ನರೇಗಾ: ಮಾನವ ದಿನ ಹೆಚ್ಚಿಸಿಲ್ಲ

7
ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಜಿ.ಪಂ ಸಿಇಒ ಜಗದೀಶ್ ಅಸಮಾಧಾನ

ನರೇಗಾ: ಮಾನವ ದಿನ ಹೆಚ್ಚಿಸಿಲ್ಲ

Published:
Updated:
Prajavani

ಕೋಲಾರ: ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ರೈತರಿಗೆ ಸೌಕರ್ಯ ಕಲ್ಪಿಸುವ ಅವಕಾಶವಿದ್ದರೂ ವಂಚಿಸಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಹಾಗೂ ಗ್ರಾಮ ಪಂಚಾಯಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿ.ಪಂ ವ್ಯಾಪ್ತಿಯ ಇಲಾಖೆಗಳು ನರೇಗಾ ಯೋಜನೆಯಡಿ ಮಾನವ ದಿನ ಹೆಚ್ಚಿಸಲು ನೀಡಿರುವ ಗುರಿ ಸಾಧನೆಗೆ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಯಲುಸೀಮೆ ಜಿಲ್ಲೆಯ ರೈತರು ಪ್ರಮುಖವಾಗಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಅಧಿಕಾರಿಗಳು ರೈತರಿಗೆ ಅನುಕೂಲ ಕಲ್ಪಿಸುತ್ತಿಲ್ಲ. ನೀವು ಮೋಸಗಾರರು, ಸುಮ್ಮನೆ ಬಿಡುವುದಿಲ್ಲ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

‘ಯಾವುದೇ ಯೋಜಯೆಡಿ ರೈತರಿಗೆ, ಬಡವರಿಗೆ ಅನುಕೂಲ ಮಾಡಿಕೊಡುವ ಅವಕಾಶವಿದ್ದರೂ ಕಲ್ಪಿಸದಿರುವುದು ಮೋಸವಲ್ಲವೇ? ಈ ಹಿಂದೆ ನರೇಗಾ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿತ್ತು. ಇದನ್ನು ತಡೆಯಲು ಅನೇಕ ನಿರ್ಬಂಧ ಹಾಕಲಾಗಿದೆ. ರೈತರನ್ನು ವಂಚಿಸಿದವರು ಉದ್ಧಾರವಾಗುವುದಿಲ್ಲ’ ಎಂದರು.

ಸುಮ್ಮನೆ ಬಿಡುವುದಿಲ್ಲ: ‘ತುಮಕೂರು ಜಿಲ್ಲೆಯಲ್ಲಿ ಕೃಷಿ ಇಲಾಖೆ ಉತ್ತಮ ಸಾಧನೆ ಮಾಡಿದೆ. ನಿಮಗೆ ಕೆಳ ಹಂತದ ಸಿಬ್ಬಂದಿಯಿಂದ ಹೇಗೆ ಉತ್ತಮ ಕೆಲಸ ಮಾಡಿಸಬೇಕೆಂದು ತಿಳಿದಿಲ್ಲ. ನೀವೆಲ್ಲಾ ಸ್ವಯಂ ನಿವೃತ್ತಿ ಪಡೆದು ಮನೆಗೆ ಹೋಗುವುದು ಒಳ್ಳೆಯದು. ಕೆಲಸ ಮಾಡದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

‘ರೇಷ್ಮೆ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳು ಸಾಧನೆ ಕಳಪೆಯಾಗಿದೆ. ತೋಟಗಾರಿಕೆ ಇಲಾಖೆಗೆ 50 ಸಾವಿರ ಮಾನವ ದಿನ ಸೃಜನೆಯ ಗುರಿ ನೀಡಲಾಗಿತ್ತು. ಆದರೆ, ಈವರೆಗೆ 9 ಸಾವಿರ ಮಾನವ ದಿನ ಸೃಜಿಸಲಾಗಿದೆ. ಕೃಷಿ ಇಲಾಖೆಯವರು 5 ಸಾವಿರ ಮಾನವ ದಿನ ಸೃಜಿಸಿ ತೀರಾ ಕಳಪೆ ಸಾಧನೆ ತೋರಿದ್ದೀರಿ. ನೋಟಿಸ್ ನೀಡಿದ್ದರೂ ಗುರಿ ಸಾಧನೆಗೆ ಮುಂದಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ರಮ ವಹಿಸಿ: ‘ರೇಷ್ಮೆ ಇಲಾಖೆ ಸಾಧನೆಯಿಂದ ನರೇಗಾ ಯೋಜನೆ ಪ್ರಗತಿಯಲ್ಲಿ ರಾಜ್ಯ ಮಟ್ಟದಲ್ಲಿ ಮುಂದಿದ್ದೇವೆ. ಇತರ ಇಲಾಕೆ ಅಧಿಕಾರಿಗಳು ಇದೇ ರೀತಿ ಸಹಕಾರ ನೀಡಿದರೆ ರಾಷ್ಟ್ರ ಮಟ್ಟದಲ್ಲೂ ಪ್ರಗತಿ ಸಾಧಿಸಬಹುದು. ಇನ್ನಾದರೂ ಎಚ್ಚೆತ್ತುಕೊಂಡು ಗುರಿ ಸಾಧನೆಗೆ ಶ್ರಮ ವಹಿಸಿ’ ಎಂದು ತಾಕೀತು ಮಾಡಿದರು.

‘ವಸತಿ ಯೋಜನೆಯಡಿ ಈಗಾಗಲೇ ಮನೆ ಮಂಜೂರಾಗಿರುವ ಫಲಾನುಭವಿಗಳು ತಕ್ಷಣ ಮನೆ ನಿರ್ಮಾಣ ಕಾರ್ಯ ಆರಂಭಿಸಬೇಕು. ಕೆಲಸ ಸ್ಥಗಿತಗೊಳಿಸಿದರೆ ಮತ್ತೆ ಎಂದಿಗೂ ಮನೆ ಮಂಜೂರಾಗುವುದಿಲ್ಲ. ಇದಕ್ಕೆ ಜಿಲ್ಲಾ ಪಂಚಾಯಿತಿ ಹೊಣೆ ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !