ಕಲ್ಯಾಣ ನಿಧಿಗಾಗಿ ಹಿರಣ್ಣಯ್ಯ ನಾಟಕ

ಸೋಮವಾರ, ಮೇ 27, 2019
33 °C
ಚಿಕ್ಕಬಳ್ಳಾಪುರ ಉಪ ವಿಭಾಗದ ಪತ್ರಕರ್ತರ ಸಂಘದ ಸಹಾಯಾರ್ಥ 1990ರಲ್ಲಿ ‘ದೇವದಾಸಿ’ ನಾಟಕ ಪ್ರದರ್ಶನ

ಕಲ್ಯಾಣ ನಿಧಿಗಾಗಿ ಹಿರಣ್ಣಯ್ಯ ನಾಟಕ

Published:
Updated:
Prajavani

ಚಿಕ್ಕಬಳ್ಳಾಪುರ: ಲಂಚಾವತಾರ ನಾಟಕದ ಮೂಲಕ ಭ್ರಷ್ಟಾಚಾರ ಮತ್ತು ವ್ಯವಸ್ಥೆಯ ಹುಳುಕುಗಳ ವಿರುದ್ಧ ಧ್ವನಿ ಎತ್ತಿದ್ದ ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಅವರು ಸಾಮಾಜಿಕ ಕಳಕಳಿಯ ಕಾರ್ಯಕ್ಕಾಗಿ ಸಾಕಷ್ಟು ಬಾರಿ ನಾಟಕ ಪ್ರದರ್ಶಿಸಿದ ಅನೇಕ ಉದಾಹರಣೆಗಳಿವೆ. ಆ ಪೈಕಿ 1990ರಲ್ಲಿ ಹಿರಣ್ಣಯ್ಯ ಅವರು ಪತ್ರಕರ್ತರ ಸಂಘದ ಕಲ್ಯಾಣ ನಿಧಿ ಸ್ಥಾಪಿಸಲು ಚಿಕ್ಕಬಳ್ಳಾಪುರದಲ್ಲಿ ನಾಟಕ ಪ್ರದರ್ಶಿಸಿದ್ದನ್ನು ಹಿರಿಯ ಪತ್ರಕರ್ತರು ಅವರ ಅಗಲಿಕೆಯ ಈ ಹೊತ್ತಿನಲ್ಲಿ ಸ್ಮರಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರದಲ್ಲಿ 1990ರಲ್ಲಿ ಸ್ಥಾಪಿಸಿದ ಚಿಕ್ಕಬಳ್ಳಾಪುರ ಉಪ ವಿಭಾಗದ ಪತ್ರಕರ್ತರ ಸಂಘದ ಕಲ್ಯಾಣ ನಿಧಿ ಸ್ಥಾಪಿಸುವ ಸಲುವಾಗಿ ಕೆಲ ಪತ್ರಕರ್ತರು ಹಿರಣ್ಣಯ್ಯ ಅವರ ನೆರವು ಕೋರಿದ್ದರು. ಹಿಂದುಮುಂದೆ ನೋಡದೆ ಪತ್ರಕರ್ತರ ನೆರವಾಗಲು ಮುಂದಾದ ಈ ಹಿರಿಯ ಕಲಾವಿದರು ಅಂದು ವಿಶ್ವೇಶ್ವರಯ್ಯ ಪ್ರೌಢಶಾಲೆ ಆವರಣದಲ್ಲಿ ನಿಡುಮಾಮಿಡಿ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ‘ದೇವದಾಸಿ’ ಎಂಬ ನಾಟಕ ಪ್ರದರ್ಶಿಸಿದ್ದರು.

‘ಆಡಳಿತ ವರಸೆಯನ್ನು ಖಂಡತುಂಡವಾಗಿ ಟೀಕಿಸುವ ಹಿರಣ್ಣಯ್ಯ ಅವರ ಸಂಭಾಷಣಾ ಪ್ರಧಾನ ನಾಟಕಗಳನ್ನು ನೋಡಲು ಆ ದಿನ ಶಾಲೆಯ ಆವರಣದಲ್ಲಿ ಕಿಕ್ಕಿರಿದು ಜನರು ಸೇರಿದ್ದರು. ಸರ್ಕಾರದ ತಪ್ಪು ನಡೆಗಳನ್ನು, ಭ್ರಷ್ಟಾಚಾರವನ್ನು ಟೀಕಿಸುವ ಅವರ ಶೈಲಿಗೆ ಚಪ್ಪಾಳೆಗಳು ಬೀಳುತ್ತಿದ್ದವು. ಆ ಕಾಲದಲ್ಲಿಯೇ ನಮಗೆ ನಾಟಕದಿಂದ ಸುಮಾರು ₨40 ಸಾವಿರ ಸಂಗ್ರಹವಾಗಿತ್ತು’ ಎಂದು ಅಂದು ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದ, ಹಿರಿಯ ಪತ್ರಕರ್ತ ಸೋಮಶೇಖರ್ ಹಳೆಯ ನೆನಪು ಮೆಲಕು ಹಾಕಿದರು.

‘ಹಿರಣ್ಣಯ್ಯ ಅವರ ಹಾಸ್ಯ ಪ್ರಜ್ಞೆಗೆ ಅವರಿಗೆ ಅವರೇ ಸಾಟಿ. ಮೊನಚು ಮಾತುಗಳಿಂದ ಸಮಾಜಕ್ಕೆ ತಿವಿಯುತ್ತಿದ್ದ ಅವರು, ಭ್ರಷ್ಟಾಚಾರದ ವಿರುದ್ಧ ಜನರನ್ನು ಜಾಗೃತಗೊಳಿಸುತ್ತಿದ್ದರು. ಅದರ ಭಾಗವಾಗಿಯೇ ಗುಂಡೂರಾವ್, ನಿಜಲಿಂಗಪ್ಪ, ಬಂಗಾರಪ್ಪ ಸೇರಿದಂತೆ ಯಡಿಯೂರಪ್ಪ ಆದಿಯಾಗಿ ಅನೇಕ ಮುಖ್ಯಮಂತ್ರಿಗಳ ವಿರುದ್ಧ ನಾಟಕಗಳಲ್ಲಿ ಪರೋಕ್ಷವಾಗಿ ವಾಗ್ದಾಳಿ ಮಾಡುತ್ತ ತಮ್ಮೊಳಗಿನ ಹೋರಾಟದ ಕಿಚ್ಚನ್ನು ಇತರರಿಗೆ ಪಸರಿಸುವ ಕೆಲಸ ಮಾಡುತ್ತಿದ್ದರು’ ಎಂದು ಸ್ಮರಿಸಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !