ಬುಧವಾರ, ಸೆಪ್ಟೆಂಬರ್ 22, 2021
24 °C
ಏಪ್ರಿಲ್‌ ತಿಂಗಳಲ್ಲಿ ಪಾಲಿಕೆಯಿಂದ ಗುರಿ ಮೀರಿದ ಸಾಧನೆ

₹ 56.5 ಕೋಟಿ ಆಸ್ತಿ ತೆರಿಗೆ ಸಂಗ್ರಹ

ಮಹಮ್ಮದ್‌ ನೂಮಾನ್ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತಿಂಗಳು ₹ 56.5 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡಿದೆ.

2019–20ರ ಸಾಲಿನ ಆಸ್ತಿ ತೆರಿಗೆಯನ್ನು ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ಪಾವತಿಸಿದರೆ ಶೇ 5 ರಷ್ಟು ರಿಯಾಯಿತಿ ನೀಡಲಾಗಿತ್ತು. ಆದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ತೆರಿಗೆ ಪಾವತಿದಾರರಲ್ಲಿ ಬಹುಪಾಲು ಮಂದಿ ಮೊದಲ ತಿಂಗಳಲ್ಲೇ ತೆರಿಗೆ ಕಟ್ಟಿದ್ದಾರೆ. ವಸತಿ, ವಾಣಿಜ್ಯ ಉದ್ದೇಶದ ಕಟ್ಟಡಗಳು ಮತ್ತು ನಿವೇಶನಗಳ ಮಾಲೀಕರು ತೆರಿಗೆ ಪಾವತಿಸಿದ್ದಾರೆ.

ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ಬಾರಿ ₹ 50 ಲಕ್ಷದಷ್ಟು ಅಧಿಕ ತೆರಿಗೆ ಸಂಗ್ರಹಿಸುವಲ್ಲಿ ಪಾಲಿಕೆ ಯಶಸ್ಸು ಕಂಡಿದೆ. 2018–19ರ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ₹ 56 ಕೋಟಿ ತೆರಿಗೆ ಸಂಗ್ರಹ ಆಗಿತ್ತು. 2017–18ರ ಏಪ್ರಿಲ್‌ನಲ್ಲಿ ₹ 41 ಕೋಟಿ ಸಂಗ್ರಹವಾಗಿತ್ತು.

ಕೆಎಂಸಿ ಕಾಯ್ದೆಯಲ್ಲಿರುವ ಅವಕಾಶ ಬಳಸಿಕೊಂಡು ಪ್ರತಿ ಆರ್ಥಿಕ ವರ್ಷದ ಮೊದಲ ತಿಂಗಳು ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಲಾಗುತ್ತದೆ. ರಿಯಾಯಿತಿಯನ್ನು ಎರಡನೇ ತಿಂಗಳಿಗೆ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಇಡೀ ವರ್ಷದ ತೆರಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿದವರಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗುತ್ತದೆ.

ಏಪ್ರಿಲ್‌ನಲ್ಲಿ ಶೇ 5 ರಿಯಾಯಿತಿ ನೀಡಿರುವುದರಿಂದ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗಿದೆ ಎಂದು ಪಾಲಿಕೆ ಉಪಆಯುಕ್ತ ಟಿ.ಬಿ.ಕುಮಾರ ನಾಯಕ್‌ ತಿಳಿಸಿದರು.

₹ 157 ಕೋಟಿ ನಿರೀಕ್ಷೆ: ಪಾಲಿಕೆಯು 2019–20ರ ಸಾಲಿನಲ್ಲಿ ₹ 157 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಇಟ್ಟುಕೊಂಡಿದೆ. ಇದರಲ್ಲಿ ಮೂರನೇ ಒಂದರಷ್ಟು ಭಾಗವನ್ನು ಏಪ್ರಿಲ್‌ ತಿಂಗಳಲ್ಲಿ ಸಂಗ್ರಹಿಸುವಲ್ಲಿ ಪಾಲಿಕೆ ಯಶಸ್ವಿಯಾಗಿದೆ.‌

ಏಪ್ರಿಲ್‌ 25ರ ವರೆಗೆ ₹ 40 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಕೊನೆಯ ಐದು ದಿನಗಳಲ್ಲಿ 10 ಕೋಟಿಗೂ ಅಧಿಕ ಆಸ್ತಿ ಸಂಗ್ರಹವಾಗಿದೆ. ಪಾಲಿಕೆಯ ಎಲ್ಲ 9 ವಲಯಗಳಲ್ಲೂ ತೆರಿಗೆ ಪಾವತಿಗಾಗಿ ಜನರು ಸಾಲುಗಟ್ಟಿ ನಿಂತಿದ್ದರು. ತೆರಿಗೆ ಕಟ್ಟುವವರಿಗೆ ಅನುಕೂಲ ಕಲ್ಪಿಸಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಹೆಚ್ಚುವರಿ ಸಿಬ್ಬಂದಿಯೂ ಕಾರ್ಯನಿರ್ವಹಿಸಿದ್ದರು.

ಪಾಲಿಕೆ 2018–19ರ ಸಾಲಿನಲ್ಲಿ ₹ 133 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿತ್ತು. ಆಸ್ತಿ ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪುವ ಉದ್ದೇಶದಿಂದ ತೆರಿಗೆ ಸಂಗ್ರಹ ಅಭಿಯಾನ ಕೈಗೊಳ್ಳಲಾಗಿತ್ತು. ಎಲ್ಲ ಒಂಬತ್ತು ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ಆನ್‌ಲೈನ್‌ ಪಾವತಿ ವ್ಯವಸ್ಥೆ ಇಲ್ಲ: ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್‌ ವ್ಯವಸ್ಥೆಯನ್ನು ಪಾಲಿಕೆ ಇನ್ನೂ ಜಾರಿಗೆ ತಂದಿಲ್ಲ. ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಬೇಕೆಂಬುದು ಮೈಸೂರಿನ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಇದಕ್ಕೆ ಸ್ಪಂದಿಸಿ ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷ ಮನೆಗಳು, 30 ಸಾವಿರ ವಾಣಿಜ್ಯ ಮಳಿಗೆಗಳು, ಕಟ್ಟಡಗಳು ಮತ್ತು 200 ರಷ್ಟು ಅಪಾರ್ಟ್‌ಮೆಂಟ್‌ಗಳಿವೆ. ಈ ಉದ್ದೇಶದಿಂದ ನಗರದ ಎಲ್ಲ ಆಸ್ತಿಗಳ ಮಾಹಿತಿ ಸಂಗ್ರಹಿಸಿ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಮುಂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.