ಲಾಲ್‌ಬಾಗ್‌: ಡಾಂಬರು ಹಾಕಿಸಲು ಒತ್ತಾಯ

ಸೋಮವಾರ, ಮಾರ್ಚ್ 25, 2019
21 °C

ಲಾಲ್‌ಬಾಗ್‌: ಡಾಂಬರು ಹಾಕಿಸಲು ಒತ್ತಾಯ

Published:
Updated:

ಬೆಂಗಳೂರು: ‘ಲಾಲ್‌ಬಾಗ್‌ ಉದ್ಯಾನದಲ್ಲಿ ಗುಂಡಿಬಿದ್ದ ರಸ್ತೆಗಳನ್ನು ದುರಸ್ತಿಗೊಳಿಸಿ ಡಾಂಬರು ಹಾಕಿಸಬೇಕು’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್‌.ದೊರೆಸ್ವಾಮಿ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಆಳವಾದ ಗುಂಡಿಗಳು ಬಿದ್ದಿರುವ ಕಾರಣ ಮುಂಜಾನೆ 4ರ ವೇಳೆ ವಾಯುವಿಹಾರಕ್ಕೆ ಬರುವವರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಇವೆ. ಇದರಿಂದ ನಡಿಗೆಗಾರರು ಆತಂಕದಿಂದ ಹೆಜ್ಜೆ ಇಡುವಂತಾಗಿದೆ. ಈ ಬಗ್ಗೆ ದೂರವಾಣಿ ಮತ್ತು ಮೌಖಿಕವಾಗಿ ಸಾಕಷ್ಟು ಸಲ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ವಿವರಿಸಿದ್ದಾರೆ.

‘ಡಾಂಬರೀಕರಣಕ್ಕೆ ಎರಡು ವರ್ಷಗಳಿಂದ ಬಿಬಿಎಂಪಿಯಿಂದ‌ ಹಣ ಬಿಡುಗಡೆಗೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ  ರಸ್ತೆಗಳು ಇನ್ನಷ್ಟು ಹದಗೆಡುತ್ತಿವೆ. ಉದ್ಯಾನಕ್ಕೆ ಬರುವ ನಡಿಗೆದಾರರ ಸಂಖ್ಯೆಯೂ ಕ್ಷೀಣಿಸುತ್ತಿದೆ. ತೋಟಗಾರಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ’ ಎಂದು ಅವರು ಪತ್ರದಲ್ಲಿ ಆರೋ‍ಪಿಸಿದ್ದಾರೆ.

‘ಇದೇ ನಮ್ಮ ಕೊನೆಯ ಅಹವಾಲು. 15 ದಿನಗಳ ಒಳಗೆ ರಸ್ತೆಗಳಿಗೆ ಡಾಂಬರು ಹಾಕದಿದ್ದರೆ, ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಆದ್ದರಿಂದ ಕೊಟ್ಟ ಗಡುವಿನೊಳಗೆ ಕೆಲಸ ಮುಗಿಸಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.

ಕೆ.ಆನಂದರಾವ್‌, ಹರೀಶ್‌ ಕೆ.ವಿ., ಸಿ.ಎಸ್‌.ಬನಶಂಕರಯ್ಯ, ಸರೋಜಮ್ಮ ಸೇರಿದಂತೆ 562 ನಡಿಗೆದಾರರು ಮುಖ್ಯಕಾರ್ಯದರ್ಶಿ ಅವರಿಗೆ ಸಲ್ಲಿಸಿರುವ ಪತ್ರಕ್ಕೆ ಸಹಿ ಹಾಕಿದ್ದಾರೆ.

ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ, ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್‌, ಕಾರ್ಯದರ್ಶಿ ಮಹೇಶ್ವರರಾವ್ ಅವರಿಗೂ ಈ ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !