ಭಾನುವಾರ, ಆಗಸ್ಟ್ 9, 2020
22 °C
ತನ್ನೆಲ್ಲ ದಮನಗಳ ಮೂಲವಾದ ಪುರುಷನನ್ನು ತನ್ನ ಶತ್ರು ಎಂದು ನೇರವಾಗಿ ಪರಿಗಣಿಸಲಾಗದ ಸ್ಥಿತಿ ಮಹಿಳೆಯದು

ಅದೃಶ್ಯ ಶತ್ರು ವಿರುದ್ಧದ ಒಳಬಂಡಾಯ

ಡಾ. ಎಚ್.ಎಸ್. ಅನುಪಮಾ Updated:

ಅಕ್ಷರ ಗಾತ್ರ : | |

Prajavani

ಭೂಮಿಗೆ ಕಣ್ಣು ತೆರೆದಾಗಿನಿಂದ ಒಳಗನ್ನು ಒತ್ತಿಟ್ಟುಕೊಂಡು ಮೂಕವಾಗಿರುವ ಹೆಣ್ಣುಗಳು ಮಾತಾಡುವುದು ಕಷ್ಟ, ಆಡಿದರೆ ಲೋಕಕ್ಕೆ ಅರಗಿಸಿಕೊಳ್ಳುವುದು ಇನ್ನೂ ಕಷ್ಟ. ಕಹಿಸತ್ಯ ಜೀರ್ಣಿಸಿಕೊಳ್ಳಲಾಗದ್ದಕ್ಕೋ, ಮಹಿಳಾ ಸಮಾನತೆ ಒಪ್ಪಿಕೊಂಡರೆ ತಾವನುಭವಿಸಬೇಕಾದ ಅನನುಕೂಲ, ಅಭದ್ರತೆಗೋ ಎಷ್ಟೋ ಸಹವರ್ತಿಗಳು ಮಹಿಳಾ ಚಳವಳಿ ಬಗೆಗೆ ಹಗುರವಾಗಿ ಮಾತಾಡುತ್ತಾರೆ. ಅಂಥದ್ದೊಂದು ಸಂಭವಿಸುತ್ತಿದೆಯೇ ಎಂದು ಅನುಮಾನಿಸುತ್ತಾರೆ. 

ಒಮ್ಮೆ ನನ್ನೊಡನೆ ವೇದಿಕೆ ಹಂಚಿಕೊಂಡ ಲೇಖಕರೊಬ್ಬರು, ‘ಮಹಿಳಾ ಚಳವಳಿ ಎನ್ನುವುದೆಲ್ಲ ಲಿಪ್‍ಸ್ಟಿಕ್, ಬಾಬ್‍ಕಟ್, ಬಿಂದಿಧಾರಿ ಮೇಲ್ವರ್ಗದ ಹೆಂಗಸರ ಅರ್ಬನ್ ಬಡಬಡಿಕೆಗಳು. ರೈತ ಚಳವಳಿಯ ಬ್ಯಾನರ್, ಬೋರ್ಡ್, ಹಸಿರು ಟವೆಲ್ಲು ಅಲ್ಲಿಲ್ಲಿ ಕಾಣುತ್ತವೆ. ಅಂಬೇಡ್ಕರ್ ಫೋಟೊ, ನೀಲಿ ಬಾವುಟ, ದಲಿತ ಸಂಘಟನೆಯ ಬೋರ್ಡ್ ಎಲ್ಲೆಲ್ಲೂ ಕಾಣುತ್ತವೆ. ಹಲವೆಡೆಗಳಲ್ಲಿ ಕಾರ್ಮಿಕ ಸಂಘಟನೆಗಳ ಕೆಂಬಾವುಟ; ಕನ್ನಡ ಸಂಘಗಳ ಹಳದಿ– ಕೆಂಪು ಬಾವುಟ ಕಾಣುತ್ತವೆ. ಅದೇ ಮಹಿಳಾ ಚಳವಳಿ ಇದೇಂತ ತೋರಿಸೋಕೆ ಏನಿರುತ್ತೆ?’ ಎಂದು ವ್ಯಂಗ್ಯವಾಡಿದರು.

ಹೌದು, ರೈತರಿಗೆ, ದಲಿತರಿಗೆ, ಕಾರ್ಮಿಕರಿಗೆ, ಕನ್ನಡಿಗರಿಗೆ ‘ಶತ್ರು’ ಎಂದು ಗುರುತಿಸಬಹುದಾದ ವಿರುದ್ಧ ಜನವರ್ಗ ಕಾಣಸಿಗುತ್ತದೆ. ಆದರೆ ಮಹಿಳೆಗೆ/ಮಹಿಳಾ ಚಳವಳಿಗೆ ತನ್ನ ಶತ್ರು ಎಂದು ತೋರಿಸಿಕೊಳ್ಳಲು ಏನಿದೆ? ತಾವನುಭವಿಸುವ ಎಲ್ಲ ದಮನಕ್ಕೂ ಕಾರಣವಾದ ಪಿತೃಪ್ರಧಾನ ವ್ಯವಸ್ಥೆಯ ಸಾಕಾರರೂಪಿಗಳಾದ ಪುರುಷರನ್ನು ಶತ್ರುಗಳೆನ್ನುವುದು ಹೇಗೆ? ಜನ್ಮಕೊಟ್ಟ ತಂದೆ; ಒಡನಾಡಿದ ಸೋದರರು; ಹೊತ್ತು, ಹೆತ್ತು, ತುತ್ತುಣಿಸಿ ಬೆಳೆಸಿದ ಗಂಡು ಮಕ್ಕಳು; ತನ್ನೊಳಗೆ ಬೆರೆತ ಗಂಡ; ಒಡನಾಡುವ ಬಂಧುಮಿತ್ರರು ನಮ್ಮ ಬದುಕಿನೊಳಗೊಂದಾಗಿ ಹೆಣೆದುಕೊಂಡು ಬದುಕಿನ ಭಾಗವೇ ಆಗಿರುವಾಗ, ಮಹಿಳೆಯರ ಹೋರಾಟ ಶತ್ರುವಿಲ್ಲದ ಹೋರಾಟವೇ ಆಗಿದೆ. ಅದು ಅದೃಶ್ಯ ಶತ್ರುವಿನ ವಿರುದ್ಧದ ಒಳಬಂಡಾಯವಾಗಿದೆ.

ಮಹಿಳಾ ಚಳವಳಿಯು ಪತಾಕೆ, ಬೋರ್ಡು, ಟವೆಲ್ಲು, ಫೋಟೊಗಳೊಡನೆ ರಾರಾಜಿಸಲಾಗದ ಒಳ ಬಂಡಾಯವಾಗಿರುವುದರಿಂದ ಉಳಿದ ಚಳವಳಿಗಳ ಪರಿಭಾಷೆ, ವ್ಯಾಖ್ಯಾನ ಇಲ್ಲಿ ಅನ್ವಯಿಸುವುದಿಲ್ಲ. ಯಾವುದೇ ಚಳವಳಿಯ ಕಾರಣ, ಸ್ವರೂಪ, ನಡೆಗಳನ್ನು ಆಯಾ ಕಾಲದ ಸಮಾಜವೇ ನಿರ್ಧರಿಸುತ್ತದೆ. ಈ ಕಾಲದ ಹೆಣ್ಣಿಗೆ ಹಲವು ಶೋಷಿತ ಐಡೆಂಟಿಟಿಗಳಿವೆ. ದಮನದ ಹಲವು ನೆಲೆಗಳಿವೆ. ಪರಿಸರ ನಾಶ, ಯುದ್ಧ, ನೆರೆ, ಬರ, ನಿರುದ್ಯೋಗ, ಗಣಿಗಾರಿಕೆ, ಕೃಷಿ ಬಿಕ್ಕಟ್ಟು, ವಲಸೆ ಮುಂತಾದ ಸಮಾಜದ ಸಕಲೆಂಟು ಸಮಸ್ಯೆ
ಗಳು ಮಹಿಳಾ ಸಮಸ್ಯೆಗಳೂ ಆಗಿವೆ. ಇವೆಲ್ಲವನ್ನೂ ಒಂದು ಸಂಘಟನೆ, ಒಂದು ಹೋರಾಟ, ಒಂದು ಸಿದ್ಧಾಂತ ಬದಲಾಯಿಸಲು ಸಾಧ್ಯವಿಲ್ಲ. ಎಂದೇ ಮಹಿಳೆಯರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಕಾರ್ಯಯೋಜನೆ ರೂಪಿಸುವ ಅನೇಕ ಸಂಘ, ಸಂಸ್ಥೆಗಳು ರೂಪುಗೊಂಡಿವೆ.

ವರದಕ್ಷಿಣೆ, ವೇಶ್ಯಾವಾಟಿಕೆ, ಸ್ತ್ರೀ ಭ್ರೂಣಹತ್ಯೆ, ಅತ್ಯಾಚಾರದಂಥ, ಹೆಣ್ಣೆಂಬ ಕಾರಣಕ್ಕೇ ಅನುಭವಿಸುವ ಸಂಕಟಗಳ ವಿರುದ್ಧ ಕಳೆದೊಂದು ಶತಮಾನದಲ್ಲಿ ಕರ್ನಾಟಕದ ನಾಲ್ದೆಸೆಯಲ್ಲೂ ನಡೆದ ಮಹಿಳಾ ಹೋರಾಟಗಳನ್ನು ಗಮನಿಸಿದರೆ, ಆಳ
ದಲ್ಲಿ ಎಲ್ಲವೂ ಲಿಂಗತಾರತಮ್ಯ ಹಾಗೂ ಅದರ ಮೂಲವಾದ ಪಿತೃಪ್ರಾಧಾನ್ಯವನ್ನೇ ಪ್ರಶ್ನಿಸುತ್ತಾ ರೂಪುಗೊಂಡ ಪ್ರತಿರೋಧಗಳಾಗಿವೆ. ಆದರೆ, ಒಂದು ನಾಯಕತ್ವದಡಿ ಬೃಹತ್ ಚಳವಳಿಯಾಗಿ ರೂಪುಗೊಳ್ಳದೇ ಹೋಗಿರುವುದರಿಂದ ಮಹಿಳಾ ಹೋರಾಟ ಚದುರಿದಂತೆ ಕಾಣುತ್ತಿದೆ. ಚಳವಳಿಯ ಮಾತಿರಲಿ, ಬಹುಪಾಲು ಮಹಿಳೆಯರಿಗೆ ತಾರತಮ್ಯ ಇದೆಯೆಂದೂ, ಅದರ ಮೂಲ ಯಾವುದೆಂದೂ ಅರ್ಥವಾಗಿಲ್ಲ. ದಮನದ ಬಲೆಯನ್ನು ಜಾಗರೂಕವಾಗಿ, ಗಟ್ಟಿಯಾಗಿ ಹೆಣೆಯಲಾಗಿದೆ. ‘ತೆರಣಿಯ ಹುಳು’ ತನಗರಿವಿಲ್ಲದೆ ತಾನೇ ಬಲೆ ನೇಯ್ದು ಬಂಧಿಸಿಕೊಳ್ಳುವಂತೆ ಹೆಣ್ಣು ತನ್ನ ಸುತ್ತ ತಾನೇ ಬೇಲಿ ಬಿಗಿದುಕೊಳ್ಳುವಂತೆ ಮಾಡಲಾಗಿದೆ. ಇದನ್ನು ದಾಟಲು ಸ್ವ ಬಿಡುಗಡೆ ಮುಖ್ಯ ಘಟ್ಟ. ಅದು ಸಾಧ್ಯವಾಗಲು ಗುಂಪುಗೂಡಿ ಹಂಚಿಕೊಳ್ಳುವುದು, ಸಾಮೂಹಿಕ ಪ್ರಯತ್ನ ಅತಿಮುಖ್ಯ. 

ವಿಜ್ಞಾನ, ತಂತ್ರಜ್ಞಾನಗಳಿಂದ ಸಾಧ್ಯವಾದ ಸಂವಹನ, ಹುಸಿವೇಗಗಳು ಮಹಿಳೆಯ ಸ್ಥಿತಿಗತಿಗಳಲ್ಲಿ ಗಮನಾರ್ಹ ಬದಲಾವಣೆಯಾಗಿದೆಯೇನೋ ಎನ್ನುವ ಭ್ರಮಾತ್ಮಕ ವಾತಾವರಣ ಸೃಷ್ಟಿಸಿವೆ. ಆದರೆ ಮಹಿಳೆಯ ಮೇಲೆ ಹೇರಲಾಗಿರುವ ಆದರ್ಶಗಳ ಭಾರ ಏನೂ ಕಡಿಮೆಯಾಗಿಲ್ಲ. ಇವತ್ತಿಗೂ ವಿಧವಾ ವಿವಾಹ, ವಿಚ್ಛೇದನ, ಒಂಟಿ ಪಾಲಕತನ, ಉದ್ಯೋಗ-ರಾಜಕೀಯ ರಂಗಗಳಲ್ಲಿ ಅತ್ಯುನ್ನತ ಸ್ಥಾನಗಳಿಗೇರುವುದು ಕಲ್ಲುಮುಳ್ಳಿನ ಬೆಂಕಿದಾರಿಯಾಗಿದೆ.

ಸುವರ್ಣಯುಗ ಎನ್ನುವುದೊಂದು ಇರಲು ಸಾಧ್ಯವಿಲ್ಲ. ಹೆಣ್ಣುಜೀವದ ಮಟ್ಟಿಗಂತೂ ಅದು ಬಂದೇ ಇಲ್ಲ. ಹೀಗಿರುವಾಗ ‘ನಾನು ಮಹಿಳೆ ಎನ್ನುವುದು ಗೊತ್ತು. ಆದರೆ ಅದು ನನ್ನ ಮಿತಿಯಲ್ಲ ಎನ್ನುವುದೂ ಗೊತ್ತು’ ಎನ್ನುವುದು ಹೆಣ್ಣುಜೀವಗಳ ಘೋಷವಾಕ್ಯವಾಗಬೇಕು. ಜನಚಳವಳಿಗಳು ಭಾರತೀಯ ಕೌಟುಂಬಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ಲಿಂಗಸೂಕ್ಷ್ಮ ಬದಲಾವಣೆ ತರುವತ್ತ ಗಮನ ಹರಿಸಬೇಕು. ಮಹಿಳೆ ಎಲ್ಲ ಹೋರಾಟಗಳ ಭಾಗವಾಗಬೇಕು ಹಾಗೂ ಎಲ್ಲ ಹೋರಾಟಗಳೂ ಮಹಿಳಾ ಸಮಸ್ಯೆಗಳನ್ನು ಪರಿಗಣಿಸಬೇಕು.

ಇದುವೇ ಮಹಿಳಾ ಸಬಲೀಕರಣದ ದಾರಿ. ಇದಾಗಲಿ ಜನಚಳವಳಿಗಳ ಅಂತಿಮ ಗುರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.