ಕೊಲ್ಕತ್ತಾ ಗೋಡೆಗಳಲ್ಲಿ ರಾರಾಜಿಸುತ್ತಿವೆ ಚೀನೀ ಭಾಷೆಯ ಸ್ಲೋಗನ್ ‌ಗಳು !

ಶನಿವಾರ, ಏಪ್ರಿಲ್ 20, 2019
28 °C

ಕೊಲ್ಕತ್ತಾ ಗೋಡೆಗಳಲ್ಲಿ ರಾರಾಜಿಸುತ್ತಿವೆ ಚೀನೀ ಭಾಷೆಯ ಸ್ಲೋಗನ್ ‌ಗಳು !

Published:
Updated:
Prajavani

ಕೊಲ್ಕತ್ತಾ: ಈ ಬಾರಿಯ ಲೋಕಸಭಾ ಚುನಾವಣೆ ಪಶ್ಚಿಮಬಂಗಾಳದಲ್ಲಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ. ಹೌದು ಅದೇನೆಂದರೆ, ಪಶ್ಚಿಮಬಂಗಾಳದ ದೀದಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷಕ್ಕೆ ಮತಹಾಕುವಂತೆ ಕೇಳಿಕೊಂಡಿರುವ ಚೀನಿ ಭಾಷೆಯ ಬರಹಗಳು ಕೊಲ್ಕತ್ತಾ ನಗರದ ಗೋಡೆ ಗೋಡೆಗಳಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.

ಪೂರ್ವ ಕೊಲ್ಕತ್ತಾದಲ್ಲಿರುವ ಚೈನಾಟೌನ್ ನ ತಂಗ್ರಾ ಎಂಬ ಏರಿಯಾದ ಸುಮಾರು 12ಕ್ಕೂ ಹೆಚ್ಚು ಗೋಡೆಗಳಲ್ಲಿ 'ವೋಟ್ ಫಾರ್ ತೃಣಮೂಲ ಕಾಂಗ್ರೆಸ್' ಎಂಬ ವಾಕ್ಯಗಳು ಚೀನಾ ಭಾಷೆಯಲ್ಲಿ ಕಾಣಿಸಿಕೊಂಡಿವೆ. ಇಲ್ಲಿ ಹೆಚ್ಚಾಗಿ ಚೀನಾ ಮೂಲನಿವಾಸಿಗಳೇ ವಾಸವಿದ್ದು, ಇವರಿಗೂ ಮತದಾನದ ಹಕ್ಕನ್ನು ನೀಡಲಾಗಿದೆ. ಸುಮಾರು 60 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಇಲ್ಲಿ ಚೈನಾ ಭಾಷೆಯಲ್ಲಿ ಮತ ಯಾಚಿಸಲಾಗುತ್ತಿದೆ. ಆರು ದಶಕಗಳಿಗೂ ಹಿಂದೆ ಇಲ್ಲಿನ ಗೋಡೆಗಳಲ್ಲಿ 'ಚೀನಾರ್ ಚೇರ್ಮನ್ ಅಮದಾರ್ ಚೇರ್ಮನ್' (ಚೀನಾ ಅಧ್ಯಕ್ಷ ನಮ್ಮ ಅಧ್ಯಕ್ಷ) ಎಂಬ ಘೋಷಣೆಗಳನ್ನು ಗೋಡೆಗಳಲ್ಲಿ ಬರೆದಿದ್ದರಿಂದ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಆ ನಂತರ ಎಲ್ಲಿಯೂ ಚೀನಾ ಭಾಷೆ ಕಾಣಿಸಿಕೊಂಡಿರಲಿಲ್ಲ. ಆ ನಂತರ ಮತ್ತೆ ಈಗ ಚೀನಾ ಭಾಷೆಗಳು ಕೊಲ್ಕತ್ತಾದ ಕೆಲ ಗೋಡೆಗಳಲ್ಲಿ ರಾರಾಜಿಸುತ್ತಿವೆ. ಈ ಪ್ರದೇಶದ ಜನರು ಹೆಚ್ಚಾಗಿ ಹಿಂದಿ ಹಾಗೂ ಬೆಂಗಾಲಿ ಭಾಷೆಯನ್ನು ಮಾತನಾಡುತ್ತಾರೆ.

ಈ ಸಂಬಂಧ ಮಾಧ್ಯಮಗಳು ಸ್ಥಳೀಯ ರಾಜಕೀಯ ಮುಖಂಡರನ್ನು ಮಾತನಾಡಿಸಿದಾಗ, ನಾವು ಈಗಾಗಲೇ ಕರಪತ್ರಗಳನ್ನು ಚೀನೀ ಭಾಷೆಯಲ್ಲಿಯೇ ಮುದ್ರಿಸಿದ್ದೇವೆ. ಅವುಗಳನ್ನು ಈ ಪ್ರದೇಶದಲ್ಲಿ ಹಂಚಲು ಉದ್ದೇಶಿಸಿದ್ದೇವೆ. ಯಾಕೆಂದರೆ, ಇಲ್ಲಿ ಮತಯಾಚನೆಗೆ ಅವರದ್ದೇ ಭಾಷೆಯನ್ನು ಬಳಸಿದರೆ ಮಾತ್ರ ಅರ್ಥವಾಗುತ್ತೆ ಎಂದು ಈ ಪ್ರದೇಶದ ಕಾರ್ಪೋರೇಟರ್ ಫಯಾಜ್ ಅಹಮದ್ ಖಾನ್ ಹೇಳಿದ್ದಾರೆ. ಅಲ್ಲದೆ, ಟಿಎಂಸಿಯ ಅಭ್ಯರ್ಥಿಗೆ ಕಾಲಾವಕಾಶ ಇದ್ದಲ್ಲಿ ಕೊಲ್ಕತ್ತಾದ ತಂಗ್ರಾ ಪ್ರದೇಶದಲ್ಲಿ ತಮ್ಮ ಪಕ್ಷದ ಪರವಾಗಿ ಚೀನಾ ಭಾಷೆಯಲ್ಲಿಯೇ ಮತದಾರರನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇಲ್ಲಿ 2000 ಮತದಾರರಿದ್ದು ಎಲ್ಲಾ ಚೀನಾ ಮೂಲದವರು ಎಂದಿದ್ದಾರೆ.

 ಚೀನೀ ಕರಪತ್ರ ಇದೇ ಮೊದಲು: ಸ್ಥಳೀಯ

ಯಾವಾಗಲೂ ಇಲ್ಲಿ ಚುನಾವಣೆಗಳು ನಡೆಯುತ್ತವೆ ಆದರೆ, ಈ ಬಾರಿ ಚೀನೀ ಭಾಷೆಯಲ್ಲಿ ಕರಪತ್ರ ಮುದ್ರಿಸಿ ಹಂಚುತ್ತಿರುವುದು ಇದೇ ಮೊದಲು ಎಂದು ಇಲ್ಲಿನ ಟೀ ಅಂಗಡಿಯ ಮಾಲೀಕ 50 ವರ್ಷದ ರಾಬರ್ಟ್ ಹೂ ಹೇಳಿದ್ದಾರೆ. 

ಈ ಪ್ರದೇಶದಲ್ಲಿ ಟಿಎಂಸಿಯ ಮಾಲಾರಾಯ್ ದಕ್ಷಿಣ ಕೊಲ್ಕತ್ತಾದ ಲೋಕಸಭಾ ಅಭ್ಯರ್ಥಿಯಾಗಿದ್ದು, ಇವರು ಕೊಲ್ಕತ್ತಾದ ನಗರಪಾಲಿಕೆ ಸದಸ್ಯೆಯಾಗಿ ಐದು ಬಾರಿ ಆಯ್ಕೆಯಾಗಿದ್ದರು. ಬೆಂಗಾಲಿ ಹಾಗೂ ಹಿಂದಿಯನ್ನು ಈ ಪ್ರದೇಶದಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದರೂ ಟಿಎಂಸಿ ಮುಖಂಡರು ಮಾತ್ರ ಮತದಾರರ ಮಾತೃಭಾಷೆಯಲ್ಲಿಯೇ ಮತಯಾಚಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ.

ಕೊಲ್ಕತ್ತಾಗೂ ಚೀನಿಯರಿಗೂ 1780ರಿಂದಲೂ ಅವಿನಾಭಾವ ಸಂಬಂಧ. 1780ರಲ್ಲಿ ಯಾಂಗ್ ಅಚೆವ್ ಎಂಬಾತ ಇಲ್ಲಿಗೆ ಪ್ರಥಮಬಾರಿಗೆ ಆಗಮಿಸಿದ. ಆ ನಂತರ ಈತ ಕೊಲ್ಕತ್ತಾದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದ. ಕಾರ್ಖಾನೆಗೆ ಚೀನೀಯರನ್ನೇ ಕರೆತಂದು ಕೆಲಸ ಮಾಡಿಸಲು ಆರಂಭಿಸಿದ. ಆ ಮೂಲಕ ಇಲ್ಲಿಗೂ ಚೀನಿಯರಿಗೂ ಸಂಬಂಧ ಬೆಸೆದುಕೊಂಡಿತು. ಸಕ್ಕರೆ ಕಾರ್ಖಾನೆ ನಿಂತ ನಂತರ ಚೀನಿಯರು ತಾಯ್ನಾಡಿನ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವುದು, ಪಾದರಕ್ಷೆ ವ್ಯಾಪಾರ ಹಾಗೂ ತೋಟಗಾರಿಕೆ ಕಸುಬಿನಲ್ಲಿ ತೊಡಗಿಸಿಕೊಂಡಿದ್ದಾರೆ. 1951 ಜನಗಣತಿ ಪ್ರಕಾರ ಇಲ್ಲಿ 5,710 ಜನಸಂಖ್ಯೆ ಇದ್ದು, ಈಗ ಈ ಸಂಖ್ಯೆಯನ್ನು ಮೀರಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದೊಂದು ಸಾಂಸ್ಕೃತಿಕ ಸಂದೇಶ

ಇಲ್ಲಿನ ವಿಶ್ವಭಾರತಿ ಚೀನಾ ಭಾಷಾ ಶಾಲೆಯ ಮುಖ್ಯಸ್ಥ ಅಭಿಜಿತ್ ಚಟರ್ಜಿ ಅವರನ್ನು ಈ ಸಂಬಂಧ ಕೇಳಿದಾಗ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ಚೀನಿ ಭಾಷೆಯಲ್ಲಿ ಪ್ರಚಾರ ಮಾಡುತ್ತಿರುವುದು ನನಗೆ ತಿಳಿದಿರಲಿಲ್ಲ. ಚೀನಿ ಜನರಿಗೆ ಇದೊಂದು ಸಾಂಸ್ಕೃತಿಕ ಸಂದೇಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 23

  Angry

Comments:

0 comments

Write the first review for this !