, ಎಸ್‌.ಆರ್‌.ಶ್ರೀನಿವಾಸ್‌ ಅವರನ್ನು ಒಳಗೊಂಡ ತಂಡವು ತಾಲ್ಲೂಕಿನ ಉದ್ದಪ್ಪನಹಳ್ಳಿ ಮತ್ತು ಪಾರ್ಶ್ವಗಾನಹಳ್ಳಿಯ ರೈತರ ಜಮೀನುಗಳಲ್ಲಿ ರಾಗಿ ಬೆಳೆ ಒಣಗಿರುವುದನ್ನು ಪರಿಶೀಲಿಸಿತು.

ಉದ್ದಪ್ಪನಹಳ್ಳಿಯ ರೈತರಾದ ಮುನಿರಾಜು ಮತ್ತು ಚಲಪತಿ ಅವರ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆ ಜೋಳ ಹಾಗೂ ಬೀನ್ಸ್‌ ಬೆಳೆಯನ್ನು ತಂಡದ ಸದಸ್ಯರ ವೀಕ್ಷಿಸಿದರು. ಗ್ರಾಮದ ಕೆರೆಗೆ ಕೆ.ಸಿ ವ್ಯಾಲಿ ನೀರು ಹರಿದು ಬಂದಿರುವುದನ್ನು ನೋಡಿದ ಶಿವಶಂಕರರೆಡ್ಡಿ ಬೊಗಸೆಯಲ್ಲಿ ನೀರು ಕುಡಿದು, ‘ಚೆನ್ನಾಗಿಯೇ ಇದೆಯಲ್ಲಾ’ ಎಂದು ಸಂಸತ ವ್ಯಕ್ತಪಡಿಸಿದರು.

‘ಈ ಭಾಗಕ್ಕೆ ಕೆ.ಸಿ ವ್ಯಾಲಿ ನೀರು ಬರುತ್ತಿದೆ. ಈ ನೀರಿನಲ್ಲಿ ಬೇರೆಯವರಿಗೂ ಮೇವು ಬೆಳೆದುಕೊಡಲು ಸಿದ್ಧರಿದ್ದೇವೆ. ನಮಗೆ ಹೆಚ್ಚಿನ ಪ್ರಮಾಣದಲ್ಲಿ ಮೇವಿನ ಕಿಟ್ ವಿತರಿಸಿ’ ಎಂದು ಮುನಿರಾಜು ಸಚಿವರಿಗೆ ಮನವಿ ಮಾಡಿದರು.

‘ಇತ್ತೀಚೆಗೆ ಮೆಕ್ಕೆ ಜೋಳಕ್ಕೂ ವಿವಿಧ ರೋಗ ತಗುಲುತ್ತಿವೆ. ಕೀಟಬಾಧೆ ನಿಯಂತ್ರಣಕ್ಕೆ ಮೂರ್ನಾಲ್ಕು ಬಾರಿ ಕೀಟನಾಶಕ ಸಿಂಪಡಿಸುವಂತಾಗಿದೆ. ಇದರಿಂದ ಬೆಳೆ ವೆಚ್ಚ ಹೆಚ್ಚಾಗಿದೆ. ಸೂಕ್ತ ಕೀಟನಾಶಕಗಳನ್ನು ಇಲಾಖೆಗಳಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದರೆ ಅನುಕೂಲವಾಗುತ್ತದೆ’ ಎಂದರು.

ಪಾರ್ಶ್ವಗಾನಹಳ್ಳಿಯಲ್ಲಿ ಕೃಷಿ ಹೊಂಡ, ರಾಗಿ ಕಟಾವು ಮಾಡಿರುವುದನ್ನು ವೀಕ್ಷಿಸಿದ ಸದಸ್ಯರು ರೈತರ ಅಹವಾಲು ಆಲಿಸಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಚಿವರಿಗೆ ಹೂವಿನ ಹಾರ ಹಾಕಿ ಸ್ವಾಗತ ಕೋರಿದರು. ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಎಳನೀರು ವ್ಯವಸ್ಥೆ ಮಾಡಿದ್ದರು.

ಕೂಲಿ ಹೆಚ್ಚಿಸಬೇಕು: ಜಿಲ್ಲಾ ಕೇಂದ್ರದ ಹೊರವಲಯದ ಮಡೇರಹಳ್ಳಿ ಬಳಿಯ ನೀರಿನ ಪಂಪ್‌ ಹೌಸ್‌, ತಾಲ್ಲೂಕಿನ ಹೊನ್ನೇನಹಳ್ಳಿ ಕೆರೆಯಲ್ಲಿ ನರೇಗಾ ಅಡಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿಯನ್ನು ತಂಡದ ಸದಸ್ಯರು ಪರಿಶೀಲನೆ ಮಾಡಿದರು.

‘ನರೇಗಾ ಯೋಜನೆಯಡಿ ದಿನಕ್ಕೆ ₹ 250 ಕೂಲಿ ನೀಡಲಾಗುತ್ತಿದೆ. ಆದರೆ, ಈ ಹಣ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೂಲಿ ಹೆಚ್ಚಿಸಬೇಕು’ ಎಂದು ಕಾರ್ಮಿಕರು ಮನವಿ ಮಾಡಿದರು.

ಉಪ ಸಮಿತಿ ಸದಸ್ಯರು ಹಾಗೂ ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಎಂ.ಟಿ.ಬಿ ನಾಗರಾಜ್ ಗೈರಾದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !