ಮಂಗಳವಾರ, ಸೆಪ್ಟೆಂಬರ್ 21, 2021
26 °C
ಕೇಂದ್ರ ಉಕ್ಕು ಸಚಿವ ಬೀರೇಂದ್ರ ಸಿಂಗ್‌ ಚೌಧರಿ ಹೇಳಿಕೆ

ಚಬಾಹರ್‌ ಬಂದರಿನಲ್ಲಿ ಕೆಐಒಸಿಎಲ್‌ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇರಾನ್‌ನ ಆಗ್ನೇಯ ಭಾಗದಲ್ಲಿ ಭಾರತವು ಅಭಿವೃದ್ಧಿಪಡಿಸುತ್ತಿರುವ ಚಬಾಹರ್‌ ಬಂದರನ್ನು ಬಳಸಿಕೊಂಡು ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯ (ಕೆಐಒಸಿಎಲ್‌) ಚಟುವಟಿಕೆಗಳನ್ನು ವಿಸ್ತರಿಸಲು ಇರುವ ಅವಕಾಶಗಳ ಬಗ್ಗೆ ಪರಿಶೀಲಿಸುವಂತೆ ಉಕ್ಕು ಸಚಿವಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಉಕ್ಕು ಸಚಿವ ಬೀರೇಂದ್ರ ಸಿಂಗ್‌ ಚೌಧರಿ ತಿಳಿಸಿದರು.

ನಗರದ ಪಣಂಬೂರಿನಲ್ಲಿ ಕೆಐಒಸಿಎಲ್‌ ನಿರ್ಮಿಸಿರುವ 1.3 ಮೆಗಾ ವಾಟ್ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕ ಉದ್ಘಾಟನೆ ಮತ್ತು ಬ್ಲಾಸ್ಟ್‌ ಫರ್ನೇಸ್‌ ಘಟಕದ ಆಧುನೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಇರಾನ್‌ ಹಲವು ವರ್ಷಗಳಿಂದ ಭಾರತದಿಂದ ಉಕ್ಕು ಆಮದು ಮಾಡಿಕೊಳ್ಳುತ್ತಿತ್ತು. ಈಗ ಚಬಾಹರ್ ಬಂದರನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತೆ ವಹಿವಾಟು ವಿಸ್ತರಣೆಗೆ ಯತ್ನಿಸಲಾಗುತ್ತಿದೆ. ಕೆಐಒಸಿಎಲ್‌ನಿಂದ ಈ ಬಂದರಿನ ಮೂಲಕ ಹೆಚ್ಚಿನ ಪ್ರಮಾಣದ ಉಕ್ಕಿನ ಉಂಡೆಗಳನ್ನು (ಪೆಲೆಟ್ಸ್) ರಫ್ತು ಮಾಡಲು ಅವಕಾಶವಿದೆ. ಚಬಾಹರ್ ಬಂದರಿನಿಂದ ಮಂಗಳೂರು ಸಮೀಪದಲ್ಲಿರುವ ಸ್ಥಳ. ಇದನ್ನು ಸರಿಯಾಗಿ ಬಳಸಿಕೊಳ್ಳಲು ಯೋಚಿಸಲಾಗಿದೆ ಎಂದರು.

‘ಚಬಾಹರ್ ಬಂದರಿನ ವ್ಯಾಪ್ತಿಯಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿ ಕೆಐಒಸಿಎಲ್‌ನ ಉಕ್ಕಿನ ಉಂಡೆ ತಯಾರಿಕಾ ಘಟಕ ಸ್ಥಾಪಿಸುವ ಯೋಚನೆ ಇದೆ. ಈ ಕುರಿತು ಪರಿಶೀಲಿಸುವಂತೆ ಉಕ್ಕು ಸಚಿವಾಲಯದ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ಕೆಐಒಸಿಎಲ್‌ ಕಂಪೆನಿಯ ಚಟುವಟಿಕೆಗಳನ್ನು ಬಹು ಆಯಾಮಗಳಲ್ಲಿ ವಿಸ್ತರಿಸುವಂತೆಯೂ ನಿರ್ದೇಶನ ನೀಡಿದ್ದೇನೆ’ ಎಂದು ಹೇಳಿದರು.

ಸುರಕ್ಷತಾ ನಿರ್ದೇಶನಾಲಯ:
ಉಕ್ಕು ತಯಾರಿಕೆ ಕ್ಷೇತ್ರದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ದೊರೆಯಬೇಕಿದೆ. ಸಂಬಂಧಿಸಿದ ಎಲ್ಲ ಉದ್ದಿಮೆಗಳೂ ಈ ವಿಚಾರದಲ್ಲಿ ಜಾಗರೂಕತೆಯಿಂದ ಇರಬೇಕು. ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಾರ್ಚ್‌ 28ರಂದು ದೇಶದಾದ್ಯಂತ ಎಲ್ಲ ಉಕ್ಕು ಉದ್ದಿಮೆಗಳಲ್ಲಿ ಉಕ್ಕು ಸುರಕ್ಷತಾ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಉಕ್ಕು ಸಚಿವಾಲಯದಿಂದ ಉಕ್ಕು ಸುರಕ್ಷತಾ ನಿರ್ದೇಶನಾಲಯವನ್ನು ಸ್ಥಾಪಿಸಲಾಗುತ್ತಿದೆ. ಹತ್ತು ದಿನಗಳಲ್ಲಿ ಈ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಇದು ಸಂಪೂರ್ಣವಾಗಿ ಒಂದು ತಾಂತ್ರಿಕ ಸಂಸ್ಥೆಯಾಗಿ ಕೆಲಸ ಮಾಡಲಿದೆ ಎಂದು ಮಾಹಿತಿ ನೀಡಿದರು.

ತ್ವರಿತ ಪ್ರಕ್ರಿಯೆಗೆ ಕೋರಿಕೆ:
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ದೇವದಾರಿ ವಲಯದಲ್ಲಿ ಕೆಐಒಸಿಎಲ್‌ಗೆ ಮಂಜೂರಾಗಿರುವ ಕಬ್ಬಿಣದ ಅದಿರಿನ ಗಣಿಯನ್ನು ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ಬಿನೋಯ್‌ ಕುಮಾರ್‌, ‘ದೇವದಾರಿ ವಲಯದ ಕಬ್ಬಿಣದ ಅದಿರಿನ ಗಣಿಗೆ ಸಂಬಂಧಿಸಿದಂತೆ ಕೆಲವು ಅನುಮತಿ ಪತ್ರಗಳನ್ನು ಪಡೆಯಬೇಕಿದೆ. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಭೆ ನಡೆಸುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಯವರನ್ನು ಕೋರುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು