‘ಸುಮಲತಾ ಗೌಡ್ತಿ ಅಲ್ಲ, ನಾಯ್ಡು’: ಮತ್ತೆ ಜಾತಿ ಅಸ್ತ್ರ ಹೂಡಿದ ಜೆಡಿಎಸ್‌ ಮುಖಂಡರು

ಶುಕ್ರವಾರ, ಏಪ್ರಿಲ್ 26, 2019
21 °C
ಲೋಕಸಭಾ ಚುನಾವಣೆ 2019

‘ಸುಮಲತಾ ಗೌಡ್ತಿ ಅಲ್ಲ, ನಾಯ್ಡು’: ಮತ್ತೆ ಜಾತಿ ಅಸ್ತ್ರ ಹೂಡಿದ ಜೆಡಿಎಸ್‌ ಮುಖಂಡರು

Published:
Updated:

ಮಂಡ್ಯ: ಚುನಾವಣೆ ಗೆಲ್ಲಲು ಜೆಡಿಎಸ್‌ ಮುಖಂಡರು ಮತ್ತೊಮ್ಮೆ ‘ಜಾತಿ’ ಅಸ್ತ್ರ ಹೂಡಿದಂತಿದೆ. ‘ಸುಮಲತಾ ನಾಯ್ಡು’ ಅಸ್ತ್ರ ಪ್ರಯೋಗಿಸುವ ಹೊಣೆಯನ್ನು ಸಂಸದ ಎಲ್‌.ಆರ್‌.ಶಿವರಾಮೇಗೌಡರ ಮೇಲೆ ಹೊರಿಸಿ ಒಕ್ಕಲಿಗ ಮತಗಳನ್ನು ಕ್ರೋಡೀಕರಿಸಲು ಮುಂದಾಗಿರುವುದು ಪ್ರಚಾರದಲ್ಲಿ ಕಂಡುಬರುತ್ತಿದೆ.

ಎದುರಾಳಿಯನ್ನು ನೆಲಕ್ಕುರುಳಿಸಲು ಜಾತಿ ಅಸ್ತ್ರ ಹೂಡುವುದು ಜಿಲ್ಲೆಯಲ್ಲಿ ಇದೇ ಮೊದಲೇನಲ್ಲ. 2013ರ ಲೋಕಸಭಾ ಉಪ ಚುನಾವಣೆಯಲ್ಲೂ ರಮ್ಯಾ ಅವರ ಜಾತಿ ಕೆಣಕಲಾಗಿತ್ತು. ರಮ್ಯಾ ಅವರ ಬಯಲಾಜಿಕಲ್‌ ತಂದೆಯನ್ನು ಕರೆತಂದು ಆಕೆ ಗೌಡ್ತಿ ಅಲ್ಲ ಎನ್ನಲಾಗಿತ್ತು. ಆಗ ಜಾತಿ ಲೆಕ್ಕಾಚಾರ ಕೆಲಸ ಮಾಡಲಿಲ್ಲ, ರಮ್ಯಾ ಗೆದ್ದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಮತ್ತೆ ಜಾತಿ ಕೆಲಸ ಮಾಡಿತ್ತು. ಈಗ ಮತ್ತೆ ‘ಸುಮಲತಾ ಗೌಡ್ತಿಯಲ್ಲ’ ಎಂಬ ಅಸ್ತ್ರ ಹೂಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ₹ 8 ಸಾವಿರ ಕೋಟಿಗಿಂತಲೂ ಹೆಚ್ಚು ಅನುದಾನ ನೀಡಿದ್ದರೂ ಜಾತಿ ಸಮೀಕರಣಕ್ಕೆ ಮುಂದಾಗಿದ್ದಾರೆ. ಚುನಾವಣೆ ಪ್ರಕ್ರಿಯೆ ಆರಂಭದಲ್ಲೇ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ,‘ ಸುಮಲತಾ ಗೌಡ್ತಿಯಲ್ಲ, ಆಂಧ್ರದವರು’ ಎಂದು ಹೇಳಿದ್ದರು. ಅದು ವಿವಾದದ ಸ್ವರೂಪ ಪಡೆದು ಮಹಿಳೆಯ ಸ್ವಾಭಿಮಾನಕ್ಕೆ ಧಕ್ಕೆ ತರುವ ಯತ್ನ ಎಂದೇ ಹೇಳಲಾಯಿತು. ಸ್ವಲ್ಪದಿನ ಸುಮ್ಮನಿದ್ದ ಮುಖಂಡರು ಈಗ ಮತ್ತೆ ಅದೇ ಪ್ರಯತ್ನ ಮುಂದುವರಿಸಿದ್ದಾರೆ.

ಜಾತಿ ಪ್ರಶ್ನೆ ಎತ್ತುತ್ತಿರುವವರು ಯಾರು ಎಂಬುದು ಮಹತ್ವದ ಪ್ರಶ್ನೆಯಾಗಿದೆ. ಬೇರೆ ಮುಖಂಡರು ಸುಮಲತಾ ಜಾತಿ ಬಗ್ಗೆ ಮಾತನಾಡಿದರೆ ಅದು ವಿವಾದವಾಗುತ್ತದೆ. ಸಂಸದ ಎಲ್‌.ಆರ್‌.ಶಿವರಾಮೇಗೌಡ ಮಾತನಾಡಿದರೆ ಅದು ವಿವಾದವಾಗುವುದಿಲ್ಲ, ಜನ ನಿರ್ಲಕ್ಷ್ಯ ಮಾಡುತ್ತಾರೆ, ಪಕ್ಷದ ಉದ್ದೇಶವೂ ಈಡೇರುತ್ತದೆ. ಹೀಗಾಗಿಯೇ ಅವರ ಮೂಲಕ ಈ ರೀತಿ ಹೇಳಿಸುವ ತಂತ್ರ ನಡೆಸಲಾಗುತ್ತಿದೆ ಎಂಬುದು ಸ್ಥಳೀಯ ಮುಖಂಡರ ವಿಶ್ಲೇಷಣೆ.

‘ಮಂಡ್ಯ ಜಿಲ್ಲೆಯಲ್ಲಿ ಜಾತ್ಯತೀತರು ಇದ್ದಾರೆ. ಪ್ರಗತಿಪರ ಚಿಂತನೆಗಳಿಗೆ ಇಲ್ಲಿ ದೊಡ್ಡ ಮಾನ್ಯತೆ ಇದೆ. ಆದರೆ, ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಜಾತಿಯ ಮಾತುಗಳನ್ನಾಡಿ ಒಳಸಂಚು ರೂಪಿಸುತ್ತಾರೆ. ಈ ಲೋಕಸಭಾ ಚುನಾವಣೆ ವೇಳೆ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ. ಜನರು ಜಾತಿಗೆ ಹೆಚ್ಚು ಮನ್ನಣೆ ನೀಡುವುದಿಲ್ಲ’ ಎಂದು ವಿಚಾರವಾದಿ ಹುಲ್ಕೆರೆ ಮಹಾದೇವು ತಿಳಿಸಿದರು.

ವೈಯಕ್ತಿಕವಾಗಿ ಜಾತಿವಾದಿಗಳಲ್ಲ: ಜಾತಿಯ ಬಗ್ಗೆ ಮಾತನಾಡುತ್ತಿರುವ ರಾಜಕಾರಣಿಗಳು ವೈಯಕ್ತಿಕವಾಗಿ ಜಾತಿವಾದಿಗಳಲ್ಲ. ಶಿವರಾಮೇಗೌಡ ಕೂಡ ತಮ್ಮ ಮಕ್ಕಳನ್ನು ಬೇರೆ ಜಾತಿಯವರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಇದೇ ವಿಚಾರವನ್ನಿಟ್ಟುಕೊಂಡು ಜನರು ಸಾಮಾಜಿಕ ಜಾಲತಾಣಗಳಲ್ಲಿ ಶಿವರಾಮೇಗೌಡರನ್ನು ಪ್ರಶ್ನೆ ಮಾಡಿದ್ದಾರೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಕೂಡ ಜಾತಿಗೆ ಅಂಟಿಕೊಂಡವರಲ್ಲ. ಅವರ ಮಗ, ಮಗಳು ಬೇರೆ ಜಾತಿಯವರನ್ನು ವರಿಸಿದ್ದಾರೆ. ಆದರೆ, ರಾಜಕಾರಣ ಮಾಡುವಾಗ ಮಾತ್ರ ಜಾತಿ ಮಂತ್ರ ಪಠಿಸುವುದು ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 4

  Amused
 • 1

  Sad
 • 0

  Frustrated
 • 23

  Angry

Comments:

0 comments

Write the first review for this !