ಶುಕ್ರವಾರ, ಫೆಬ್ರವರಿ 26, 2021
20 °C
ವರ್ಷಾಂತ್ಯದಲ್ಲಿ ದೊರೆತ ಉತ್ತಮ ಬೆಲೆಯಿಂದ ಉತ್ತೇಜನಗೊಂಡಿರು ಬೆಳೆಗಾರರು

ತಂಬಾಕು: ಮತ್ತೆ ಗರಿಗೆದರಿದ ಚಟುವಟಿಕೆ

ಬಿ.ಆರ್.ಗಣೇಶ್‍ Updated:

ಅಕ್ಷರ ಗಾತ್ರ : | |

Prajavani

ಪಿರಿಯಾಪಟ್ಟಣ/ಹುಣಸೂರು: ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ತಂಬಾಕು ಬೆಳೆಗೆ ವರ್ಷಾಂತ್ಯದಲ್ಲಿ ಉತ್ತಮ ಬೆಲೆ ದೊರಕಿದೆ. ಇದರಿಂದ ಖುಷಿಗೊಂಡಿರುವ ರೈತರು ಹೊಸ ಭರವಸೆ, ಹಾಗೂ ಉತ್ಸಾಹದಿಂದ ಮತ್ತೆ ತಂಬಾಕು ಬೆಳೆಯಲು ಸಿದ್ಧರಾಗುತ್ತಿದ್ದಾರೆ.

2018-19ನೇ ಸಾಲಿನ ರಾಜ್ಯದ ತಂಬಾಕು ಹರಾಜು ಪ್ರಕ್ರಿಯೆ ಮಾರ್ಚ್‌ ಅಂತ್ಯಕ್ಕೆ ಮುಕ್ತಾಯಗೊಂಡಿದ್ದು ಈ ಸಾಲಿನಲ್ಲಿ ಒಟ್ಟು 85 ಲಕ್ಷ ಕೆ.ಜಿ ತಂಬಾಕು ಮಾರಾಟವಾಗಿದೆ. ರಾಜ್ಯಕ್ಕೆ 100 ಲಕ್ಷ ಕೆ.ಜಿ. ತಂಬಾಕು ಉತ್ಪಾದನೆಗೆ ಕೇಂದ್ರ ತಂಬಾಕು ಮಂಡಳಿ ಅನುಮತಿ ನೀಡಿತ್ತಾದರೂ ಅತಿವೃಷ್ಟಿಯಿಂದ 15 ಲಕ್ಷ ಕೆ.ಜಿ. ಉತ್ಪಾದನೆ ಕುಸಿತಗೊಂಡಿತ್ತು.

2017–18ನೇ ಸಾಲಿಗೆ ಹೋಲಿಸಿದಲ್ಲಿ ಒಟ್ಟಾರೆ 21 ಲಕ್ಷ ಕೆ.ಜಿ ತಂಬಾಕು ಉತ್ಪಾದನೆ ಕುಸಿತವಾಗಿದೆ. ಆಗ ಸಾಲಿನಲ್ಲಿ 106 ಮಿಲಿಯನ್ ತಂಬಾಕು ಮಾರಾಟವಾಗಿತ್ತು.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ ಕೋಟೆ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕುಗಳ ಪ್ರಮುಖ ವಾಣಿಜ್ಯ ಬೆಳೆ ತಂಬಾಕು. ಒಟ್ಟು 43 ಸಾವಿರ ನೋಂದಾಯಿತ ತಂಬಾಕು ಬೆಳೆಗಾರರಿದ್ದು ಸುಮಾರು 22 ಸಾವಿರ ಮಂದಿ ಕಾರ್ಡ್‍ದಾರರು ಇದ್ದಾರೆ.

ಈ ಸಾಲಿನಲ್ಲಿ ಉತ್ತಮ ಗುಣಮಟ್ಟದ 19.2 ಮಿಲಿಯನ್ ತಂಬಾಕು ಮಾರಾಟವಾಗಿದ್ದರೆ ಮಧ್ಯಮ ಗುಣಮಟ್ಟದ 39.3 ಮಿಲಿಯನ್ ತಂಬಾಕು ಮಾರಾಟವಾಗಿದೆ. ಸಾಧಾರಣ ಗುಣಮಟ್ಟದ 26.5 ಮಿಲಿಯನ್ ತಂಬಾಕು ಮಾರಾಟವಾಗುವ ಮೂಲಕ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಈ ಸಾಲಿನಲ್ಲಿ ಉತ್ತಮ, ಮಧ್ಯಮ ಮತ್ತು ಸಾಧಾರಣ ಗುಣಮಟ್ಟದ ತಂಬಾಕಿಗೆ ಸರಾಸರಿ ದರ ಪ್ರತಿ ಕೆ.ಜಿ ಗೆ ಕ್ರಮವಾಗಿ ರೂ.165, 147, 119 ದರ ಸಿಕ್ಕಿದ್ದು ಕಳೆದ ಸಾಲಿನಲ್ಲಿ ₹ 162, 149, 112 ದರ ದೊರಕಿತ್ತು. ಒಟ್ಟಾರೆ ಉತ್ತಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆ.ಜಿ ಗೆ ₹ 3 ಮತ್ತು ಸಾಧಾರಣ ಗುಣಮಟ್ಟದ ತಂಬಾಕಿಗೆ ₹7 ಹೆಚ್ಚಳವಾಗಿದ್ದರೆ, ಮಧ್ಯಮ ಗುಣಮಟ್ಟದ ತಂಬಾಕಿಗೆ ಪ್ರತಿ ಕೆ.ಜಿ ಗೆ ₹ 2 ಕುಸಿತ ಕಂಡಿದೆ.

2017–18 ನೇ ಸಾಲಿನಲ್ಲಿ ತಂಬಾಕು ಸರಾಸರಿ ದರ ₹ 140.30 ಪೈಸೆ ಸಿಕ್ಕಿದ್ದು, 2018–19 ಸಾಲಿನಲ್ಲಿ ₹ 142.28 ಪೈಸೆ ಸಿಕ್ಕಿದೆ. ಗರಿಷ್ಠ ದರ ₹ 192 ಕನಿಷ್ಠ ₹ 70 ಸಿಕ್ಕಿದೆ. ಇದರಿಂದ ಉತ್ತೇಜನಗೊಂಡಿರುವ ರೈತರು ಈ ವರ್ಷ ಮತ್ತೆ ತಂಬಾಕು ಬೆಳೆಯಲು ಸಿದ್ಧರಾಗುತ್ತಿದ್ದಾರೆ ಎನ್ನುತ್ತಾರೆ ತಂಬಾಕು ಬೆಳೆಗಾರ ಚಂದ್ರೇಗೌಡ.

‘ಪ್ರತಿ ವರ್ಷ ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಆರಂಭಗೊಂಡ ಕೆಲ ದಿನಗಳಲ್ಲಿ ಉತ್ತಮ ಬೆಲೆ ನೀಡಿ, ನಂತರ ಇಳಿಸುತ್ತಾರೆ. ಹರಾಜು ಪ್ರಕ್ರಿಯೆ ಮುಕ್ತಾಯದ ದಿನಗಳಲ್ಲಿ ಮತ್ತೆ ದರ ಹೆಚ್ಚಿಸುವ ಮೂಲಕ ರೈತರಲ್ಲಿ ಆಸೆ ಹುಟ್ಟಿಸಿ ತಂಬಾಕು ಬೆಳೆಯಲು ಉತ್ತೇಜಿಸುತ್ತಾರೆ. ಇದು ಕಂಪನಿಗಳು ಕಂಡುಕೊಂಡಿರುವ ಜಾಣ್ಮೆಯ ದಾರಿ’ ಎನ್ನುತ್ತಾರೆ ಬನ್ನಿಕುಪ್ಪೆಯ ರವಿಕುಮಾರ್‌.

ಈ ಸಾಲಿನಲ್ಲಿ ಈಗಾಗಲೇ ತಂಬಾಕು ಬೆಳೆಗಾರರು ಸಸಿ ಮಡಿ ತಯಾರಿಸಿಕೊಂಡಿದ್ದು, ಕಳೆದೆರೆಡು ದಿನಗಳಿಂದ  ಬಿದ್ದಿರುವ ಒಂದೆರಡು ಹದ ಮಳೆಗೆ ನಾಟಿ ಮಾಡಲು ಮುಂದಾಗಿದ್ದಾರೆ. ಆದರೆ, ಆಲಿಕಲ್ಲು ಮಳೆಗೆ ತಂಬಾಕು ಸಸಿಗೆ ಹಾನಿಯಾಗಿರುವುದೂ ಆತಂಕ ಮೂಡಿಸಿದೆ.

2019–20 ನೇ ಸಾಲಿನಲ್ಲಿ ತಂಬಾಕು ಮಂಡಳಿ 100 ಮಿಲಿಯನ್ ಕೆ.ಜಿ.ಗುರಿಯನ್ನು ನಿಗದಿಪಡಿಸಿದ್ದು, ಇದು ರೈತರಲ್ಲಿ ಹುರುಪು ಮೂಡಿಸಿದೆ. ಅಲ್ಲದೇ, ತಂಬಾಕು ಬೆಳೆಗಾರರಿಗೆ ರಸಗೊಬ್ಬರ ವಿತರಿಸಲು ತಂಬಾಕು ಮಂಡಳಿ ಸಿದ್ದತೆ ನಡೆಸಿದೆ ಎಂದು  ಹುಣಸೂರು ತಾಲ್ಲೂಕಿನ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆ ಅಧಿಕಾರಿ ದಿನೇಶ್‌ ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು