‘ನನ್ನ ಪೀಠದಿಂದ ಕೆಳಗಿಳಿಸುವ ಪ್ರಯತ್ನ ನಡೆದಿತ್ತು’

ಮಂಗಳವಾರ, ಏಪ್ರಿಲ್ 23, 2019
31 °C
ಕೂಡಲಸಂಗಮ:ಮಾತೆ ಮಹಾದೇವಿ ಸಂಸ್ಮರಣೆ ಸಮಾರಂಭ

‘ನನ್ನ ಪೀಠದಿಂದ ಕೆಳಗಿಳಿಸುವ ಪ್ರಯತ್ನ ನಡೆದಿತ್ತು’

Published:
Updated:
Prajavani

ಕೂಡಲಸಂಗಮ (ಬಾಗಲಕೋಟೆ): ‘ಮುಖ್ಯವಾಹಿನಿಗೆ ಬಾರದ ಕುಲ 18 ಜಾತಿಯವರಿಗೆ ಬಸವ ದೀಕ್ಷೆ ಕೊಟ್ಟೆ ಎಂಬ ಕಾರಣಕ್ಕೆ ಪೀಠದಿಂದ ನನ್ನ ಕೆಳಗಿಳಿಸುವ ಪ್ರಯತ್ನ ನಡೆದಿತ್ತು. ಐವರು ಕಾನೂನು ತಜ್ಞರೇ ಅದರ ನೇತೃತ್ವ ವಹಿಸಿದ್ದರು’ ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು ಹೇಳಿದರು.

ಇಲ್ಲಿನ ಬಸವಧರ್ಮ ಪೀಠದಲ್ಲಿ ಭಾನುವಾರ ಆಯೋಜಿಸಿದ್ದ ಮಾತೆ ಮಹಾದೇವಿ ಸಂಸ್ಮರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಕಾನೂನು ಸಮರದ ಮೂಲಕ ಅವರು ನನ್ನನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದರು. ದೈಹಿಕ ಹಲ್ಲೆಗಿಂತ ಈ ಕಾನೂನು ವ್ಯಾಜ್ಯದ ಆಕ್ರಮಣ ಹೆಚ್ಚು ಗಂಭೀರವಾಗಿರುತ್ತದೆ. ಅದನ್ನು ವ್ಯವಸ್ಥಿತವಾಗಿ ಎದುರಿಸಿದೆವು. ಹಾಗಾಗಿ ಯಾವುದೇ ಆಕ್ರಮಣವೂ ನಿಲ್ಲಲಿಲ್ಲ’ ಎಂದರು.

‘ನಾವು (ಲಿಂಗಾಯತರು) ಯಾವತ್ತಿಗೂ ಬಡವರು, ದರಿದ್ರರು, ಅಮಾಯಕರು ಅಲ್ಲ. ಹೇಡಿಗಳಂತೂ ಮೊದಲೇ ಅಲ್ಲ. ಶರಣಧರ್ಮ ಹೊಟ್ಟೆಪಾಡಿನ ಧರ್ಮ ಅಲ್ಲ. ಬದಲಿಗೆ ಸೈದ್ಧಾಂತಿಕ ಧರ್ಮ. ಹೊಟ್ಟೆಬಟ್ಟೆ ನೋಡಿಕೊಂಡು ಸಿದ್ಧಾಂತದ ಅನ್ವಯ ರಾಜಬೀದಿಯಲ್ಲಿ ನಡೆಯುವ ಧರ್ಮವಾಗಿದೆ. ಯಾರೋ ಶ್ರೀಮಂತರು, ಬಂಡವಾಳಶಾಹಿಗಳು ಇಲ್ಲವೇ ಪುರೋಹಿತರು ನಮಗೆ  ಈ ಧರ್ಮ ಬಿಟ್ಟುಕೊಟ್ಟು ಹೋಗಿಲ್ಲ. ಬದಲಿಗೆ ಆದರ್ಶದಲ್ಲಿ ಆದರ್ಶವಾಗಿದ್ದ ಬಸವಾದಿ ಶರಣ–ಶರಣೆಯರು ಕೊಟ್ಟು ಹೋಗಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

‘ಭಕ್ತರೊಂದಿಗಿನ ಆಪ್ತತೆಗೆ ಅಡ್ಡಿಯಾಗಲಿದೆ. ಇಬ್ಬರ ನಡುವಿನ ಅಂತರ ಹೆಚ್ಚಾಗಲಿದೆ ಎಂಬ ಕಾರಣಕ್ಕೆ 20 ವರ್ಷಗಳ ಹಿಂದೆಯೇ ಜಗದ್ಗುರು ಪದದ ಮೋಹವನ್ನು ಕಳಚಿಕೊಂಡಿದ್ದೇನೆ’ ಎಂದು ಹೇಳಿದರು ಶರಣರು,  ‘ಇಂದು ಹಾದಿ–ಬೀದಿಗೊಬ್ಬರು ಜಗದ್ಗುರುಗಳು ಹುಟ್ಟಿಕೊಂಡಿದ್ದಾರೆ. ಅದರಿಂದ ಏನೂ ಸಾಧನೆ ಆಗುವುದಿಲ್ಲ’ ಎಂದರು.

‘ಬಸವಣ್ಣನವರು ನಮ್ಮನ್ನು ಶರಣರನ್ನಾಗಿಸಿದರು. ಅದಕ್ಕಾಗಿ ಅವರಿಗೆ ಉಪಕೃತನಾಗಿರುವೆ. ನಿಮ್ಮ ಪದವನ್ನು (ಜಗದ್ಗುರು) ನೀವೇ ಇಟ್ಟುಕೊಳ್ಳಿ. ನಾನು ಶರಣನಾಗುತ್ತೇನೆ ಎಂದು ಹೇಳಿ ಆ ಪದ ಬಿಟ್ಟುಕೊಟ್ಟ ಕಾರಣಕ್ಕೆ ನನ್ನ ಗೌರವ, ಘನತೆ ಹೆಚ್ಚಾಗಿದೆಯೇ ಹೊರತು ಕಡಿಮೆ ಆಗಿಲ್ಲ. ಜಗದ್ಗುರು ಪದದಲ್ಲಿ ಖೊಟ್ಟಿತನ ಇದೆ. ಆದರೆ ಶರಣನಾಗುವುದರಲ್ಲಿ ಗಟ್ಟಿತನವಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !