ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಶಿವರಾಂ

ಶುಕ್ರವಾರ, ಏಪ್ರಿಲ್ 26, 2019
35 °C

ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಶಿವರಾಂ

Published:
Updated:
Prajavani

ಹುಣಸೂರು: ‘ಕಳೆದ ವರ್ಷ ಕಾಂಗ್ರೆಸ್, ಜೆಡಿಎಸ್‌ ಬೆಂಬಲ ಪಡೆದು ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಬಹುದಾಗಿತ್ತಾದರೂ ದಲಿತರಿಗೆ ಪಟ್ಟ ಕಟ್ಟಲು ಮನಸ್ಸಿಲ್ಲದೆ ಜೆಡಿಎಸ್‌ಗೆ ಕೆಂಪುಹಾಸು ಹಾಕಿ ಅನ್ಯಾಯ ಮಾಡಿದೆ’ ಎಂದು ಬಿಜೆಪಿ ಮುಖಂಡ, ರಾಜ್ಯ ಛಲವಾದಿ ಮಹಾಸಭಾ ಸಂಸ್ಥಾಪಕ ಶಿವರಾಂ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕನಸು ಕಂಡ ಸಮುದಾಯಕ್ಕೆ ಕಾಂಗ್ರೆಸ್‌ ದೊಡ್ಡ ಮೋಸ ಮಾಡಿದೆ. 70 ವರ್ಷಗಳು ನಿರಂತರವಾಗಿ ದಲಿತರನ್ನು ಮತ ಬ್ಯಾಂಕಿನಂತೆ ಬಳಸಿಕೊಂಡ ಕಾಂಗ್ರೆಸ್‌, ಸಮಾಜಕ್ಕೆ ರಾಜಕೀಯ ಶಕ್ತಿ ತುಂಬಿಸುವ ಇಚ್ಛಾಶಕ್ತಿ ಇಲ್ಲದೆ ಕೇವಲ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡಿದೆ’ ಎಂದು ಟೀಕಿಸಿದರು.

‘ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಬಿಜೆಪಿ, ದಲಿತ ವಿರೋಧಿ ಪಕ್ಷ ಎಂದು ವೇದಿಕೆಯಲ್ಲಿ ಮಾತನಾಡುತ್ತಿದ್ದಾರೆ, ದಲಿತ ಸಮುದಾಯಕ್ಕೆ ಸೇರಿ ವ್ಯಕ್ತಿಯನ್ನು ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿಯನ್ನಾಗಿ ಮಾಡಿ ಮಾದರಿಯಾಗಿದೆ. ಆದರೆ ಕಾಂಗ್ರೆಸ್‌ನವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ಏಕೆ ಹಿಂದೆ ಸರಿದಿದ್ದಾರೆ? ಇದು ಕಾಂಗ್ರೆಸ್‌ ದಲಿತರಿಗೆ ಮಾಡಿದ ಅನ್ಯಾಯ ಅಲ್ಲವೆ’ ಎಂದು ಪ್ರಶ್ನಿಸಿದರು.

ಬಡ್ತಿ ಮೀಸಲು: ‘ಕೇಂದ್ರ ಸರ್ಕಾರ ದಲಿತರಿಗೆ ಉದ್ಯೋಗ ಬಡ್ತಿ ಮೀಸಲಾತಿ ಅನುಷ್ಠಾನಕ್ಕೆ ಹಸಿರು ನಿಶಾನೆ ನೀಡಿದರೂ, ರಾಜ್ಯದಲ್ಲಿ ಅನುಷ್ಠಾನಗೊಳಿಸದೆ ಹಿಂದುಳಿದ ವರ್ಗಕ್ಕೆ ಸೇರಿದ 20 ಸಾವಿರ ಅಧಿಕಾರಿಗಳು ಹಿಂಬಡ್ತಿ ಪಡೆದರು. ಇವರಲ್ಲಿ 8 ಜನರು ಅವಮಾನ ಸಹಿಸದೆ ಆತ್ಮಹತ್ಯೆಗೆ ಶರಣಾದರು. ಇದು ರಾಜ್ಯದ ಮೈತ್ರಿ ಸರ್ಕಾರದ ದಲಿತರಿಗೆ ನೀಡಿದ ಕೊಡುಗೆ’ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ರಮೇಶ್‌ ಕುಮಾರ್‌, ರಾಜೇಂದ್ರ, ಛಲವಾದಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜು, ಅಪ್ಪಣ್ಣ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !