ಸುಳ್ಳೇ ಮೊಯಿಲಿ ಮನೆ ದೇವರು: ಆರ್‌.ಅಶೋಕ್‌ ವಾಗ್ದಾಳಿ

ಭಾನುವಾರ, ಏಪ್ರಿಲ್ 21, 2019
26 °C
ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ಪರ ರೋಡ್ ಶೋ

ಸುಳ್ಳೇ ಮೊಯಿಲಿ ಮನೆ ದೇವರು: ಆರ್‌.ಅಶೋಕ್‌ ವಾಗ್ದಾಳಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಸಂಸದ ವೀರಪ್ಪ ಮೊಯಿಲಿ ಅವರ ಮನೆ ದೇವರು ಸುಳ್ಳು. ಹೀಗಾಗಿ ಅವರು ಸುಳ್ಳು ಹೇಳಿಕೊಂಡೇ ಹತ್ತು ವರ್ಷ ಜನರಿಗೆ ಟೋಪಿ ಹಾಕುವ ಕೆಲಸ ಮಾಡಿದರು. ಈ ಬಾರಿ ಅಂತಹ ವ್ಯಕ್ತಿ ಬೇಡ ಎಂದು ಈ ಕ್ಷೇತ್ರದ ಜನ ತೀರ್ಮಾನಿಸಿದ್ದಾರೆ’ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಆರ್‌.ಅಶೋಕ್‌ ಹೇಳಿದರು.

ನಗರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ಪರ ರೋಡ್ ಶೋ ನಡೆಸಿ ಮತ ಯಾಚಿಸಿದ ಅವರು, ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ. ಅದಕ್ಕೆ ಕೆಂಪೇಗೌಡ ಹೆಸರು ಇಡಲು ಅನುಮೋದನೆ ಕೊಟ್ಟವರು ನಾವು. ಬೇರೆಯವರ ಹೆಸರು ಇಡಬೇಕು ಎಂದು ವೀರಪ್ಪ ಮೊಯಿಲಿ ಅವರು ಕುತಂತ್ರ ಮಾಡಿದ್ದರು. ಆದರೆ ಅದು ಕೈಗೂಡಲಿಲ್ಲ. ಈ ಭಾಗದ ಜನರ ನೀರಿನ ಬವಣೆ ತಪ್ಪಿಸಲು ನಮ್ಮ ಸರ್ಕಾರ ಇದ್ದಾಗ ಸದಾನಂದಗೌಡರ ಅವಧಿಯಲ್ಲಿ ಎತ್ತಿನಹೊಳೆ ಯೋಜನೆಗೆ ಮೊದಲ ಬಾರಿಗೆ ₹9,000 ಕೋಟಿ ಅನುದಾನ ಬಿಡುಗಡೆ ಮಾಡಲಾಯಿತು’ ಎಂದು ತಿಳಿಸಿದರು.

‘ಮೊಯಿಲಿ ಅವರು 10 ವರ್ಷಗಳಲ್ಲಿ ಸಂಸದರು, ಕೇಂದ್ರ ಸಚಿವರಾಗಿದ್ದರು. ಚಿಕ್ಕಬಳ್ಳಾಪುರಕ್ಕೆ ಎಷ್ಟು ಕೈಗಾರಿಕೆಗಳನ್ನು ತಂದರು? ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಲು ಬಿಡಲಿಲ್ಲ. ಎತ್ತಿನಹೊಳೆ ತರುತ್ತೇವೆ, ತರುತ್ತೇವೆ ಎಂದರು. ಆದರೆ ಇಲ್ಲಿ ಎತ್ತೂ, ಬಾಲ, ಸೆಗಣಿ ಏನೂ ಬರಲಿಲ್ಲ. ವಿದ್ಯುತ್‌ ಉತ್ಪಾದಿಸುವ ಮೇಕೆದಾಟು ಯೋಜನೆಗೆ ಮೋದಿ ಅವರು ಅನುಮೋದನೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರು, ಮೊಯಿಲಿ ಅವರು ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಬಾಂಬೆ ದಾಳಿ ಸಂದರ್ಭದಲ್ಲಿ ನಮ್ಮ ಸೈನಿಕರು ಸತ್ತಾಗ ಕಾಂಗ್ರೆಸ್‌ನವರು ಮೊಂಬತ್ತಿ ಬೆಳಗಿದರು. ಆದರೆ ನಮ್ಮ ಪ್ರಧಾನಿ ಮೋದಿ ಅವರು ಕಾಶ್ಮಿರದಲ್ಲಿ 50 ಸೈನಿಕರು ಸತ್ತರೆ ಪಾಕಿಸ್ತಾನದ 350 ಉಗ್ರರನ್ನು ಸದೆಬಡೆದರು. ಈಗ ಹೇಳಿ ಯಾರು ಬೇಕು? ಇವತ್ತು ನಮ್ಮ ದೇಶ ಕಾಯುವ ಶಕ್ತಿ ಇರುವುದು ಮೋದಿ ಅವರಿಗೆ ಮಾತ್ರ. ಸಂಸತ್ತಿನಲ್ಲಿ ಕುಳಿತು ಕಣ್ಣು ಹೊಡೆಯುವುದಾದರೆ ರಾಹುಲ್ ಗಾಂಧಿ ಅವರು ಯಾಕೆ ಬೇಕು’ ಎಂದು ಕೇಳಿದರು.

‘ಚಿಕ್ಕಬಳ್ಳಾಪುರಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಆರ್‌ಟಿಒ ಕಚೇರಿ, ಜಿಲ್ಲಾಡಳಿತ ಭವನ, ಮೆಗಾ ಡೇರಿಗೆ ಅನುಮೋದನೆ ಕೊಟ್ಟಿದ್ದು ಬಿಜೆಪಿ. ಮೋದಿ ಅವರ ಸರ್ಕಾರದಲ್ಲಿ 5 ಕೋಟಿ ರಸ್ತೆ ಬದಿ ವ್ಯಾಪಾರಿಗಳಿಗೆ ಭದ್ರತೆ ಇಲ್ಲದೆ ಸಾಲ, ಉಜ್ವಲ ಯೋಜನೆ ಅಡಿ ಉಚಿತ ಅಡುಗೆ ಅನಿಲ ಸಂಪರ್ಕ, ಆಯುಷ್ಮಾನ್ ಭಾರತ್ ಯೋಜನೆ ಅಡಿ ಸರ್ಕಾರಿ ಆಸ್ಪತ್ರೆಯಲ್ಲಿ ₨5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ದೊರೆಯುತ್ತಿದೆ’ ಎಂದು ಹೇಳಿದರು.

‘ಸುಳ್ಳು ಹೇಳುವ ವೀರಪ್ಪ ಮೊಯಿಲಿ ಸಾಕು. ಇಲ್ಲೇ ಹುಟ್ಟಿ, ಬದುಕಿ, ಸಾಯುವಂತಹ ಕೆಂಪೇಗೌಡರ ವಂಶಜರಾದ ನಮ್ಮ ಬಚ್ಚೇಗೌಡರು ನಮಗೆ ಬೇಕು. ಕಳೆದ ಬಾರಿ ಆದ ತಪ್ಪು ಈ ಬಾರಿ ಆಗಬಾರದು. ಬದಲಾವಣೆಗೆ ಜನ ತೀರ್ಮಾನ ಮಾಡಿದ್ದಾರೆ. ಬಚ್ಚೇಗೌಡರು ಈ ಬಾರಿ 2 ಲಕ್ಷ ಮತಗಳ ದೊಡ್ಡ ಅಂತರದಲ್ಲಿ ಗೆದ್ದು, ಸಂಸತ್ತಿನಲ್ಲಿ ಮೋದಿ ಅವರ ಜತೆ ಕುಳಿತುಕೊಳ್ಳುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಚುನಾವಣಾ ಉಸ್ತುವಾರಿ ಸಚ್ಚಿದಾನಂದ ಮೂರ್ತಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್‌, ರಾಜ್ಯ ಕಾರ್ಯಕಾರಣಿ ಸದಸ್ಯ ಲಕ್ಷ್ಮಿನಾರಾಯಣ ಗುಪ್ತಾ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ಮಂಜುನಾಥ್‌ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !