ಸೌಲಭ್ಯಗಳ ಬಳಕೆಗೆ ಒಗ್ಗೂಡಿ

7
ನೇಕಾರ ಸಮುದಾಯಕ್ಕೆ ಜಿಲ್ಲಾಧಿಕಾರಿ ಸಲಹೆ

ಸೌಲಭ್ಯಗಳ ಬಳಕೆಗೆ ಒಗ್ಗೂಡಿ

Published:
Updated:
Prajavani

ಬಾಗಲಕೋಟೆ: ‘ಸಮುದಾಯಕ್ಕೆ ಸರ್ಕಾರ ನೀಡಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಬೇಕಾದರೆ ಮೊದಲು ನೇಕಾರರೆಲ್ಲ ಒಗ್ಗಟ್ಟಾಗಬೇಕು’ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜವಳಿ ಮಂತ್ರಾಲಯ ಹಮ್ಮಿಕೊಂಡಿದ್ದ ‘ಹಸ್ತಕಲಾ ಸಹಯೋಗ ಶಿಬಿರ’ ಉದ್ಘಾಟಿಸಿ  ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಜವಳಿ ಅಭಿವೃದ್ಧಿಗಾಗಿ ಆಯ್ಕೆ ಮಾಡಿಕೊಂಡಿರುವ ಕೆಲವೇ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯೂ ಸೇರಿದೆ. ಅದು ಸಂತಸದ ವಿಷಯ’ ಎಂದರು.

‘ಕೇಂದ್ರ ಸರ್ಕಾರದ ಗಮನ ಸೆಳೆದಿರುವ ಈ ಜಿಲ್ಲೆಯ ನೇಕಾರರು ಸರ್ಕಾರದಿಂದ ದೊರೆಯಬಹುದಾದ ಸಾಲ ಸೌಲಭ್ಯ, ತರಬೇತಿ, ಮಕ್ಕಳ ಶಿಕ್ಷಣ, ಕುಟುಂಬ ವಿಮಾ ಮೊದಲಾದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದರು.

‘ನೇಕಾರರು ಸಂಘಟನೆಗೆ ಆದ್ಯತೆ ನೀಡಿ ಗ್ರಾಮ, ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಒಕ್ಕೂಟವನ್ನು ರಚಿಸಿಕೊಳ್ಳಬೇಕು. ಜಿಲ್ಲೆಯ ನೇಕಾರರು  ಕೈಮಗ್ಗ ಮೂಲದಿಂದ ಬಂದವರಾಗಿದ್ದು, ಆಧುನಿಕತೆಗೆ ತಕ್ಕಂತೆ ವಿದ್ಯುತ್ ಮಗ್ಗಗಳಿಂದ ನೇಕಾರಿಕೆ ಆರಂಭಿಸಿದ್ದಾರೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಇಬ್ಬರೂ ಆರ್ಹರಾಗಿದ್ದಾರೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ವಿಭಾಗದ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ  ಜಿ.ಟಿ.ಕುಮಾರ್ ಮಾತನಾಡಿ, ‘ಜಿಲ್ಲೆಯ ನೇಕಾರರಿಗೆ ಬಹು ಬೇಡಿಕೆ ಇದೆ. ಇಲ್ಲಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತಿದೆ. ಇಷ್ಟಾದರೂ ನೇಕಾರರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆರ್ಥಿಕ ನೆರವು ದೊರೆಯುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ನೇಕಾರರಿಗೆ ಸಾಲ ನೀಡಲು ಭದ್ರತೆ ಕೇಳುತ್ತಿರುವ ಕಾರಣ ಕೇಂದ್ರ ಸರ್ಕಾರ ಮುದ್ರಾ ಯೋಜನೆ ಆರಂಭಿಸಿದೆ. ಅದರ ಮೂಲಕವಾದರೂ ನೇಕಾರರಿಗೆ ಸಾಲ ನೀಡಬೇಕು’ ಎಂದರು.

ಸಮಾರಂಭದಲ್ಲಿ ಜವಳಿ ಮಂತ್ರಾಲಯದಿಂದ ನೇಕಾರರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಗೋಪಾಲ ರೆಡ್ಡಿ, ಇಗ್ನೊ ಸಂಸ್ಥೆಯ ರಾಧಾ, ವಿ.ಎಂ.ಪ್ರಸಾದ್, ವಿಜಯ್ ಉಪರಿ, ಜಿ.ಎಸ್.ಗೋವಿ, ರಾಘವೇಂದ್ರ, ಸತೀಶ ಕಮಲದಿನ್ನಿ, ಪಿತಾಂಬರ ಹವೇಲಿ, ಸತೀಶ ಕಾಪಸಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !