ಕರಾವಳಿ ಅಲೆ ಎದುರು ಮೋದಿ ಅಲೆ ಗೌಣ

ಶನಿವಾರ, ಏಪ್ರಿಲ್ 20, 2019
28 °C

ಕರಾವಳಿ ಅಲೆ ಎದುರು ಮೋದಿ ಅಲೆ ಗೌಣ

Published:
Updated:
Prajavani

* ಎರಡು ಬಾರಿ ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಮೊದಲ ಚುನಾವಣೆಯಲ್ಲೇ ಎದುರಿಸುತ್ತಿರುವುದು ದೊಡ್ಡ ಸವಾಲು ಅನಿಸುವುದಿಲ್ಲವೇ?
ಇದು ಸಾರ್ವತ್ರಿಕ ಚುನಾವಣೆ. ನಾನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಚುನಾವಣೆ ಎಂದ ಮೇಲೆ ಎದುರಾಳಿಗಳು ಇರುವುದು ಸಹಜ. ನಳಿನ್‌ಕುಮಾರ್‌ ಕಟೀಲ್‌ ಎರಡು ಬಾರಿ ಸಂಸದರಾಗಿರಬಹುದು. ಆದರೆ, ಚುನಾವಣಾ ಕಣದಲ್ಲಿ ಇಬ್ಬರೂ ಅಭ್ಯರ್ಥಿಗಳೇ. ನನಗೆ ಯಾವ ರೀತಿಯ ಭಯವೂ ಇಲ್ಲ. ಅವರ ವೈಫಲ್ಯಗಳೇ ನನಗೆ ಶಕ್ತಿ.

* ಕಾಂಗ್ರೆಸ್‌ ಸತತವಾಗಿ ಸೋಲು ಕಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಭದ್ರಕೋಟೆಯನ್ನು ಹೇಗೆ ಭೇದಿಸುತ್ತೀರಿ?
ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸೋಲು ಜೀವನದ ಅಂತ್ಯ ಎಂದು ಹೇಳಲಾಗದು. ಸೋಲೇ ಗೆಲುವಿನ ಸೋಪಾನ. ಅದು ಜೀವನದ ಆರಂಭಕ್ಕೆ ಮುನ್ನುಡಿ ಬರೆಯುತ್ತದೆ. ಇಷ್ಟು ಬಾರಿ ಕಾಂಗ್ರೆಸ್‌ಗೆ ಆಗಿರುವ ಸೋಲಿನ ಅನುಭವಗಳನ್ನು ಮುಂದಿಟ್ಟುಕೊಂಡು ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ.

* ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಹಿರಿಯರನ್ನು ಬದಿಗೆ ಸರಿಸಿ ಕಾಂಗ್ರೆಸ್‌ ಹೈಕಮಾಂಡ್‌ ನಿಮಗೆ ಅವಕಾಶ ನೀಡಿದೆ. ಹಿರಿಯರಲ್ಲಿ ಅಸಮಾಧಾನ ಇಲ್ಲವೇ?
ಯಾರನ್ನೂ ಬದಿಗೆ ಸರಿಸಿ ನನಗೆ ಅವಕಾಶ ನೀಡಿಲ್ಲ. ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಎಲ್ಲ ಪ್ರಮುಖ ನಾಯಕರ ಜೊತೆ ಸಮಾಲೋಚನೆ ನಡೆಸಿ, ಟಿಕೆಟ್‌ ಆಕಾಂಕ್ಷಿಗಳ ಜೊತೆ ಚರ್ಚಿಸಿದ ಬಳಿಕ ಹೈಕಮಾಂಡ್‌ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಬದಲಾವಣೆ ಮತ್ತು ಪರಿವರ್ತನೆಗಾಗಿ ಯುವ ಕಾರ್ಯಕರ್ತನಿಗೆ ಅವಕಾಶ ಮಾಡಿಕೊಡಿ ಎಂದು ಜಿಲ್ಲೆಯ ಎಲ್ಲ ನಾಯಕರು ಶಿಫಾರಸು ಮಾಡಿದ್ದರು. ಅವರ ಆಶೀರ್ವಾದದಿಂದಲೇ ನಾನು ಚುನಾವಣಾ ಕಣದಲ್ಲಿದ್ದೇನೆ. ಯಾರಿಗೂ ಈ ಬಗ್ಗೆ ಅಸಮಾಧಾನ ಇಲ್ಲ.

* ಚುನಾವಣಾ ಪ್ರಚಾರದಲ್ಲಿ ಹಿರಿಯರ ಸಹಕಾರ ಹೇಗಿದೆ?
ಮಾಜಿ ಸಚಿವರಾದ ಬಿ.ರಮಾನಾಥ ರೈ, ಕೆ.ಅಮರನಾಥ ಶೆಟ್ಟಿ, ಕೆ.ಅಭಯಚಂದ್ರ ಜೈನ್‌, ಸಚಿವ ಯು.ಟಿ.ಖಾದರ್‌ ಸೇರಿದಂತೆ ಮಾಜಿ ಶಾಸಕರು, ಹಿರಿಯ ಮುಖಂಡರುಗಳು ಒಂದೊಂದು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಬೆಳಿಗ್ಗೆ ನನಗಿಂತಲೂ ಮೊದಲು ಅವರು ‍ಪ್ರಚಾರ ಸಭೆಯ ಸ್ಥಳ ತಲುಪುತ್ತಿದ್ದಾರೆ. ದೇಶ ಕಂಡ ಅಪ್ರತಿಮ, ಧೀಮಂತ ನಾಯಕ ಬಿ.ಜನಾರ್ದನ ಪೂಜಾರಿಯವರು ನನ್ನ ಗೆಲುವಿಗಾಗಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಹಿರಿಯರ ಸಹಕಾರವೇ ನನ್ನ ಬಲ.

* ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈವರೆಗೆ ನಿಮ್ಮ ಕೊಡುಗೆ ಏನು?
ನಾನು ಈ ಜಿಲ್ಲೆಯ ಮಣ್ಣಿನ ಮಗ. ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ರಾಜಕೀಯ ಆರಂಭಿಸಿದ್ದೇನೆ. 34 ವರ್ಷ ವಯಸ್ಸಿನೊಳಗೆ ತಿರುವೈಲು ಗುತ್ತು ಸಂಕು ಪೂಂಜ– ದೇವು ಪೂಂಜ ಕಂಬಳ ಸಮಿತಿಯ ಗೌರವಾಧ್ಯಕ್ಷನಾಗಿ ದುಡಿದಿದ್ದೇನೆ. ದಸರಾ ಹಬ್ಬದ ಸಂದರ್ಭದಲ್ಲಿ ‘ಪಿಲಿ ನಲಿಕೆ’ ಸ್ಪರ್ಧೆ ಆಯೋಜಿಸುವ ಮೂಲಕ ನಮ್ಮ ನೆಲದ ಸಾಂಪ್ರದಾಯಿಕ ಕಲೆಯನ್ನು ಉಳಿಸಲು ಮತ್ತು ರಾಷ್ಟ್ರ ಮಟ್ಟದಲ್ಲಿ ಅದಕ್ಕೆ ಗೌರವ ದೊರಕುವಂತೆ ಮಾಡಿದ್ದೇನೆ.

* ಈ ಕ್ಷೇತ್ರದ ಮತದಾರರು ನಿಮಗೆ ಏಕೆ ಮತ ನೀಡಬೇಕು?
ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಗುರಿ. ಹತ್ತು ವರ್ಷಗಳ ಕಾಲ ಸಂಸದರಾಗಿದ್ದ ನಳಿನ್‌ಕುಮಾರ್‌ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಎರಡು ಅವಧಿಗೆ ಸಂಸದರಾದರೂ ಜಿಲ್ಲೆಯ ಅಭಿವೃದ್ಧಿಯ ರಥವನ್ನು ಮುಂದಕ್ಕೆ ಎಳೆಯಲು ಅವರಿಗೆ ಸಾಧ್ಯವಾಗಿಲ್ಲ. ಹೊಸ ಉದ್ದಿಮೆಗಳು ಬಂದಿಲ್ಲ, ಉದ್ಯೋಗ ಸೃಷ್ಟಿ ಆಗಿಲ್ಲ. ಜಿಲ್ಲೆಯ ಪ್ರಗತಿಯ ರಥವನ್ನು ಮುಂದಕ್ಕೆ ಎಳೆಯುವುದಕ್ಕಾಗಿ ನನಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡುತ್ತಿದ್ದೇನೆ.

* ನಿಮಗೆ ಹಿಂದುತ್ವವಾದಿ ಗುಂಪುಗಳ ಮುಖಂಡರ ಜೊತೆ ನಂಟಿದೆ ಎಂಬ ಆರೋಪವಿದೆಯಲ್ಲಾ?
ಹಿಂದುತ್ವವಾದಿ ಮುಖಂಡರೂ ಸೇರಿದಂತೆ ಹಲವರು ನನ್ನ ಸಂಪರ್ಕದಲ್ಲಿದ್ದಾರೆ. ಯಾವುದನ್ನೂ ತೆರೆಮರೆಯಲ್ಲಿ ಮಾಡಿಲ್ಲ. ಬಿಜೆಪಿ ಮತ್ತು ಅದರ ಸಂಘಟನೆಗಳಿಗೆ ಬಳಕೆಯಾಗಿ ತೊಂದರೆ ಎದುರಿಸುತ್ತಿರುವ ಅನೇಕರು ನನಗೆ ಬೆಂಬಲ ನೀಡುತ್ತಿದ್ದಾರೆ.

* ಚುನಾವಣೆಗಾಗಿ ಕೇಸರಿ ಬಳಸುತ್ತಿದ್ದೀರಿ ಎಂದು ನಳಿನ್‌ಕುಮಾರ್‌ ಆರೋಪ ಮಾಡಿದ್ದಾರಲ್ಲಾ?
ನಳಿನ್‌ಕುಮಾರ್‌ ಕಟೀಲ್‌ ಮತ ವಿಭಜನೆಗಾಗಿ ಕೇಸರಿ ಬಳಸುತ್ತಿದ್ದಾರೆ. ನಾನು ರಾಜಕೀಯಕ್ಕಾಗಿ ಬಳಸುವುದಿಲ್ಲ. ಜಿಲ್ಲೆಯನ್ನು ಸೌಹಾರ್ದದ ನಾಡನ್ನಾಗಿ ಮಾಡಲು ಕೇಸರಿ ಬಳಸುತ್ತಿದ್ದೇನೆ. ಧರ್ಮದ ಹೆಸರಿನಲ್ಲಿ ಯಾವತ್ತೂ ರಾಜಕೀಯ ಮಾಡುವುದಿಲ್ಲ.

 * ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕಾರ್ಯಸೂಚಿಗಳೇನು?
ಕೃಷಿ, ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ರಸ್ತೆಗಳ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಸವಾಲುಗಳಿಗೆ. ಯುವಕರ ಕೈಗೆ ಕೆಲಸ ಕೊಟ್ಟು ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದೇ ನನ್ನ ಕಾರ್ಯಸೂಚಿ.

* ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಮತ ಧ್ರುವೀಕರಣದ ಆತಂಕವಿದೆಯೇ?
ಆ ರೀತಿಯ ಯಾವ ಭಯವೂ ಇಲ್ಲ. ಮೋದಿ ಅಲೆ ಎಂಬುದೇ ಇಲ್ಲ. ಇಲ್ಲಿರುವುದು ಕರಾವಳಿಯ ಅಲೆ. ಅದು ನನ್ನ ಪರವಾಗಿ ಇದೆ. ಕರಾವಳಿ ಅಲೆಯ ಮುಂದೆ ಮೋದಿ ಅಲೆ ನಿಲ್ಲುವುದಿಲ್ಲ.

* ವಿದ್ಯಾರ್ಥಿಯಾಗಿದ್ದಾಗ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಇದು ನಿಜವೇ?
ಸಂಪೂರ್ಣ ಸುಳ್ಳು. ಬಿಜೆಪಿಯವರು ಕೀಳುಮಟ್ಟದ ರಾಜಕೀಯದ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಸುಳ್ಳು ಹಬ್ಬಿಸಿದ್ದಾರೆ. ನನ್ನ ಪ್ರಾಂಶುಪಾಲರಾಗಿದ್ದ ಡಾ.ದೇವರಾಜ್‌ ಅವರನ್ನೇ ಕೇಳಿ. ಇವತ್ತು ಬೆಳಿಗ್ಗೆ ಕೂಡ ಅವರು ನನಗೆ ಶುಭಕೋರಿ ಸಂದೇಶ ಕಳಿಸಿದ್ದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !