ಒಕ್ಕಲಿಗರ ಸಂಘ: ವಿರೋಧದ ನಡುವೆ ನಾರಾಯಣ ಸ್ವಾಮಿ ಮರು ಆಯ್ಕೆ

ಶುಕ್ರವಾರ, ಏಪ್ರಿಲ್ 26, 2019
21 °C
ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್–ಜೆಡಿಎಸ್‌ ಮುಖಂಡರ ನಡುವೆ ಮೂಡದ ಒಮ್ಮತದ ಅಭಿಪ್ರಾಯ

ಒಕ್ಕಲಿಗರ ಸಂಘ: ವಿರೋಧದ ನಡುವೆ ನಾರಾಯಣ ಸ್ವಾಮಿ ಮರು ಆಯ್ಕೆ

Published:
Updated:
Prajavani

ಚಿಕ್ಕಬಳ್ಳಾಪುರ: ಒಕ್ಕಲಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆಗೆ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಜೆಡಿಎಸ್‌ ನಿರ್ದೇಶಕರ ಬಹಿಷ್ಕಾರದ ನಡುವೆ ಸಂಘದ ಅಧ್ಯಕ್ಷರಾಗಿ ಜಿ.ಆರ್.ನಾರಾಯಣ ಸ್ವಾಮಿ ಅವರು ಅಧ್ಯಕ್ಷರಾಗಿ ಮರು ಆಯ್ಕೆಯಾದರು.

ಸಭೆಯಲ್ಲಿ ಶಾಸಕ ಡಾ.ಕೆ.ಸುಧಾಕರ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರು ಸೇರಿದಂತೆ ಅವರ ಬೆಂಬಲಿಗ ನಿರ್ದೇಶಕರು ಭಾಗವಹಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್ ಬಣದವರು ನಾರಾಯಣ ಸ್ವಾಮಿ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡುವ ಪ್ರಸ್ತಾವ ಮುಂದಿಟ್ಟರು. ಇದಕ್ಕೆ ಆಕ್ಷೇಪಿಸಿದ ಜೆಡಿಎಸ್‌ ಮುಖಂಡರು ಡಾ.ಕೆ.ಪಿ.ಶ್ರೀನಿವಾಸಮೂರ್ತಿ ಅವರ ಹೆಸರನ್ನು ಅಧ್ಯಕ್ಷರ ಹುದ್ದೆಗೆ ಶಿಫಾರಸು ಮಾಡಿದರು.

ಈ ವೇಳೆ ಶಾಸಕ ಸುಧಾಕರ್‌ ಅವರು ಜಿ.ಆರ್.ನಾರಾಯಣಸ್ವಾಮಿ ಅವರು ಮೊದಲ ಅರ್ಧ ಅವಧಿಗೆ, ಶ್ರೀನಿವಾಸಮೂರ್ತಿ ಅವರು ಉಳಿದ ಅರ್ಧ ಅವಧಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವ ವಿಚಾರ ಸಭೆಯ ಮುಂದಿಟ್ಟರು.

ಅದಕ್ಕೆ ಬಚ್ಚೇಗೌಡರ ಬೆಂಬಲಿಗರು ಮೊದಲ ಅವಧಿಗೆ ನಾರಾಯಣಸ್ವಾಮಿ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಲು ಒಪ್ಪಲಿಲ್ಲ. ಮೊದಲ ಅವಧಿಗೆ ಶ್ರೀನಿವಾಸಮೂರ್ತಿ ಅವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಪಟ್ಟು ಹಿಡಿದರು. ಅಂತಿಮವಾಗಿ ಅವಿರೋಧ ಆಯ್ಕೆಗೆ ಎರಡು ಬಣದವರು ಒಪ್ಪದೆ ಹೋದಾಗ ಕೊನೆಗೆ ನಿರ್ದೇಶಕರ ಮತ ಚಲಾವಣೆ ಮೂಲಕ ಅಧ್ಯಕ್ಷರ ಆಯ್ಕೆ ಮಾಡುವ ತೀರ್ಮಾನಕ್ಕೆ ಬರಲಾಯಿತು.

ಇದನ್ನು ಖಂಡಿಸಿ ಬಚ್ಚೇಗೌಡರ ನೇತೃತ್ವದಲ್ಲಿ ಜೆಡಿಎಸ್‌ನ ಆರು ನಿರ್ದೇಶಕರು ಸಭೆ ಬಹಿಷ್ಕರಿಸಿ ಹೊರನಡೆದರು. ಬಳಿಕ ಸಭೆಯಲ್ಲಿದ್ದ 9 ನಿರ್ದೇಶಕರ ಪೈಕಿ 8 ನಿರ್ದೇಶಕರು ನಾರಾಯಣಸ್ವಾಮಿ ಅವರ ಪರವಾಗಿ ಮತ ಚಲಾಯಿಸಿ, ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
ಇದೇ ಸಂದರ್ಭದಲ್ಲಿ ಸಂಘದ ನೂತನ ಕಾರ್ಯದರ್ಶಿಯಾಗಿ ಬಸವನಪರ್ತಿ ಚಿನ್ನಪ್ಪರೆಡ್ಡಿ, ಖಜಾಂಚಿಯಾಗಿ ಬೀಡಗಾನಹಳ್ಳಿ ಮಂಜುನಾಥ್ ಆಯ್ಕೆಯಾದರು.

ನೂತನ ಪದಾಧಿಕಾರಿಗಳಿಗೆ ಶಾಸಕ ಡಾ.ಕೆ.ಸುಧಾಕರ್ ಶುಭ ಹಾರೈಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಯಲುವಹಳ್ಳಿ ಎನ್.ರಮೇಶ್‌, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗೇಶ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಮರುಳುಕುಂಟೆ ಕೃಷ್ಣಮೂರ್ತಿ, ನಿರ್ದೇಶಕರಾದ ನಂಜುಂಡಪ್ಪ, ಮೋಹನ್, ಆವುಲಗುರ್ಕಿ ರಾಜಣ್ಣ, ಕಳವಾರ ಕೃಷ್ಣಮೂರ್ತಿ, ಮುಖಂಡರಾದ ಪುರದಗಡ್ಡೆ ಮುನೇಗೌಡ, ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಕೊಂಡೇನಹಳ್ಳಿ ನಾರಾಯಣಸ್ವಾಮಿ, ಎನ್.ನಾರಾಯಣಸ್ವಾಮಿ, ಡಿ.ನಾರಾಯಣಸ್ವಾಮಿ, ವೆಂಕಟರೆಡ್ಡಿ, ಪ್ರಕಾಶ್‌ ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !