ಠಾಣೆ ಎದುರೇ ಎಎಸ್‌ಐ ಬೈಕ್‌ ಕದ್ದೊಯ್ದರು

7

ಠಾಣೆ ಎದುರೇ ಎಎಸ್‌ಐ ಬೈಕ್‌ ಕದ್ದೊಯ್ದರು

Published:
Updated:

ಬೆಂಗಳೂರು: ಚಿಕ್ಕಪೇಟೆ ಸಂಚಾರ ಠಾಣೆಯ ಎದುರು ನಿಲ್ಲಿಸಿದ್ದ ಎಎಸ್‌ಐ ವಿ.ಸಿ.ತಮ್ಮಣ್ಣಗೌಡ ಎಂಬುವರ ಬೈಕ್‌ ಅನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಆ ಸಂಬಂಧ ವಿ.ವಿ.ಪುರ ಪೊಲೀಸ್ ಠಾಣೆಗೆ ದೂರು ನೀಡಿರುವ ತಮ್ಮಣ್ಣಗೌಡ, ‘ಬೈಕ್ ಹುಡುಕಿಕೊಡಿ’ ಎಂದು ಕೋರಿದ್ದಾರೆ.

ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಚಿಕ್ಕಪೇಟೆ ಸಂಚಾರ ಹಾಗೂ ವಿ.ವಿ.ಪುರ ಪೊಲೀಸ್ ಠಾಣೆಗಳಿವೆ. ಪೊಲೀಸರ ವಾಹನಗಳನ್ನು ನಿಲ್ಲಿಸಲು ಠಾಣೆ ಎದುರು ಪಾರ್ಕಿಂಗ್‌ ಜಾಗವಿದೆ. ಅಲ್ಲಿ ನಿಲ್ಲಿಸಿದ್ದ ಬೈಕ್‌ ಅನ್ನೇ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.

ಬೈಕ್‌ ಮೇಲೆ ‘ಪೊಲೀಸ್‌’ ಬರಹದ ಸ್ಟೀಕರ್ ಇತ್ತು. ‘ಬೆಂಗಳೂರು ಸಿಟಿ ಪೊಲೀಸ್’ ಲಾಂಛನ ಅಂಟಿಸಲಾಗಿತ್ತು. 

‘ಗಸ್ತು ತಿರುಗುವುದಕ್ಕಾಗಿ ಇಲಾಖೆಯವರು ₹45 ಸಾವಿರ ಮೌಲ್ಯದ ಬಜಾಜ್ ಪಲ್ಸರ್ (ಕೆಎ 02 ಜಿ 1185) ಬೈಕ್‌ ಕೊಟ್ಟಿದ್ದರು. ಆ ಬೈಕ್‌ನಲ್ಲಿ ನಿತ್ಯವೂ ಗಸ್ತು ತಿರುಗುತ್ತಿದ್ದೆ. ಅದನ್ನೇ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ’ ಎಂದು ತಮ್ಮಣ್ಣಗೌಡ ದೂರಿನಲ್ಲಿ ತಿಳಿಸಿದ್ದಾರೆ.

‘ಚಿಕ್ಕಪೇಟೆ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ನಾನು, ಠಾಣೆ ವ್ಯಾಪ್ತಿಯಲ್ಲಿ ಜ. 18ರಂದು ರಾತ್ರಿ ಗಸ್ತು ತಿರುಗಿದ್ದೆ. ಜ. 19ರಂದು ನಸುಕಿನ 2.15 ಗಂಟೆ ಸುಮಾರಿಗೆ ವಾಪಸ್‌ ಠಾಣೆಗೆ ಬಂದು, ಪಾರ್ಕಿಂಗ್‌ ಜಾಗದಲ್ಲಿ ಬೈಕ್‌ ನಿಲ್ಲಿಸಿ ಠಾಣೆಯೊಳಗೆ ಹೋಗಿದ್ದೆ’.

‘ಬೆಳಿಗ್ಗೆ 6 ಗಂಟೆಗೆ ಠಾಣೆಯಿಂದ ಹೊರಗೆ ಬಂದು ನೋಡಲಾಗಿ ಬೈಕ್‌ ಇರಲಿಲ್ಲ. ಅಕ್ಕ–ಪಕ್ಕದಲ್ಲಿ ಹುಡುಕಾಟ ನಡೆಸಿದರೂ ಅದರ ಸುಳಿವು ಸಿಗಲಿಲ್ಲ’ ಎಂದು ತಮ್ಮಣ್ಣಗೌಡ ದೂರಿನಲ್ಲಿ ಹೇಳಿದ್ದಾರೆ.

ಠಾಣೆಯಿಂದ 50 ಮೀಟರ್‌ ದೂರ: ಬೈಕ್‌ ನಿಲ್ಲಿಸಿದ್ದ ಜಾಗವು ವಿ.ವಿ.ಪುರ ಪೊಲೀಸ್ ಠಾಣೆಯಿಂದ ಕೇವಲ 50 ಮೀಟರ್ ದೂರದಲ್ಲಿದೆ. ರಾತ್ರಿ ಕರ್ತವ್ಯದಲ್ಲಿದ್ದ ಸಿಬ್ಬಂದಿ, ಠಾಣೆಯಿಂದ ಹೊರಗೆ ಬಂದಿರಲಿಲ್ಲ. ಅದೇ ವೇಳೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ.

‘ನಗರದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳರ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಈಗ ಪೊಲೀಸರ ಬೈಕ್‌ನ್ನೂ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಘಟನಾ ಸ್ಥಳ ಹಾಗೂ ದುಷ್ಕರ್ಮಿಗಳು ಓಡಾಡಿದ್ದರು ಎನ್ನಲಾದ ಸ್ಥಳಗಳಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ವಿ.ವಿ.ಪುರ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 7

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !