ಮಂಗಳೂರಿನ ಕಾವೂರು: ಶಿವರಾತ್ರಿ ಜಾಗರಣೆ ಸ್ಥಗಿತಕ್ಕೆ ಪೊಲೀಸರ ತಾಕೀತು

ಸೋಮವಾರ, ಮಾರ್ಚ್ 25, 2019
33 °C
ತಡರಾತ್ರಿ ನಡೆದ ಘಟನೆ

ಮಂಗಳೂರಿನ ಕಾವೂರು: ಶಿವರಾತ್ರಿ ಜಾಗರಣೆ ಸ್ಥಗಿತಕ್ಕೆ ಪೊಲೀಸರ ತಾಕೀತು

Published:
Updated:

ಮಂಗಳೂರು: ಇಲ್ಲಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿ ನಡೆಯುತ್ತಿದ್ದ ಶಿವರಾತ್ರಿ ಜಾಗರಣೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಪೊಲೀಸರು ತಾಕೀತು ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಜಾಗರಣೆ ನಿಮಿತ್ತ ದೇವಸ್ಥಾನದಲ್ಲಿ ಯಕ್ಷಗಾನ ಆಯೋಜಿಸಲಾಗಿತ್ತು. ತಡರಾತ್ರಿ 2.30ರ ಸುಮಾರಿಗೆ ಅಲ್ಲಿಗೆ ತೆರಳಿದ ಕಾವೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಕೆ.ಆರ್‌.ನಾಯ್ಕ್‌, ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ತಾಕೀತು ಮಾಡಿದ್ದಾರೆ. ಸಾರ್ವಜನಿಕರು ಪೊಲೀಸರ ಕ್ರಮವನ್ನು ಆಕ್ಷೇಪಿಸಿದ್ದಾರೆ. ಆಗ, ‘ಐಜಿಪಿಯವರಿಂದ ನಮಗೆ ಆದೇಶ ಬಂದಿದೆ’ ಎಂದು ಇನ್‌ಸ್ಪೆಕ್ಟರ್‌ ಸಮಜಾಯಿಷಿ ನೀಡಿದ್ದಾರೆ.

ಇದೇ ವಿಚಾರವಾಗಿ ಕೆಲಕಾಲ ಸಾರ್ವಜನಿಕರು ಮತ್ತು ಇನ್‌ಸ್ಪೆಕ್ಟರ್‌ ನಡುವೆ ತೀವ್ರ ವಾಕ್ಸಮರ ನಡೆದಿದೆ. ಬಳಿಕ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ.ಭರತ್‌ ಶೆಟ್ಟಿ ಸ್ಥಳಕ್ಕೆ ಬಂದಿದ್ದಾರೆ. ಅವರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದಲೇ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆ. ಸಚಿವರು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಜೊತೆ ಮಾತನಾಡಿ ಕಾರ್ಯಕ್ರಮ ಮುಂದುವರಿಸಲು ಅವಕಾಶ ಕೊಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಜಾಗರಣೆ ಕಾರ್ಯಕ್ರಮ ನಿಲ್ಲಿಸಲು ಯತ್ನಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ವಿಶ್ವ ಹಿಂದೂ ಪರಿಷತ್‌ ಪ್ರತ್ಯೇಕ ಪತ್ರಿಕಾಗೋಷ್ಠಿಗಳನ್ನೂ ಕರೆದಿವೆ.

ವಿಚಾರಣೆಗೆ ಸೂಚನೆ: ಘಟನೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಮಿಷನರ್ ಸಂದೀಪ್‌ ಪಾಟೀಲ್‌, ‘ಕಾವೂರು ಠಾಣೆ ಇನ್‌ಸ್ಪೆಕ್ಟರ್‌ ಧಾರ್ಮಿಕ ಕಾರ್ಯಕ್ರಮ ನಿಲ್ಲಿಸಲು ಯತ್ನಿಸಿದ್ದರು ಎಂಬ ದೂರುಗಳು ಬಂದಿವೆ. ಅದಕ್ಕೂ ಮೊದಲು ಅವರು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರಲಿಲ್ಲ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಡಿಸಿಪಿಗೆ ಸೂಚನೆ ನೀಡಿದ್ದೇನೆ’ ಎಂದರು.

‘ನಾನು ಕಾರ್ಯಕ್ರಮ ಸ್ಥಗಿತಗೊಳಿಸಲು ಹೇಳಿಲ್ಲ. ಧ್ವನಿವರ್ಧಕದ ಶಬ್ದದ ಪ್ರಮಾಣವನ್ನು ತಗ್ಗಿಸುವಂತೆ ಸೂಚಿಸಿದ್ದೆ. ಯಾವುದೇ ರೀತಿಯಲ್ಲೂ ತಪ್ಪು ಮಾಡಿಲ್ಲ’ ಎಂದು ಇನ್‌ಸ್ಪೆಕ್ಟರ್‌ ಕೆ.ಆರ್‌.ನಾಯ್ಕ್‌ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !