ಮಹಿಳೆಯರ ಬಳಿ ಹಣ ಸಂಗ್ರಹಿಸದಂತೆ ಬೆದರಿಕೆ

ಗುರುವಾರ , ಏಪ್ರಿಲ್ 25, 2019
21 °C

ಮಹಿಳೆಯರ ಬಳಿ ಹಣ ಸಂಗ್ರಹಿಸದಂತೆ ಬೆದರಿಕೆ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನಂದಾವರ ಗ್ರಾಮದಲ್ಲಿ ಮುಸ್ಲಿಂ ಮಹಿಳೆಯರಿಂದ ಹಣ ಸಂಗ್ರಹಿಸಲು ಬಾರದಂತೆ ಕಿರು ಹಣಕಾಸು ಸಂಸ್ಥೆಯೊಂದರ ಪುರುಷ ನೌಕರನಿಗೆ ಯುವಕರ ಗುಂಪೊಂದು ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಸ್ವಸಹಾಯ ಗುಂಪಿನ ಮಹಿಳೆಯರಿಂದ ಸಾಲದ ಕಂತಿನ ಮೊತ್ತ ಪಡೆಯಲು ಬಂದ ಯುವಕನನ್ನು ಗುಂಪೊಂದು ಅಡ್ಡಗಟ್ಟಿ ಬೆದರಿಸುತ್ತಿರುವುದು ವಿಡಿಯೊದಲ್ಲಿದೆ. ‘ನಮ್ಮ ಮಹಿಳೆಯರ ಬಳಿ ಹಣ ಸಂಗ್ರಹಿಸಲು ಬರಬಾರದು. ಹೆಣ್ಣು ಮಕ್ಕಳನ್ನೇ ಹಣ ಸಂಗ್ರಹಿಸಲು ಕಳುಹಿಸಬೇಕು. ನೀನೇ ಬರುವುದಾದಲ್ಲಿ ಒಬ್ಬ ಸ್ತ್ರೀಯನ್ನು ಜೊತೆಗೆ ಕರೆತರಬೇಕು. ಆಕೆಯೇ ಸ್ತ್ರೀಯರಿಂದ ಹಣ ಸಂಗ್ರಹಿಸಬೇಕು’ ಎಂದು ಗುಂಪಿನಲ್ಲಿದ್ದವರು ಹೇಳುತ್ತಿರುವುದು ವಿಡಿಯೊ ತುಣುಕಿನಲ್ಲಿದೆ.

ತಮ್ಮ ಸಂಸ್ಥೆಯಲ್ಲಿ ಹಣ ಸಂಗ್ರಹಿಸಲು ಹೆಣ್ಣು ಮಕ್ಕಳು ಇಲ್ಲ ಎಂದು ಆತ ಉತ್ತರಿಸುತ್ತಾನೆ. ಈ ಘಟನೆಗೆ ಸಂಬಂಧಿಸಿದ ಎರಡು ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಆದರೆ, ಘಟನೆ ಯಾವಾಗ ನಡೆದಿದೆ ಎಂಬ ಖಚಿತ ಮಾಹಿತಿ ಲಭ್ಯವಾಗುವುದಿಲ್ಲ.

ಹಿಂದೂ ಯುವಕನಿಗೆ ಬೆದರಿಕೆ ಹಾಕಿರುವುದಕ್ಕೆ ಪ್ರತಿಯಾಗಿ ಮುಸ್ಲಿಂ ಮೀನು ವ್ಯಾಪಾರಿಯೊಬ್ಬನಿಗೆ ಇನ್ನೊಂದು ಗುಂಪು ಬೆದರಿಕೆ ಹಾಕಿರುವ ವಿಡಿಯೊ ಕೂಡ ವೈರಲ್‌ ಆಗಿದೆ. ‘ಅವರು ಹಾಗೆ ಮಾಡಿದ್ದಾರೆ. ಅದಕ್ಕಾಗಿ ನಾವು ಹೀಗೆ ಮಾಡುತ್ತಿದ್ದೇವೆ’ ಎಂದು ಬೆದರಿಕೆ ಹಾಕಿದವರು ಹೇಳುತ್ತಿರುವುದು ವಿಡಿಯೊದಲ್ಲಿದೆ.

ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದಿಲ್ಲ. ಪ್ರಕರಣದಲ್ಲಿ ಭಾಗಿಯಾದವರ ಪತ್ತೆಗೆ ಕ್ರಮ ಜರುಗಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !