ಶುಕ್ರವಾರ, ಏಪ್ರಿಲ್ 23, 2021
26 °C
ಅಯೋಧ್ಯೆ ವಿಚಾರವನ್ನು ಬಿಜೆಪಿ ಕೈಬಿಟ್ಟದ್ದಕ್ಕೆ ಜನರಿಗೆ ಅತೃಪ್ತಿಯೇನೂ ಇಲ್ಲ

ಎಲ್ಲೂ ಕೇಳಿಸುತ್ತಿಲ್ಲ ‘ಮಂದಿರ’ ವಿಚಾರ

ಬಿ.ಎಸ್‌. ಅರುಣ್‌ Updated:

ಅಕ್ಷರ ಗಾತ್ರ : | |

ಅಯೋಧ್ಯೆ: ಈ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಅಯೋಧ್ಯೆಯ ರಾಮ ಮಂದಿರದ ವಿಚಾರವನ್ನು ಬಿಜೆಪಿಯ ಯಾವುದೇ ನಾಯಕ ಎತ್ತಿದ್ದನ್ನು ಗಮನಿಸಿದ್ದೀರಾ? ಖಂಡಿತವಾಗಿ ಇಲ್ಲ. ಒಂದು ಕಾಲದಲ್ಲಿ ಬಹಳ ಭಾವನಾತ್ಮಕವಾಗಿದ್ದ ವಿಚಾರ ಈಗ ಮರೆತೇ ಹೋಗಿದೆ. 

ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಅಯೋಧ್ಯೆ ವಿವಾದದ ವಿಚಾರ ಪ್ರಸ್ತಾಪವಾಗಿದೆ ಅಷ್ಟೇ. ಅಯೋಧ್ಯೆಯಲ್ಲಿಯೂ ಈ ವಿಚಾರದ ಬಗ್ಗೆ ಅಂತಹ ಹುರುಪೇನೂ ಕಾಣಿಸುತ್ತಿಲ್ಲ. ರಾಮ ಜನ್ಮಭೂಮಿ ಚಳವಳಿಯ ಜತೆಗೆ ನಿಕಟ ಸಂಬಂಧ ಹೊಂದಿರುವ ಕೆಲವು ಸಂತರನ್ನು ಬಿಟ್ಟರೆ ಉಳಿದವರು ಯಾರೂ ಬಿಜೆಪಿಯ ನಿಲುವನ್ನು ಪ್ರಶ್ನಿಸುತ್ತಿಲ್ಲ. ಚುನಾವಣಾ ಪ್ರಚಾರ ಸಭೆಗಳಲ್ಲಿ ಅಥವಾ ಮನೆಮನೆ ಪ್ರಚಾರದಲ್ಲಿ ರಾಮನ ಪ್ರಸ್ತಾಪ ಇಲ್ಲವೇ ಇಲ್ಲ. ‘ಮಂದಿರವಲ್ಲೇ ಕಟ್ಟುವೆವು’ ಎಂಬ ಘೋಷಣೆಗಳು ಈಗ ಎಲ್ಲಿಯೂ ಕೇಳಿಸುತ್ತಿಲ್ಲ. 

ಬಿಜೆಪಿಯ ನಿರ್ಧಾರಕ್ಕೆ ತಾವು ಬದ್ಧ ಎಂದು ಹೇಳಿದವರು ವಿವಾದಿತ ನಿವೇಶನದಲ್ಲಿರುವ ತಾತ್ಕಾಲಿಕ ರಾಮ ಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿನ ವರ್ತಕ ದೀನಾನಾಥ ಗುಪ್ತಾ. ‘ಈ ವಿಚಾರವನ್ನು ಬಿಜೆಪಿ ಕೈಗೆತ್ತಿಕೊಂಡಿಲ್ಲ ಎಂದಾದರೆ ಅದು ಪಕ್ಷದ ನಿರ್ಧಾರ. ಅದರೊಂದಿಗೆ ನಾವು ಯಾಕೆ ಭಿನ್ನಾಭಿಪ್ರಾಯ ಹೊಂದಬೇಕು? ಇದುವೇ ಸರಿಯಾದ ನಿಲುವು ಎಂದು ಅವರು ಭಾವಿಸಿರಬಹುದು’ ಎಂಬುದು ಗುಪ್ತಾ ಅವರ ಅಭಿಪ್ರಾಯ. 

ಗೆಳೆಯರೊಂದಿಗೆ ಸರಯೂ ಘಾಟ್‌ ನೋಡಲು ಬಂದಿರುವ ವಿದ್ಯಾರ್ಥಿ ಪ್ರಬೋಧ್‌ ಪಂತ್‌ ಅವರಿಗೂ ಈ ಬಗ್ಗೆ ತಕರಾರೇನೂ ಇಲ್ಲ. ‘ಬಿಜೆಪಿ ರಾಜಕಾರಣದಲ್ಲಿ ಧರ್ಮವನ್ನು ಬೆರೆಸುತ್ತಿದೆ ಎಂದು ಮಾಧ್ಯಮವೇ ಟೀಕಿಸುತ್ತಿತ್ತು. ಅಯೋಧ್ಯೆ ವಿಚಾರವನ್ನು ಬಿಜೆಪಿ ಎತ್ತುತ್ತಿಲ್ಲ ಎಂದಾದರೆ ಸಮಸ್ಯೆ ಏನು’ ಎಂದು ಅವರು ಪ್ರಶ್ನಿಸುತ್ತಾರೆ. 

ದೇಗುಲಗಳ ನಗರಿಯ ಹಲವು ಧ್ವನಿಗಳೂ ಇದೇ ಭಾವನೆಯನ್ನು ಪ್ರತಿಧ್ವನಿಸುತ್ತಿವೆ. ಈ ವಿಚಾರ ಹಿಂದೊಂದು ಕಾಲದಲ್ಲಿ ಅಯೋಧ್ಯೆಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಭಾವನೆಗಳನ್ನು ಬಡಿದೆಬ್ಬಿಸುತ್ತಿತ್ತು. ಲೋಕಸಭೆಯಲ್ಲಿ ಎರಡು ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯನ್ನು ದಶಕದ ಅವಧಿಯಲ್ಲಿ ಅಧಿಕಾರಕ್ಕೆ ಏರಿಸಿತ್ತು. ಕೆಲವು ಭಿನ್ನ ಧ್ವನಿಗಳೂ ಇವೆ.

‘ಬಿಜೆಪಿಗೆ ದೇವಾಲಯ ಬೇಡ ಎಂದಾದರೆ ಏನು ಮಾಡಲು ಸಾಧ್ಯ? ಅಯೋಧ್ಯೆ ಮತ್ತು ದೇಶದ ಇತರೆಡೆ ಇರುವ ಸಂತ ಸಮುದಾಯವು ರಾಮ ಮಂದಿರದ ಬೇಡಿಕೆಯನ್ನು ಕೈಬಿಟ್ಟಿಲ್ಲ. ಹಾಗಿದ್ದರೂ ನಾವು ಬಿಜೆಪಿ ಅಥವಾ ಬೇರಾವುದೇ ಪಕ್ಷದ ಬೆಂಬಲ ಬಯಸಿಲ್ಲ’ ಎಂದವರು ಜನದಟ್ಟಣೆಯ ಹನುಮಾನ್‌ ಗರ್ಹಿ ದೇವಾಲಯದ ಹೆಬ್ಬಾಗಿಲಲ್ಲಿದ್ದ ಸಂತ. ‘ರಾಮ ಮಂದಿರ ವಿಚಾರವು ಮತ ತಾರದು, ಬದಲಿಗೆ ರಾಷ್ಟ್ರೀಯತೆ ಮತ ತರುತ್ತದೆ ಎಂಬುದು ಬಿಜೆಪಿಗೆ ತಿಳಿದಿದೆ. ಹಾಗಾಗಿಯೇ ರಾಮನ ಜಾಗಕ್ಕೆ ಪುಲ್ವಾಮಾ ಮತ್ತು ಬಾಲಾಕೋಟ್‌ ಬಂದಿವೆ’ ಎನ್ನುತ್ತಾರೆ ಬಿಜೆಪಿಯ ಕಟು ಟೀಕಾಕಾರ, ಅವಧ್‌ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾ‍ಪಕರಾಮಶಂಕರ್ ತ್ರಿಪಾಠಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು