ಔಷಧೀಯ ಗುಣದ ಕೆಂಬಸಳೆ

ಮಂಗಳವಾರ, ಏಪ್ರಿಲ್ 23, 2019
33 °C

ಔಷಧೀಯ ಗುಣದ ಕೆಂಬಸಳೆ

Published:
Updated:
Prajavani

ಹಚ್ಚ ಹಸುರು ವರ್ಣದ ಎಲೆ ಹಾಗೂ ದಂಡುಗಳಿರುವ ಬಸಳೆ ಎಲ್ಲರಿಗೂ ಪರಿಚಿತ. ಅದರಿಂದ ತಯಾರಿಸುವ ನಾನಾ ಬಗೆಯ ಸಾರು, ಸಾಂಬಾರುಗಳು ರುಚಿಯ ದೃಷ್ಟಿಯಿಂದ ಮನ ಗೆಲ್ಲುತ್ತವೆ, ಔಷಧೀಯವಾಗಿಯೂ ಅನೇಕ ಬಳಕೆಗಳಿಗೂ ಬೇಕಾಗುತ್ತದೆ. ಆದರೆ ಮನ ಸೆಳೆಯುವ ಕೆಂಪು ವರ್ಣದ ಬಸಳೆ ನೋಡಲು ಮಾತ್ರ ಆಕರ್ಷಕವಲ್ಲ.

ಪದಾರ್ಥಗಳ ತಯಾರಿಕೆಯಷ್ಟೇ ಔಷಧೀಯ ಉಪಯೋಗಗಳಿಗೂ ಬೇಕಾಗುತ್ತದೆ. ಬಂಟ್ವಾಳದ ಮಂಚಿಯಲ್ಲಿರುವ ಸತ್ಯಭಾಮಾ ಶಂಕರನಾರಾಯಣ ಅವರ ಮನೆಯಂಗಳಲ್ಲಿ ವರ್ಷವಿಡೀ ಚಪ್ಪರ ತುಂಬಿಕೊಂಡಿರುವ ಕೆಂಪು ಬಸಳೆ ಗೋಬರ್ ಬಗ್ಗಡದ ಸತ್ತ್ವದಿಂದಲೇ ಹರಡಿ ಬೆಳೆಯುತ್ತದೆ. ರಾಸಾಯನಿಕ ಗೊಬ್ಬರ ಬಯಸುವುದಿಲ್ಲ. ಎಲೆಗಳು ಹಚ್ಚ ಹಸಿರಾಗಿ ದಪ್ಪವಿರುವುದರಿಂದ ವ್ಯಂಜನಗಳ ತಯಾರಿಕೆಗೂ ಹೆಚ್ಚು ಅನುಕೂಲಕರವಾಗಿವೆ. ಇದರ ದಂಡನ್ನು ಪಾಲಿಥಿನ್ ಹಾಳೆಯಲ್ಲಿ ನೆಟ್ಟು ತಯಾರಿಸುವ ಗಿಡಗಳಿಗೆ ಸಾವಯವ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಮತ್ತು ಬೇಡಿಕೆ ಇದೆಯಂತೆ. ಮಳೆಗಾಲದಲ್ಲಿಯೂ ಎಲೆಗಳು ಕೊಳೆಯದೆ ದಿನದ ಅಡುಗೆಗೆ ಒದಗುತ್ತದೆಂಬ ವಿವರಣೆ ಅವರದು.

ಕೆಂಪು ಬಸಳೆಯ ಎಲೆಯಲ್ಲಿ ಎ ಜೀವಸತ್ತ್ವ ಅಧಿಕವಾಗಿರುವುದರಿಂದ ನಿತ್ಯ ಬಕೆಯಿಂದ ಇರುಳು ಕರುಡುತನವನ್ನು ನೀಗಬಹುದು. ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳು ಇದರಲ್ಲಿವೆ. ಎಲೆಗಳನ್ನು ಅಕ್ಕಿಯೊಂದಿಗೆ ಸೇರಿಸಿ ತಯಾರಿಸುವ ಪತ್ರೊಡೆಯ ಸೇವನೆಯಿಂದ ಉರಿ ಮೂತ್ರ ಮತ್ತು ಹಲವಾರು ಮೂತ್ರಕೋಶದ ಸಮಸ್ಯೆಗಳು ಗುಣವಾಗುತ್ತದೆಂಬ ಮಾತು ಹೇಳುತ್ತಾರೆ ಸತ್ಯಭಾಮಾ ಅವರು.

ಬಿಸಿ ನೀರು, ಎಣ್ಣೆ ಇತ್ಯಾದಿಗಳು ದೇಹಕ್ಕೆ ತಗುಲಿ ಉರಿ ಬರುತ್ತಿದ್ದರೆ ಕೆಂಪು ಬಸಳೆಯ ಎಲೆಗಳಿಂದ ಹಿಂಡಿದ ರಸವನ್ನು ಅಂತಹ ದೇಹ ಭಾಗಗಳಿಗೆ ಲೇಪಿಸುವುದರಿಂದ ಉರಿ ನೀಗಿ ತಂಪಾಗುತ್ತದೆ. ಕಲೆಗಳಾಗದೆ ಶೀಘ್ರ ಶಮನವಾಗುತ್ತದೆ. ಕೆಂಪು ಬಸಳೆಯ ರಸ ಹಿಂಡಿ ಚಿಟಿಕೆ ಜೀರಿಗೆ ಮತ್ತು ಉಪ್ಪು ಬೆರೆಸಿ ಕುದಿಸಿ ಕುಡಿಯುವುದು ಕಡು ಬೇಸಗೆಯ ದಾಹ ಶಮನಗೊಳಿಸುತ್ತದೆ. ಮಲ ಬದ್ಧತೆಯಿಂದ ಬಳಲುತ್ತಿರುವವರಿಗೆ ಕೆಂಪು ಬಸಳೆಯ ಎಲೆ ಮತ್ತು ದಂಡುಗಳಿಂದ ಸಿದ್ಧವಾದ ಸಾಂಬಾರನ್ನು ಅನ್ನದೊಂದಿಗೆ ಸೇವಿಸುವುದರಿಂದ ಶೀಘ್ರವಾಗಿ ಕರುಳಿನ ಪರಿಶುದ್ಧಿಯಾಗುತ್ತದೆ.

ಮುಖದ ಮೊಡವೆ ಮತ್ತು ಕಲೆಗಳ ನಿವಾರಣೆಗೆ ಕೆಂಪು ಬಸಳೆಯ ಎಲೆಗಳನ್ನು ಅರೆದು ಅಲೋವೆರಾ ರಸ, ಅರಶಿನ ಹುಡಿ, ಮೊಸರುಗಳೊಂದಿಗೆ ಮಿಶ್ರಗೊಳಿಸಿ ಲೇಪಿಸುವುದರಿಂದ ಮುಖ ನವಕಾಂತಿಯಿಂದ ಕಂಗೊಳಿಸುತ್ತದೆ. ಕೆಂಬಸಳೆಯ ಎಲೆಗಳಿಂದ ಸೂಪ್ ತಯಾರಿಸಿ ಊಟದ ಮುನ್ನ ಸೇವಿಸಿದರೆ ದಾಹ ಮತ್ತು ಹಸಿವಿಲ್ಲದಿರುವಿಕೆಗಳು ನೀಗುತ್ತವೆಯಂತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !