ರಾಜ್‌ಗುರು ರಂಗ ಬದುಕಿಗೆ ಮೂವತ್ತು ವರ್ಷ

7

ರಾಜ್‌ಗುರು ರಂಗ ಬದುಕಿಗೆ ಮೂವತ್ತು ವರ್ಷ

Published:
Updated:
Prajavani

ರಂಗಭೂಮಿಯಲ್ಲಿ ಭರವಸೆಯ ಹೆಜ್ಜೆಗಳನ್ನಿಡುತ್ತ ತನ್ನದೇ ಛಾಪು ಮೂಡಿಸುವ ಉತ್ಸಾಹದ ರಾಜ್‌ಗುರು ಸಂಗೀತ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ.  

ಅಪ್ಪ ಗಾಯಕ, ನಟ ಗುರುರಾಜ್‌ ಹೊಸಕೋಟೆ ಹಾಡುಗಳನ್ನು ಹಾಡುವುದರ ಮೂಲಕ ತಮ್ಮ ಪಯಣ ಆರಂಭಿಸಿ ಪ್ರಸಾಧನ, ನಾಟಕ ರಚನೆ, ನಿರ್ದೇಶನಕ್ಕೂ ಇಳಿದಿದ್ದಾರೆ.

‘ಏನ್‌ ಚಿಕ್ಕ ಹುಡ್ಗುರೆಲ್ಲಾ ನಿರ್ದೇಶಕರಾದ್ರಪ್ಪಾ’ ಎಂದು ರಂಗವಲಯದಲ್ಲಿ ಕೊಂಕು ಮಾತನಾಡುವವರಿಗೆ ತಮ್ಮ ಕಲಾ ಬದುಕಿನ ಹಾದಿಯಿಂದಲೇ ಉತ್ತರ ನೀಡುವ ಉಮೇದು ಇಟ್ಟುಕೊಂಡವರು. ‘ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ‘ ಎಂಬ ಕುವೆಂಪು ಸಾಲು ಅವರಿಗೀಗ ಪ್ರೇರಣೆ. 

ರಾಜ್‌ಗುರು, ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು 2018ರ ಹೊತ್ತಿಗೆ ಮೂರು ದಶಕಗಳು ಕಳೆದಿವೆ. 4 ಸಾವಿರ  ಹಾಡುಗಳನ್ನು ವೇದಿಕೆಗಳಲ್ಲಿ ಹಾಡಿದ್ದಾರೆ. ನಾಟಕಗಳನ್ನೂ ಬರೆದು ನಿರ್ದೇಶಿಸಿದ್ದಾರೆ. ಇದೀಗ ‘ಗುರುಗಾನ ದೀಕ್ಷೆ‘ ಕಾರ್ಯಕ್ರಮದ ಮೂಲಕ ಈ ಹಾದಿಯನ್ನು ಸ್ಮರಿಸುವುದರ ಜೊತೆ ಮರುಸೃಷ್ಟಿ ಮಾಡಲಾಗುತ್ತಿದೆ. ರಾಜ್‌ಗುರು ಇಲ್ಲಿಯವರೆಗೂ 

‘ಅಪ್ಪ ನನಗೆ ಬದುಕಲು ಹಾದಿಯಾದರು. ನನ್ನ ಎಲ್ಲಾ ಕೆಲಸಗಳಿಗೂ ಅಮ್ಮನೇ ಪ್ರೇರಣೆ. ಅವರಿಗೆ ನಾನು ರಂಗಭೂಮಿಯಲ್ಲಿ ಕೆಲಸ ಮಾಡುವುದು ಇಷ್ಟ ಇರಲಿಲ್ಲ. ನಾನು ಇದೇ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಅಮ್ಮ ಬದುಕಿದ್ದ ದಿನಗಳಲ್ಲಿ ತೀರಾ ಕಷ್ಟ ಇತ್ತು. ಆಸ್ಪತ್ರೆಯ ಬಿಲ್‌ ಕಟ್ಟಲೂ ದುಡ್ಡು ಇರಲಿಲ್ಲ. ಅನಾರೋಗ್ಯ ಅವರನ್ನು ಬಳಲಿಸಿತ್ತು. ಒಳ್ಳೆದಿನಗಳು ಬಂದಾಗ ನೋಡಲು ಅಮ್ಮನೇ ಇಲ್ಲ’ ಎಂದು ತಾಯಿಯೊಂದಿಗಿನ ದಿನಗಳನ್ನು ನೆನೆದರು. 

‘ನಟ ಬಿರಾದಾರ್‌ ಅವರು ಅಪ್ಪನೊಂದಿಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆ ದಿನ ಅವರು ಅನಿವಾರ್ಯ ಕಾರಣದಿಂದ ನಟಿಸಲಾಗಲಿಲ್ಲ. ಆ ಪಾತ್ರವನ್ನು ನಾನು ಮಾಡುವ ಮೂಲಕ ರಂಗಭೂಮಿ ಕ್ಷೇತ್ರಕ್ಕೆ ಕಾಲಿಟ್ಟೆ’ ಎಂದು ನಟನಾ ಆರಂಭ ಪಯಣ ಸ್ಮರಿಸಿಕೊಳ್ಳುತ್ತಾರೆ ರಾಜ್‌ಗುರು.

ಸುರಾನಾ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ರಂಗಭೂಮಿ ನಂಟು ಬೆಳೆಸಿಕೊಂಡ ರಾಜ್‌ಗುರು 400 ನಾಟಕಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. 13 ನಾಟಕಗಳನ್ನು ನಿರ್ದೇಶಿಸಿದ್ದಾರೆ. ‘ಸಾತ್ವಿಕ’ ರಂಗತಂಡವನ್ನು ಕಟ್ಟಿದ್ದಾರೆ. ಅವರ ಪತ್ನಿ ನಯನಾ ಸೂಡ ಅವರು ಕಟ್ಟಿದ ‘ರಂಗಪಯಣ’ ತಂಡವನ್ನೂ ಜೊತೆಯಾಗಿ ಮುನ್ನಡೆಸುತ್ತಿದ್ದಾರೆ. 

‘ಬದುಕು ಜಟಕಾಬಂಡಿ‘ ರಾಜ್‌ಗುರು ರಚಿಸಿ ನಿರ್ದೇಶಿಸಿದ ಮೊದಲ ನಾಟಕ. ಶ್ರದ್ಧಾ, ಬಲ್ಲಮೂಲಗಳ ಪ್ರಕಾರ, ಭೂಮಿ, ಒಂದಾನೊಂದು ಕಾಲದಲ್ಲಿ, ಗೌಡರ ಕ್ವಾಣ ಒದರ್‌ತೈತಿ, ನಾಟಕಗಳು ಜನಪ್ರಿಯತೆ ಗಳಿಸಿವೆ. ’55 ನಿಮಿಷದ ಒಂದು ಪ್ರೇಮ ಕಥೆ‘ ನಾಟಕ ಒಂಬತ್ತು ವೇದಿಕೆಗಳಲ್ಲಿ ಒಂದೇ ಸಮಯದಲ್ಲಿ ಪ್ರದರ್ಶನಗೊಂಡು ಲಿಮ್ಕಾ ದಾಖಲೆಗೆ ಸೇರ್ಪಡೆಗೊಂಡಿದೆ. 

ಬಾಗಲಕೋಟೆ ಜಿಲ್ಲೆಯ ಮಹಲಿಂಗಪುರದಲ್ಲಿ ಹುಟ್ಟಿದ ಅವರು ಬೆಂಗಳೂರು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದು ಅವರ ಕನಸು. 

‘ಮೊದಲ ಬಾರಿಗೆ ’ಅಂಬಿ‘ ಸಿನಿಮಾದಲ್ಲಿ ‘ಕ್ಯಾಚ್‌ ಹಿಡಿ..‘ ಹಾಡಿಗೆ ಧ್ವನಿಯಾದೆ‘. ‘ಸಾಲ ಮಾಡಿಯಾದ್ರು ತುಪ್ಪ ತಿನ್ನು‘ ಹಾಡು ಯಶಸ್ಸು ತಂದುಕೊಟ್ಟಿತು. 2014ರಲ್ಲಿ ಜೀ ಕನ್ನಡ ವಾಹಿನಿಯಿಂದ ’ಬೆಸ್ಟ್ ಅಪ್‌ಕಮಿಂಗ್‌ ಸಿಂಗರ್‌‘ ಪ್ರಶಸ್ತಿಯೂ ಸಿಕ್ಕಿತು’ ಎಂದು ತಮ್ಮ ಸಿನಿ ಪಯಣವನ್ನೂ ತೆರೆದಿಟ್ಟರು. ಈಗ ಜೋಗಿ ಅವರ ಕಾದಂಬರಿ ಆಧಾರಿತ ’ಸಮಯದ ಹಿಂದೆ ಸವಾರಿ‘ ಸಿನಿಮಾ ನಿರ್ದೇಶಿಸುತ್ತಿದ್ದಾರೆ. 

ಸಾತ್ವಿಕ ರಂಗತಂಡದಿಂದ ಪ್ರತಿ ವರ್ಷ ’ಶಂಕರ್‌ನಾಗ್‌ ನಾಟಕೋತ್ಸವ‘ ಆಯೋಜಿಸಲಾಗುತ್ತದೆ. ಮೇ ತಿಂಗಳಲ್ಲಿ ಐದು ದಿನ ಈ ಕಾರ್ಯಕ್ರಮ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !