ಶುಕ್ರವಾರ, ಮೇ 27, 2022
30 °C
ಶ್ರೀವಾಸವಿ ಜಯಂತಿ ಪ್ರಯುಕ್ತ ನಗರದಲ್ಲಿ 8ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜನೆ

ಯುವಜನರು ತಪ್ಪದೆ ರಕ್ತದಾನ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ ದಾನ. ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ. ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ’ ಎಂದು ಜಿಲ್ಲಾಕಾರಿ ಪಿ.ಅನಿರುದ್ಧ ಶ್ರವಣ್ ತಿಳಿಸಿದರು.

ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಮಂಡಳಿ, ವಾಸವಿ ಯುವಜನ ಸಂಘ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆ ವತಿಯಿಂದ ಶ್ರೀವಾಸವಿ ಜಯಂತಿ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ 8ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಕ್ತಕ್ಕೆ ಪರ್ಯಾಯ ಇಲ್ಲ. ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು. 18 ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

‘ಒಂದು ಯೂನಿಟ್‌ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ಇದರಿಂದ ಪ್ರಾಣ ಹಾನಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ರಕ್ತದಾನ ಇತರರಿಗೆ ಮರುಜನ್ಮನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಂಜುಂಡರಾಮಯ್ಯ ಶೆಟ್ಟಿ ಮಾತನಾಡಿ, ‘ರಕ್ತದ ಅವಶ್ಯಕತೆ ಉಂಟಾದಾಗ ಮಾತ್ರ ರಕ್ತದ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ಆದ್ದರಿಂದ, ಯುವಕರು ರಕ್ತದಾನದ ಕುರಿತು ಇರುವ ಮೌಢ್ಯಗಳನ್ನು ತೊಡೆಯುವ ಕೆಲಸ ಮಾಡಬೇಕು. ಒಬ್ಬ ದಾನಿಯಿಂದ ಪಡೆದ ರಕ್ತವೂ ಅದೇ ರಕ್ತದ ಗುಂಪಿಗೆ ಸೇರಿದ ವ್ಯಕ್ತಿಗೆ ಉಪಯೋಗಿಸಬಹುದು. ದಾನಿಯ ಆರೋಗ್ಯದ ಮೇಲೆ ಯಾವುದೇ ತೊಂದರೆ ಉಂಟಾಗುವುದಿಲ್ಲ’ ಎಂದು ಹೇಳಿದರು.

ಆರ್ಯವೈಶ್ಯ ಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಶಬರೀಶ್, ವಾಸವಿ ಕ್ಲಬ್ ಅಧ್ಯಕ್ಷ ಶ್ರೀಧರ್, ವಾಸವಿ ಯೂತ್ ಕ್ಲಬ್ ಅಧ್ಯಕ್ಷ ಗಣೇಶ್, ಮುಖಂಡರಾದ ಬಿ.ಎನ್.ಸೂರ್ಯನಾರಾಯಣಶೆಟ್ಟಿ, ಕೃಷ್ಣಮೂರ್ತಿ, ಬದರಿನಾಥ್, ರಾಣಿ ಪ್ರಭಾಕರ್ ಶಿಬಿರದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು