ಶೀಘ್ರದಲ್ಲಿಯೇ ನಿವೇಶನ ವಿತರಣೆಗೆ ಚಾಲನೆ: ಶಾಸಕ ಡಾ.ಕೆ. ಸುಧಾಕರ್

ಚಿಕ್ಕಬಳ್ಳಾಪುರ: ‘ಕಂದವಾರದ ಪರಿಶಿಷ್ಟ ಸಮುದಾಯಗಳ ಜನರಿಗೆ ಉಚಿತವಾಗಿ ನಿವೇಶನ ಕಾರ್ಯಕ್ಕೆ ಅತಿ ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು’ ಎಂದು ಶಾಸಕ ಡಾ.ಕೆ. ಸುಧಾಕರ್ ತಿಳಿಸಿದರು.
ಕಂದವಾರದಲ್ಲಿ ಇತ್ತೀಚೆಗೆ ನಡೆದ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ ‘ಅಮೃತಗಂಗೆ’ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಂದವಾರ ನಗರಕ್ಕೆ ಹತ್ತಿರವಿದ್ದರೂ ಹಿಂದಿನಿಂದಲೂ ಅಭಿವೃದ್ಧಿಯಿಂದ ವಂಚಿತವಾಗಿತ್ತು. ನನ್ನ ಕಳೆದ ಅವಧಿಯಲ್ಲಿ ಇಲ್ಲಿ ಅಭಿವೃದ್ಧಿಯ ಲಕ್ಷಣಗಳು ಕಂಡುಬಂದಿವೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಇಲ್ಲಿ ಸರ್ವೇ ಮಾಡಿಸಿದಾಗ 170 ಮನೆಗಳಿಗೆ ಮನವಿ ಬಂದಿದೆ. ಆ ಮನೆಗಳನ್ನು ಕಟ್ಟಿಸಿಕೊಡಲಾಗುತ್ತದೆ. ನಗರದಲ್ಲಿ ಸುಮಾರು ₹11 ಕೋಟಿ ಅನುದಾನದಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ಹೆಚ್ಚಿನ ನಿವೇಶನ ತರಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದರು.
‘ಇದೇ ವರ್ಷದಲ್ಲಿ ಕಂದವಾರದ ಜನರಿಗೆ ನಿವೇಶನ, ಮನೆ ಮಂಜೂರು ಮಾಡಿಸಿಕೊಡುತ್ತೇನೆ. ಆದರೆ ನಗರಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಸಂಪೂರ್ಣ ಸಹಕಾರ ನೀಡಿದರೆ ಹೆಚ್ಚಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಈ ಬಾರಿ ನಮ್ಮ ಅಭ್ಯರ್ಥಿಗೆ ಕನಿಷ್ಠ 1,000 ಮತಗಳನ್ನು ನೀಡಬೇಕು. ನೀಡಿದರೆ ಎಲ್ಲ ಕೆಲಸ ಮಾಡಿಕೊಡುತ್ತೇವೆ’ ಎಂದರು.
‘ಬಸಪ್ಪ ಛತ್ರದ ಸಂತ್ರಸ್ತ ಕುಟುಂಬಗಳಿಗೆ ಕಂದವಾರದಲ್ಲಿ ನಾಲ್ಕೂವರೆ ಎಕರೆ ಜಾಗ ಗುರುತಿಸಿ ಉಚಿತ ನಿವೇಶನ ನೀಡಲಾಗಿದೆ. ನಿವೇಶನ ಮಾತ್ರವಲ್ಲ. ಹೊಸ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗುತ್ತಿದೆ. ₹3 ಕೋಟಿ ವೆಚ್ಚದಲ್ಲಿ ಕಂದವಾರ ಕೆರೆ ಅಭಿವೃದ್ಧಿಪಡಿಸಲಾಗುತ್ತಿದೆ. ಈ ವಾರ್ಡ್ ಅನ್ನು ಮಾದರಿಯಾಗಿ ರೂಪಿಸುವ ಚಿಂತನೆ ಇದೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರದ ಬಜೆಟ್ ದಿನಾಂಕ ನಿಗದಿಯಾಗಿದೆ. ಹೀಗಾಗಿ ನಾವು ಸಂಸದರೊಂದಿಗೆ ಹೋಗಿ ಮುಖ್ಯಮಂತ್ರಿ ಅವರ ಬಳಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಒತ್ತಡ ಹಾಕಿದ್ದೇವೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮತ್ತು ವಾಹನ ದಟ್ಟಣೆಗೆ ಪೂರಕವಾಗಿ ಹೊರ ವರ್ತುಲ ರಸ್ತೆ ಅಭಿವೃದ್ಧಿಪಡಿಸುವ ಚಿಂತನೆ ಇದೆ’ ಎಂದು ತಿಳಿಸಿದರು.
ಕೋಚಿಮುಲ್ ನಿರ್ದೇಶಕರಾದ ಕೆ.ವಿ. ನಾಗರಾಜ್, ಸುನಂದಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಸಭೆ ಸದಸ್ಯೆ ಭಾರತಿ, ಮುಖಂಡರಾದ ಯಲುವಳ್ಳಿ ರಮೇಶ್, ಕೆ. ಎಂ.ನಾಗರಾಜ್, ನಾರಾಯಣಸ್ವಾಮಿ, ಜಯಮ್ಮ, ಹರೀಶ್, ಮುರಳಿ, ಅನಿಲ್ ಉಪಸ್ಥಿತರಿದ್ದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All