ಮಂಗಳವಾರ, ಆಗಸ್ಟ್ 3, 2021
21 °C
ಜಾಲಾರಿ ಗಂಗಮಾಂಭ ದೇವಾಲಯದ 59ನೇ ವರ್ಷದ ಧರ್ಮರಾಯಸ್ವಾಮಿ ಹೂವಿನ ಕರಗ ವೈಭವಪೂರ್ಣ ಶಕ್ತ್ಯುತ್ಸವ

ಸಡಗರದಿಂದ ಸಾಗಿದ ಹೂವಿನ ಕರಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಗಂಗಮ್ಮನ ಗುಡಿ ರಸ್ತೆಯ ಜಾಲಾರಿ ಗಂಗಮಾಂಭ ದೇವಾಲಯದ 59ನೇ ವರ್ಷದ ಧರ್ಮರಾಯಸ್ವಾಮಿ ಹೂವಿನ ಕರಗ ಶಕ್ತ್ಯುತ್ಸವ ಭಾನುವಾರ ಮಧ್ಯಾಹ್ನದ ವರೆಗೆ ನಗರದಾದ್ಯಂತ ವೈಭವಪೂರ್ಣವಾಗಿ ನಡೆಯಿತು. ನೆರೆಹೊರೆಯ ಗ್ರಾಮಸ್ಥರ ಜತೆಗೆ ಸ್ಥಳೀಯ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

ಕರಗದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿತ್ತು. ನಗರದ ತುಂಬೆಲ್ಲ ರಾತ್ರಿ ಜಾತ್ರೆಯ ಸಡಗರ ಮನೆ ಮಾಡಿತ್ತು. ನಗರದ ಅನೇಕ ಕಡೆಗಳಲ್ಲಿ ಭಕ್ತಾಧಿಗಳು ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು.

ಗಂಗಮಾಂಭ ದೇವಾಲಯದಲ್ಲಿ ಶನಿವಾರ ರಾತ್ರಿ ದ್ರೌಪದಮ್ಮನವರ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದ ಬಳಿಕ, ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ಮೇಲೂರಿನ ಕೆ.ಧರ್ಮೇಂದ್ರ ಅವರು ಹೂವಿನ ಕರಗ ಹೊತ್ತು ರಾತ್ರಿ 10ರ ಸುಮಾರಿಗೆ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬಂದರು.

ಪೂಜಾರಿಯ ಹಿಂದೆ ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು. ದೇವಸ್ಥಾನದ ಬಳಿಯೇ ನಿರ್ಮಿಸಿದ ವೇದಿಕೆಯ ಮೇಲೆ ನಾಗರಾಜ್‌ ಅವರು ತಮಟೆಯ ಹಿಮ್ಮೇಳದಲ್ಲಿ ಕೆಲ ಹೊತ್ತು ನೃತ್ಯ ಮಾಡಿದರು. ಬಳಿಕ ಕರಗದ ಮೆರವಣಿಗೆ ನಗರದೊಳಗೆ ಸಾಗಿತು.

ಮಲ್ಲಿಗೆ, ಕನಕಾಂಬರ ಹೂವುಗಳು, ಮೇಲ್ತುದಿಯಲ್ಲಿ ಬೆಳ್ಳಿ ಛತ್ರಿಯಿಂದ ಆಕರ್ಷಕವಾಗಿ ಕಂಗೋಳಿಸುತ್ತಿದ್ದ ‘ಕರಗ’ ಸಾಗಿದ ದಾರಿಯುದ್ದಕ್ಕೂ ಮಲ್ಲಿಗೆಯ ಪರಿಮಳ ಸೂಸುತ್ತಿತ್ತು. ನಗರದ ವಿವಿಧೆಡೆ ಭಕ್ತರು ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಿದ್ದರು. ಗಲ್ಲಿ ಗಲ್ಲಿಗಳಲ್ಲಿ ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕರಗದ ದರ್ಶನ ಪಡೆದರು.

ಎಂ.ಜಿ.ರಸ್ತೆ, ನಂದಿ ರಂಗಮಂದಿರ ಮತ್ತು ಗಂಗಮ್ಮನಗುಡಿ ರಸ್ತೆಯಲ್ಲಿ ಕರಗದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆ ವೇದಿಕೆಗಳ ಮೇಲೆ ಕರಗ ಹೊತ್ತ ನಾಗರಾಜ್ ಅವರು ತಮಟೆಯ ಸದ್ದಿನ ನಡುವೆ ಕೆಲ ಹೊತ್ತು ವಿವಿಧ ಭಂಗಿಗಳಲ್ಲಿ ಪ್ರದರ್ಶಿಸಿದ ನೃತ್ಯವನ್ನು ಜನರು ಶ್ರದ್ಧಾಭಕ್ತಿಯಿಂದ ಕಣ್ತುಂಬಿಕೊಂಡರು. ಇನ್ನು ಅನೇಕರು ಕರಗ ನೃತ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು.

ನಗರದಾದ್ಯಂತ ಸಂಚರಿಸಿದ ಕರಗದ ಮೆರವಣಿಗೆಗೆ ಕೀಲುಕುದುರೆ, ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ ವಾದನ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ರಂಗು ತುಂಬಿದವು. ನಗರದ ಬಹುತೇಕ ವಾರ್ಡ್‌ಗಳ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಲ್ಲಿ ಕರಗ ಸಾಗಿ ಬಂದಾಗ ಸ್ಥಳೀಯರು ಪೂಜೆ ಸಲ್ಲಿ­ಸಿ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯಗಳು ಕಂಡುಬಂದವು.

ವಹ್ನಿಕುಲಸ್ಥರ (ತಿಗಳರು) ಮನೆಗಳಲ್ಲಿ ಭಾನುವಾರ ಕರಗಕ್ಕೆ ಪೂಜೆ ಸಲ್ಲಿಸಲಾಯಿತು. ಗಂಗಮಾಂಭ ದೇವಾಲಯದ ಬಳಿ ನಿರ್ಮಿಸಿದ ಅಗ್ನಿಕುಂಡವನ್ನು ಸಂಜೆ ನಾಗರಾಜ್ ಅವರು ಪ್ರವೇಶಿಸಿದರು. ನಂತರ ಭುವನೇಶ್ವರಿ ವೃತ್ತದಲ್ಲಿ ವಸಂತೋತ್ಸವ (ಒನಕೆ ಕರಗ) ಆಚರಿಸುವುದರ ಮೂಲಕ ಕರಗ ಮಹೋತ್ಸವ ಸಂಪನ್ನಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು