ಮದ್ಯ ನಿಷೇಧವೇ ದೊಡ್ಡ ಭಾಗ್ಯ

7

ಮದ್ಯ ನಿಷೇಧವೇ ದೊಡ್ಡ ಭಾಗ್ಯ

Published:
Updated:

ಪುರುಷರ ಮದ್ಯಪಾನ ಚಟದಿಂದ ಬೀದಿಗೆ ಬಿದ್ದಿರುವ ಸಹಸ್ರಾರು ಕುಟುಂಬಗಳ ನೊಂದ ಹೆಣ್ಣುಮಕ್ಕಳ ತಾಳ್ಮೆಯ ಕಟ್ಟೆಯೊಡೆದಿದೆ. ಅವರೀಗ ಅಕ್ಷರಶಃ ಬೀದಿಗಿಳಿದಿದ್ದಾರೆ. ಚಿತ್ರದುರ್ಗದಿಂದ ಬರಿಗಾಲಿನಲ್ಲಿ ನಡೆಯುತ್ತಾ ಇದೇ 30ಕ್ಕೆ ರಾಜಧಾನಿ ತಲುಪಲಿದ್ದಾರೆ. ಹಳ್ಳಿಹಳ್ಳಿಯ ಪೆಟ್ಟಿಗೆಯಂಗಡಿಗಳಲ್ಲೂ ಎಗ್ಗಿಲ್ಲದೇ ಹೆಂಡದ ಪ್ಯಾಕೆಟ್ಟುಗಳು ಬಿಕರಿಯಾಗುತ್ತಿವೆ.

ಗಲ್ಲಿಗಲ್ಲಿಗಳಲ್ಲಿ ಮದ್ಯದಂಗಡಿಗಳ ಪ್ರಮಾಣ ಸರ್ಕಾರದ ಪರವಾನಗಿ ಪಡೆದೇ ಏರುತ್ತಿದೆ. ಬರದ ಭೀಕರತೆಯಲ್ಲೂ ನಿಷ್ಕಾಳಜಿಯಿಂದ ಪ್ರತಿ ತಿಂಗಳೂ ಮದ್ಯ ಮಾರಾಟದ ಟಾರ್ಗೆಟ್‍ಗಳನ್ನು ಹೆಚ್ಚಿಸಲಾಗುತ್ತಿದೆ! ಇಂದಿಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆಯಿಲ್ಲದೆ, ಒಂದು ಕೊಡ ನೀರು ಸಂಪಾದಿಸಲು ಹಳ್ಳಿಗಳ ಹೆಣ್ಣುಮಕ್ಕಳು ಗಂಟೆಗಟ್ಟಲೆ, ಮೈಲಿಗಟ್ಟಲೆ ನಡೆಯಬೇಕಿದೆ. ಆದರೆ, ಜನರ ಆರೋಗ್ಯ ಮತ್ತು ಕುಟುಂಬ ಸ್ವಾಸ್ಥ್ಯವನ್ನು ಪಣಕ್ಕಿಟ್ಟು ದೋಚಿದ ನಿರ್ಲಜ್ಜ ಹಣದಿಂದ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಿದೆ ಸರ್ಕಾರ. 

ಹೀಗೆಂದೇ ನೊಂದ ಹೆಣ್ಣುಮಕ್ಕಳು, ‘ನಮಗೆ ನಿಮ್ಮ ಯಾವ ಭಿಕ್ಷೆಯೂ ಬೇಡ, ಭಾಗ್ಯಗಳೂ ಬೇಡ, ದುಡಿದು ತಿನ್ನುತ್ತೇವೆ. ದಯಮಾಡಿ ಮದ್ಯಪಾನ ನಿಷೇಧಿಸಿ’ ಎಂದು ಆಕ್ರೋಶ, ಅಸಹಾಯಕತೆಯಿಂದ ಬೇಡುತ್ತಿದ್ದಾರೆ.

ಸರ್ಕಾರಗಳ ಮುಖ್ಯ ಆದಾಯ ಮೂಲವಿರುವುದೇ ಮದ್ಯ ಮಾರಾಟದಿಂದ ಎಂದು ಸುಳ್ಳೇ ನಂಬಿಸಲಾಗುತ್ತಿದೆ. ಸರ್ಕಾರದ ಒಟ್ಟು ಬಜೆಟ್ 2 ಲಕ್ಷ ಕೋಟಿಗೂ ಅಧಿಕವಿದ್ದರೆ, ಮದ್ಯ ಮಾರಾಟದಿಂದ ಬರುವ ಆದಾಯ ಬರೀ 18,000 ಕೋಟಿ. ಅದಕ್ಕೆ ಹೇಗೋ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಸರ್ಕಾರದ ಮದ್ಯಪಾನದ ಲಾಭಕ್ಕೆ ಜನ ತೆರುತ್ತಿರುವ ಬೆಲೆ ಎಷ್ಟೆಂಬುದಕ್ಕೆ, 2014ರಲ್ಲಿಯೇ ನಿಮ್ಹಾನ್ಸ್ ಸಂಸ್ಥೆ ಐದು ಲಕ್ಷ ಮದ್ಯವ್ಯಸನಿಗಳ ಸಮೀಕ್ಷೆ ನಡೆಸಿ ನೀಡಿರುವ ವರದಿ ಸಾಕ್ಷಿ ಹೇಳುತ್ತಿದೆ.

ಮದ್ಯ ಮಾರಾಟದಿಂದ ಸರ್ಕಾರಕ್ಕೆ ಬರುವ ಆದಾಯಕ್ಕಿಂತ 2ರಿಂದ 3 ಪಟ್ಟು ಹೆಚ್ಚು ಹಣ ಸಮಾಜದ ಸ್ವಾಸ್ಥ್ಯಕ್ಕೆ ಮತ್ತು ವ್ಯಕ್ತಿಗತ ಆರೋಗ್ಯ ಹಾನಿ ಸರಿದೂಗಿಸಲು ವೆಚ್ಚವಾಗುತ್ತಿದೆ! ಆದರೆ ಈ ಹೊರೆ ಬೀಳುತ್ತಿರುವುದು ಸರ್ಕಾರದ ಮೇಲಲ್ಲ, ಕುಟುಂಬಗಳ ಮೇಲೆ. ಸಾಮಾಜಿಕ ಅಸ್ವಾಸ್ಥ್ಯದ ಹೆಚ್ಚಿನ ಪಾಲಿಗೂ ಮದ್ಯವ್ಯಸನವೇ ಕಾರಣ. ಮುಖ್ಯವಾಗಿ, ಮಹಿಳೆಯರ ಮೇಲಾಗುವ ಶೇ 70ರಿಂದ 85ರಷ್ಟು ಅಪರಾಧಗಳಿಗೆ ಮದ್ಯಪಾನವೇ ಮೂಲ. ಶೇ 75ರಷ್ಟು ಅತ್ಯಾಚಾರಿಗಳೂ ಕುಡುಕರಾಗಿದ್ದಾರೆಂದು ವರದಿ ಸ್ಪಷ್ಟಪಡಿಸಿದೆ.

ಇಷ್ಟೆಲ್ಲಾ ಸತ್ಯ ಕಣ್ಣಿಗೆ ರಾಚುತ್ತಿದ್ದರೂ, ಜನರ ಮದ್ಯಪಾನದ ಚಟವನ್ನೇ ಸರ್ಕಾರ ಬಂಡವಾಳ ಮಾಡಿಕೊಳ್ಳುವುದು ಕ್ರೌರ್ಯದ ಪರಮಾವಧಿಯಲ್ಲವೇ? ಜನಪ್ರತಿನಿಧಿಗಳೇ, ದಯಮಾಡಿ ಹೆಣ್ಣುಮಕ್ಕಳ ಈ ಸಂಕಟದ ಮೊರೆ ಆಲಿಸಿ. ಮದ್ಯಪಾನ ನಿಷೇಧಿಸಿ. ಕುಟುಂಬಗಳನ್ನು ಉಳಿಸಿ.

ರೂಪ ಹಾಸನ, ಸ್ವರ್ಣಾ ಭಟ್, ಶಾರದಾ ಗೋಪಾಲ, ಮಲ್ಲಿಗೆ ಸಿರಿಮನೆ, ರಾಜೇಶ್ವರಿ ಜೋಷಿ, ಮೋಕ್ಷಮ್ಮ, ವಿರುಪಮ, ಗೌರಿ, ಶೋಭಾ, ಡಿ.ನಾಗಲಕ್ಷ್ಮಿ, ಅಪರ್ಣ

Tags: 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !