ಸೈನ್ಸ್ ಕಾಲೇಜಿಗೆ ಅತಿಥಿಯಾಗಿದ್ದರು!

ಬಾಗಲಕೋಟೆ: ಭಕ್ತರ ಪಾಲಿಗೆ ನಡೆದಾಡುವ ದೇವರು ಎನಿಸಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳು ಮುಳುಗಡೆ ಜಿಲ್ಲೆಯೊಂದಿಗೂ ವಿಶೇಷ ನಂಟು ಹೊಂದಿದ್ದರು. ಕಳೆದ 50 ವರ್ಷಗಳಲ್ಲಿ ಇಲ್ಲಿನ ಸಾವಿರಾರು ಮಕ್ಕಳನ್ನು ಶಿಕ್ಷಣ ಹಾಗೂ ಅನ್ನದಾಸೋಹದ ಮೂಲಕ ಸಲುಹಿದ್ದಾರೆ.
1968ರ ಫೆಬ್ರುವರಿಯಲ್ಲಿ ನಡೆದ ಬಾಗಲಕೋಟೆಯ ಬಿ.ವಿ.ವಿ ಸಂಘದ ವಿಜ್ಞಾನ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭಕ್ಕೆ ಶ್ರೀಗಳು ಅತಿಥಿಯಾಗಿದ್ದರು. ಅದೇ ಮೊದಲ ಬಾರಿಗೆ ಜಿಲ್ಲೆಗೆ ಬಂದಿದ್ದರು. ‘ಆಗ ಕಲಾ ಕಾಲೇಜಿನ ಪ್ರಾಚಾರ್ಯರಾಗಿದ್ದ ಡಾ.ಎಲ್.ಜಿ.ಹಿರೇಮಠ ವಿಶೇಷ ಅಸ್ಥೆ ವಹಿಸಿ ಸಿದ್ಧಗಂಗಾ ಶ್ರೀಗಳನ್ನು ಕಾರ್ಯಕ್ರಮಕ್ಕೆ ಕರೆತಂದಿದ್ದರು’ ಎಂದು ಆಗ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯದ ಉಪನ್ಯಾಸಕರಾಗಿದ್ದ ಪ್ರೊ.ಎನ್.ಸಿ.ಜಿಗಜಿನ್ನಿ ಸ್ಮರಿಸಿಕೊಳ್ಳುತ್ತಾರೆ.
’ವಾರ್ಷಿಕೋತ್ಸವ ನಿಮಿತ್ತ ಕಾಲೇಜಿನ ಸಿಬ್ಬಂದಿ ಹಾಗೂ ಉಪನ್ಯಾಸಕರಿಗೆ ಆಯೋಜಿಸಿದ್ದ ಚೆಸ್ ಸ್ಪರ್ಧೆಯಲ್ಲಿ ನಾನು ಚಾಂಪಿಯನ್ ಆಗಿದ್ದೆನು. ಆಗ ಸಿದ್ಧಗಂಗಾ ಶ್ರೀಗಳೇ ನನಗೆ ಬಹುಮಾನ ನೀಡಿದ್ದರು’ ಎಂದು ಜಿಗಜಿನ್ನಿ ಹೇಳುತ್ತಾರೆ.
ಸಾತ್ವಿಕ ಜೀವನ ಶೈಲಿ:
ಹುನಗುಂದದಲ್ಲಿ ವಿಜಯಮಹಾಂತೇಶ ಮಠದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು 1974ರಲ್ಲಿ ಸಿದ್ಧಗಂಗಾ ಶ್ರೀಗಳು ಬಂದಿದ್ದರು. ಆಗ ನಮ್ಮ ಮನೆಯಲ್ಲಿಯೇ ಉಳಿದಿದ್ದರು ಎಂದು ಶಾಸಕ ವೀರಣ್ಣ ಚರಂತಿಮಠ ಆ ದಿನಗಳ ನೆನಪಿಗೆ ಜಾರುತ್ತಾರೆ. ಶ್ರೀಗಳು ಬೆಳಗಿನ ಜಾವ 3 ಗಂಟೆಗೆ ಏಳುತ್ತಿದ್ದರು. ಪೂಜೆಗೆ ಎಲ್ಲ ವ್ಯವಸ್ಥೆ ನಮ್ಮ ಮನೆಯಲ್ಲಿ ಮಾಡಿದ್ದೆವು. ನಸುಕಿನ 6 ಗಂಟೆ ವೇಳೆಗೆ ಪ್ರಾತಃವಿಧಿ, ಪೂಜೆ–ಪುನಸ್ಕಾರಗಳನ್ನು ಪೂರೈಸಿ ದಿನದ ಮೊದಲ ಪ್ರಸಾದ ಸ್ವೀಕರಿಸಿದ್ದರು. ಇದು ಅವರ ಸಾತ್ವಿಕ ಜೀವನ ಶೈಲಿಗೆ ನಿದರ್ಶನ’ ಎನ್ನುತ್ತಾರೆ.
‘ಆರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಚೇರಿಗೆ ಬೆಂಗಳೂರಿನ ಕುಮಾರಪಾರ್ಕ್ನಲ್ಲಿ ಮಠಕ್ಕೆ ಸೇರಿದ ಕೊಠಡಿಯನ್ನು ಉಚಿತವಾಗಿ ನೀಡಿದ್ದರು. ನಂತರ ಸಂಘದ ಚಟುವಟಿಕೆಗಳಿಗೂ ಸದಾ ಬೆನ್ನೆಲುಬಾಗಿದ್ದರು’ ಎಂದು ಮಹಾಸಭಾದ ಉಪಾಧ್ಯಕ್ಷರೂ ಆಗಿರುವ ವೀರಣ್ಣ ಚರಂತಿಮಠ ಹೇಳುತ್ತಾರೆ.
’ಶ್ರೀಗಳು ತುಮಕೂರಿನಲ್ಲಿ ಇರಲಿ, ಬಿಡಲಿ ಪ್ರತಿ ಬಾರಿ ಬೆಂಗಳೂರಿಗೆ ಹೋಗುವಾಗಲೂ ಸಿದ್ಧಗಂಗಾಮಠದಲ್ಲಿಯೇ ಊಟ ಮಾಡಿ ಹೋಗುತ್ತಿದ್ದೆನು. ಅವರು ಇದ್ದರೆ ಆಶೀರ್ವಾದ ಪಡೆಯುತ್ತಿದ್ದೆನು. ಮೊದಲಿನಿಂದಲೂ ಅದನ್ನೇ ರೂಢಿಸಿಕೊಂಡು ಬಂದಿದ್ದೇನೆ’ ಎನ್ನುವ ಚರಂತಿಮಠ, ‘ಜೂನ್ 1, 2003ರಲ್ಲಿ ಕೂಡಲಸಂಗಮದಲ್ಲಿ ನಂತರ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಗುರು–ವಿರಕ್ತರ ಸಮಾವೇಶದಲ್ಲಿ ಶ್ರೀಗಳು ಪಾಲ್ಗೊಂಡಿದ್ದರು. ಆಗ ನಾನು ಸ್ವಾಗತ ಸಮಿತಿ ಅಧ್ಯಕ್ಷನಾಗಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ.
ಕೂಡಲಸಂಗಮದ ಬಸವಧರ್ಮ ಪೀಠದಿಂದ 1988ರಲ್ಲಿ ಆರಂಭವಾದ ಮೊದಲ ಶರಣಮೇಳದಲ್ಲಿ ಪಾಲ್ಗೊಂಡಿದ್ದ ಸಿದ್ಧಗಂಗಾ ಸ್ವಾಮೀಜಿ 30 ವರ್ಷಗಳ ಹಿಂದೆಯೇ ಬಸವಣ್ಣನ ಐಕ್ಯಸ್ಥಳದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ.
ಬರಹ ಇಷ್ಟವಾಯಿತೆ?
0
0
0
0
0
0 comments
View All