ಜಾತಿ–ಧರ್ಮ ಒಡೆದ ಕಾಂಗ್ರೆಸ್‌ಗೆ ಜನರಿಂದ ತಕ್ಕ ಪಾಠ: ಈಶ್ವರಪ್ಪ

ಗುರುವಾರ , ಏಪ್ರಿಲ್ 25, 2019
22 °C

ಜಾತಿ–ಧರ್ಮ ಒಡೆದ ಕಾಂಗ್ರೆಸ್‌ಗೆ ಜನರಿಂದ ತಕ್ಕ ಪಾಠ: ಈಶ್ವರಪ್ಪ

Published:
Updated:

ಬಾಗಲಕೋಟೆ: ‘ವೀರಶೈವ–ಲಿಂಗಾಯತ ಎಂದು ಜಾತಿ–ಧರ್ಮ ಒಡೆಯೋಕೆ ಹೋದ ಕಾಂಗ್ರೆಸ್‌ಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಅದರ ಅರಿವಾಗಿಯೇ ವಿನಯ ಕುಲಕರ್ಣಿ ಪ್ರತ್ಯೇಕ ಧರ್ಮದ ವಿಚಾರ ಮುಗಿದುಹೋದ ಅಧ್ಯಾಯ ಎಂದು ಹೇಳಿದ್ದಾರೆ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಂಡಿದ್ದು ಸರಿಯಲ್ಲ. ಅದಕ್ಕೆ ಈಗಾಗಲೇ ಜನರು ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಿಗೂ ಅದರ ಅರಿವಾಗಿದೆ. ಹಾಗಾಗಿಯೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ವೀರಶೈವ–ಲಿಂಗಾಯತ ಧರ್ಮ ಒಡೆದು ತಪ್ಪು ಮಾಡಿದ್ದೇವೆ’ ಎಂದು ಹೇಳಿದ್ದಾರೆ. ಜಾತಿ, ಧರ್ಮಗಳ ವಿಚಾರದಲ್ಲಿ ಇದೇ ಧೋರಣೆ ಮುಂದುವರೆಸಿದಲ್ಲಿ ದೇಶದಲ್ಲಿ ಕಾಂಗ್ರೆಸ್ ಇರೊಲ್ಲ’ ಎಂದು ಎಚ್ಚರಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಿಗೆ ಕೋಟಾದಡಿ ಸೀಟು ಹಂಚಿಕೆ ಆಗಕೂಡದು. ಯಾರು ದೇಶಕ್ಕೆ ನಿಷ್ಠರಾಗಿರ್ತಾರೊ ಅವರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ದೇಶಕ್ಕೆ, ಪಕ್ಷಕ್ಕೆ ನಿಷ್ಠರಾಗದಿದ್ದರೆ ಅಂತಹವರಿಗೆ ಟಿಕೆಟ್ ಕೊಟ್ಟರೆ ದೇಶದ ಕಥೆ ಏನು. ಹಾಗಾಗಿಯೇ ಬಿಜೆಪಿ ಕೋಟಾದಡಿ ಯಾರಿಗೂ ಟಿಕೆಟ್ ನೀಡಲು ಮುಂದಾಗಿಲ್ಲ’ ಎಂದು ಸಮರ್ಥಿಸಿಕೊಂಡರು.

‘ದೇವೇಗೌಡರು ಇಂದು ಯಾವ ಕಾರಣಕ್ಕೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಪ್ರಶ್ನಿಸಿದ ಈಶ್ವರಪ್ಪ. ಅಕ್ರಮ ಆಸ್ತಿ ಮೇಲೆ ಐಟಿ ದಾಳಿ ನಡೆಸಿದ್ದಕ್ಕೋ, ಮೊಮ್ಮಗನಿಗೆ ಹಾಸನ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕಾ ಎಂಬುದನ್ನು ಸ್ಪಷ್ಟಪಡಿಸಲಿ. ಯೋಧರು ಸತ್ತಿದ್ದಕ್ಕೆ, ಬರಗಾಲದಲ್ಲಿ ರೈತರ ಸಂಕಷ್ಟಕ್ಕಾಗಿ ಎಂದಾದರೂ ಅವರು ಕಣ್ಣೀರು ಹಾಕಿದ್ದಾರಾ’ ಎಂದು ಕೇಳಿದರು.

‘ಬಿಜೆಪಿಯಲ್ಲಿ ನರೇಂದ್ರ ಮೋದಿ, ಅಮಿತ್‌ಶಾರಂತಹ ನಾಯಕರು ಇಡೀ ದೇಶ ಸುತ್ತುತ್ತಿದ್ದಾರೆ. ಆದರೆ ನಾವು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರನ್ನು ಅವರವರ ಕ್ಷೇತ್ರಕ್ಕೆ ಕಟ್ಟಿಹಾಕಿಬಿಟ್ಟಿದ್ದೇವೆ. ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !