ಎತ್ತಿನಹೊಳೆ ಯೋಜನೆಗೆ ವೇಗ ಕೊಡಲಿ

ಶನಿವಾರ, ಮಾರ್ಚ್ 23, 2019
31 °C
ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಶಾಸಕ ಡಾ.ಕೆ.ಸುಧಾಕರ್ ಒತ್ತಾಯ

ಎತ್ತಿನಹೊಳೆ ಯೋಜನೆಗೆ ವೇಗ ಕೊಡಲಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಈ ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಎತ್ತಿನಹೊಳೆ ಯೋಜನೆಗೆ ಕೊಟ್ಟಿದ್ದ ವೇಗವನ್ನು ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಕೊಡಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಗಂಗರೇಕಾಲುವೆಯಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಹೆದ್ದಾರಿ 7 ರಿಂದ ಗಂಗರೇಕಾಲುವೆ ದಿಬ್ಬೂರು ತಮ್ಮನಾಯಕನಹಳ್ಳಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ -234 ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎತ್ತಿನಹೊಳೆ ಯೋಜನೆಗೆ ಕೆಲವೆಡೆ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ಅದಕ್ಕಾಗಿ ಅಧಿಕಾರಿಗಳು ನೇಮಕವಾಗಿಲ್ಲ. ಆದಷ್ಟು ಬೇಗ ಅಧಿಕಾರಿಗಳನ್ನು ನೇಮಕ ಮಾಡಬೇಕು. ತ್ವರಿತವಾಗಿ ಎತ್ತಿನಹೊಳೆ ನೀರು ಬರದಿದ್ದರೆ ಈ ಭಾಗದ ಜನರು ತತ್ತರಿಸಿ ಹೋಗುತ್ತಾರೆ’ ಎಂದು ತಿಳಿಸಿದರು.

‘ಬಯಲು ಸೀಮೆ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ, ತಾಪಮಾನ ಹೆಚ್ಚಳವಾಗಿದೆ. ಇವತ್ತು ಶೇ50ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿ ಹೋಗಿವೆ. ಅದಕ್ಕಾಗಿ ಎತ್ತಿನಹೊಳೆ, ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಕೆರೆ ತುಂಬುವ ಯೋಜನೆ ರೂಪಿಸಿದ್ದೇವೆ. ಆದರೆ ನೀರಾವರಿ ಹೋರಾಟಗಾರರು ಎಂದು ಹೇಳಿಕೊಂಡು ನಿಮ್ಮ ಮಧ್ಯಯೇ ಇದ್ದವರು ಇವತ್ತು ಸುಪ್ರೀಂ ಕೋರ್ಟ್‌ನಿಂದ ತಾತ್ಕಾಲಿಕ ತಡೆ ತಂದು ನಿಮಗೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಾವಿರಾರು ಕೆರೆಗಳು ಇರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನಮಗೆ ಜೀವನದಿಗಳಿಲ್ಲ. ಕಳೆದ 15 ವರ್ಷಗಳಿಂದ ಮಳೆ ಇಲ್ಲ. ಹೀಗಾಗಿ ನಮ್ಮ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದರೂ ಕೆವರು ಮರಳು ಮಾರುವ ಕೆಲಸಕ್ಕೆ ಕೈಹಾಕಿದ್ದಾರೆ. ಅದನ್ನು ತಡೆಯುವಂತೆ ಕಂದಾಯ ಮತ್ತು ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿರುವೆ’ ಎಂದರು.

‘ಅನ್ನಭಾಗ್ಯ ಯೋಜನೆಯಿಂದಾಗಿ ಈ ಭಾಗದ ಜನ ಗುಳೆ ಹೋಗುತ್ತಿಲ್ಲ. ಆದರೆ ಅದೇ ಶಾಶ್ವತ ಪರಿಹಾರವಲ್ಲ. ನಿಮಗೆ ನೀರು ತಂದು ಕೊಡದೆ ಹೋದರೆ ಜನರ ಜೀವನ ಕಷ್ಟಕರವಾಗುತ್ತದೆ. ರೈತರಿಗೆ ಸಾಲ ಮನ್ನಾ ಒಂದೇ ಪರಿಹಾರವಲ್ಲ. ನಿಜವಾಗಿ ರೈತರು ಸಬಲರಾಗಬೇಕಾದರೆ ಸಮಗ್ರ ಕೃಷಿ ನೀತಿ ರಚನೆ ಮಾಡಬೇಕು’ ಎಂದು ಹೇಳಿದರು.

‘ಒಂದೇ ವರ್ಷದಲ್ಲಿ ರಾಜ್ಯ ಸರ್ಕಾರ ₹45 ಸಾವಿರ ಕೋಟಿ ಕಟ್ಟಲು ಆಗುವುದಿಲ್ಲ. ಅದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ₹11 ಸಾವಿರ ಕೋಟಿ ತೆಗೆದಿರಿಸಿದೆ. ಈ ವಿಚಾರದಲ್ಲಿ ಕುಮಾರಸ್ವಾಮಿ ಅವರನ್ನು ನಾನು ದೂಷಣೆ ಮಾಡುವುದಿಲ್ಲ. ಆದರೆ ನಿಜವಾದ ಪರಿಸ್ಥಿತಿ ನಾವು ಹೇಳಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಆಗದೆ, ಹೊಸ ಸಾಲ ಪಡೆಯಲು ಅನರ್ಹರಾಗುತ್ತಿದ್ದಾರೆ’ ಎಂದು ತಿಳಿಸಿದರು.

ಕ್ರೆಡಿಲ್ ಸಂಸ್ಥೆ ವತಿಯಿಂದ ಇನಮಿಂಚೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ಶಾಸಕರು, ಗಂಗರೇಕಾಲುವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹21.20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಚಿಕ್ಕಬಳ್ಳಾಪುರ ನಗರದ 14 ಹಾಗೂ 30 ನೇ ವಾರ್ಡುಗಳಲ್ಲಿ ₹95 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಯಲುವಹಳ್ಳಿ ಎನ್ ರಮೇಶ್, ಪ್ರಸಾದ್, ಮೋಹನ್, ವರದರಾಜು, ಚನ್ನಕೃಷ್ಣಾರೆಡ್ಡಿ, ರಾಮಪ್ಪ, ಶ್ರೀಧರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !