ಬುಧವಾರ, ಡಿಸೆಂಬರ್ 2, 2020
25 °C
ಇಂಡಿಯನ್ ಸೂಪರ್ ಲೀಗ್: ನಾರ್ತ್‌ ಈಸ್ಟ್‌ಗೆ ಜಯ

ಬಿಎಫ್‌ಸಿ ಫೈನಲ್ ಹಾದಿ ಕಠಿಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ನಾರ್ತ್‌ ಈಸ್ಟ್ ಯುನೈಟೆಡ್ ತಂಡವು ಗುರುವಾರ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ಜಯಿಸಿತು. ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ನಿರಾಸೆ ಅನುಭವಿಸಿತು.

ಇಂದಿರಾಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ನಾರ್ತ್‌ ಈಸ್ಟ್‌ ತಂಡವು 2–1ರಿಂದ ಬಿಎಫ್‌ಸಿಯನ್ನು ಸೋಲಿಸಿತು.  ಇದರಿಂದಾಗಿ ಬಿಎಫ್‌ಸಿಯ ಫೈನಲ್‌ ಹಾದಿಯು ಕಠಿಣವಾಗಿದೆ. ಇದೇ 11ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಲೆಗ್‌ನಲ್ಲಿ ಜಯಿಸಬೇಕು ಮತ್ತು ನಾರ್ತ್‌ ಈಸ್ಟ್‌ಗಿಂತ ಒಟ್ಟು ಗೋಲು ಗಳಿಕೆಯಲ್ಲಿಯೂ ಮೇಲುಗೈ ಸಾಧಿಸಬೇಕು. ಆಗ ಮಾತ್ರ ಫೈನಲ್‌ ಪ್ರವೇಶ ಸಿಗುವ ಸಾಧ್ಯತೆ ಇದೆ.

ತವರಿನ ಪ್ರೇಕ್ಷಕರ ಮುಂದೆ  ಮಿಂಚಿದ್ದ ನಾರ್ತ್‌ ಈಸ್ಟ್‌  ತಂಡದ ರಿದೀಂ ತಾಂಗ್ ಪಂದ್ಯದ 20ನೇ ನಿಮಿಷದಲ್ಲಿಯೇ ತಂಡಕ್ಕೆ 1–0 ಮುನ್ನಡೆ ಒದಗಿಸಿಕೊಟ್ಟರು. ಬಿಎಫ್‌ಸಿಯ ರಕ್ಷಣಾ ಕೋಟೆಯನ್ನು ಮುರಿದು ಒಳನುಗ್ಗಿದ ಅವರು ಮಿಂಚಿನ ವೇಗದಲ್ಲಿ ಗಳಿಸಿದ ಗೋಲು ತಂಡದ ಗೆಲುವಿಗೆ ಮೊದಲ ಮೆಟ್ಟಿಲಾಯಿತು.  ಟೂರ್ನಿಯ ಯಶಸ್ವಿ ಗೋಲ್‌ಕೀಪರ್, ಬಿಎಫ್‌ಸಿಯ ಗುರುಪ್ರೀತ್ ಸಿಂಗ್ ಸಂಧು ಅವರ ಪ್ರಯತ್ನವೂ ಫಲಿಸಲಿಲ್ಲ.

ನಂತರದ ಒಂದು ತಾಸು ಬಿಎಫ್‌ಸಿ ಆಟಗಾರರ ಗೋಲು ಹೊಡೆಯುವ ಪ್ರಯತ್ನಗಳಿಗೆ ನಾರ್ತ್‌ ಈಸ್ಟ್‌ ರಕ್ಷಣಾ ಪಡೆಯುವ ಬಂಡೆಗಲ್ಲಿನಂತೆ ಅಡ್ಡ ನಿಂತಿತು. ಆದರೂ  ಬಿಎಫ್‌ಸಿ ಹೋರಾಟ ಬಿಡಲಿಲ್ಲ. ಅದಕ್ಕೆ ತಕ್ಕಂತೆ 82ನೇ ನಿಮಿಷದಲ್ಲಿ ಸಿಸ್ಕೊ ಹೆಮಾಂಜ್ ಗೋಲು ಗಳಿಸಿದರು. ಇದರಿಂದ ಬಿಎಫ್‌ಸಿ 1–1 ಸಮಬಲ ಸಾಧಿಸಿತು.

ಆದರೆ ಹೆಚ್ಚುವರಿ ಅವಧಿಯಲ್ಲಿ ಲಭಿಸಿದ ಪೆನಾಲ್ಟಿ ಕಿಕ್‌ನಲ್ಲಿ ನಾರ್ತ್‌ ಈಸ್ಟ್‌ ತಂಡದ ಜುವಾನ್ ಕ್ರೂಜ್ ಮಸಿಡಾ ಗೋಲು ಹೊಡೆದರು. ಇದರಿಂದಾಗಿ ಬಿಎಫ್‌ಸಿ ತಂಡವು ಸೋಲಿನ ನಿರಾಸೆ ಅನುಭವಿಸಿತು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು