ಶುಕ್ರವಾರ, ಸೆಪ್ಟೆಂಬರ್ 20, 2019
28 °C
ಬದಿಯಡ್ಕ: ಕೃತಿ ಬಿಡುಗಡೆ ಸಮಾರಂಭ

ಸಾಹಿತ್ಯದ ಹೊಸಮುಖಗಳು ಸ್ವೀಕಾರಾರ್ಹ: ಪೂರ್ಣಿಮಾ

Published:
Updated:
Prajavani

ಬದಿಯಡ್ಕ: ‘ಆಧುನಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಹಿತ್ಯ ಬರಹಗಳ ಹೊಸ ಬದಲಾವಣೆಯತ್ತ ತೆರೆದುಕೊಳ್ಳುತ್ತಿರುವುದು ವಿಶೇಷ. ಹೆಚ್ಚು ಮಾಗಿಕೊಳ್ಳುವಲ್ಲಿ ವಿಮರ್ಶೆಗಳು ಬಲ ನೀಡುತ್ತವೆ. ಸಾಹಿತ್ಯ ವಿಮರ್ಶೆಗಳು ಹೊಸ ಓದುಗರಿಗೆ ಪ್ರೇರಣೆ ನೀಡುತ್ತದೆ’ ಎಂದು ರಂಗನಟಿ, ಸಾಹಿತಿ ಪೂರ್ಣಿಮಾ ಸುರೇಶ್‌ ಹೇಳಿದರು.

ಇಲ್ಲಿನ ರಾಮಲೀಲಾ ಸಭಾಂಗಣದಲ್ಲಿ ನೇಸರ ಪ್ರಕಾಶನದ ಆಶ್ರಯದಲ್ಲಿ ಗಝಲ್‌ ಕವಯತ್ರಿ ಚೇತನಾ ಕುಂಬಳೆ ಅವರ ‘ಪಡೆನೆಳಲು’ ವಿಮರ್ಶಾ ಕೃತಿಯನ್ನು ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಗಝಲ್ ಕೃತಿಯ ಬಗ್ಗೆ ಮಾತನಾಡಿದ ಸಾಹಿತಿ ಡಾ. ವಸಂತಕುಮಾರ್ ಪೆರ್ಲ, ‘ಸಾಹಿತ್ಯದ ಯಶಸ್ಸಿಗೆ ಪೂರಕ ವಾತಾವರಣ ಬೇಕು. ಈ ನಿಟ್ಟಿನಲ್ಲಿ ತೀವ್ರ ಭಾವದ ಶೋಧನೆಯ ಕೃತಿಗಳು ನಿರ್ಮಾಣವಾಗುತ್ತದೆ. ಉತ್ತಮ ಕೃತಿಗಳು ಓದಿಸಿಕೊಂಡು ಸುದೀರ್ಘ ಕಾಲ ನೆಲೆಗೊಳ್ಳುತ್ತದೆ. ಕನ್ನಡ ಸಾಹಿತ್ಯದಲ್ಲಿ ಗಝಲ್ ಪ್ರಕಾರ ಜನಪ್ರಿಯವಾಗುತ್ತಿದೆ’ ಎಂದು ಹೇಳಿದರು.

ಹಿರಿಯ ಚಿತ್ರ ಕಲಾವಿದ ಪಿ.ಎಸ್‌. ಪುಣಿಂಚಿತ್ತಾಯ ಉದ್ಘಾಟಿಸಿದರು. ಚೇತನಾ ಕುಂಬಳೆ ಅವರ ಗಝಲ್‌ ಸಂಕಲನ ‘ನಸುಕಿನಲ್ಲಿ ಬಿರಿದ ಹೂಗಳು’ ಕೃತಿಯನ್ನು ನಿವೃತ್ತ ಶಿಕ್ಷಕಿ ಎಚ್‌ ಸರಸ್ವತಿ ಬಿಡುಗಡೆ ಮಾಡಿದರು.

ಉಪನ್ಯಾಸಕಿ ಲಕ್ಷ್ಮಿ ಕೆ ಅವರು ‘ಪಡಿನೆಳಲು’ ಕೃತಿಯನ್ನು ಪರಿಚಯಿಸಿದರು. ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾ ಲಕ್ಷ್ಮಿ ಕುಳಮರ್ವ, ಹರೀಶ್‌ ಪೆರ್ಲ ಭಾಗವಹಿಸಿದ್ದರು. ತೆಹ್ರೀಕೆ ಉರ್ದು ಸಂಘಟನೆಯ ಮುಖಂಡ ಮೊಹಮ್ಮದ್ ಅಝೀಂ ಮಣಿಮುಂಡ ಅವರು, ಗಝಲ್ ಸಾಹಿತ್ಯ ಪ್ರಕಾರದ ಇತಿಹಾಸ, ಗಝಲ್ ಪ್ರಕಾರದ ಸಾಹಿತ್ಯದ ಮಹತ್ವ ಕುರಿತು ಮಾಹಿತಿ ನೀಡಿ, ಸ್ವರಚಿತ ಉರ್ದು ಗಝಲ್‌ಗಳನ್ನು ವಾಚಿಸಿದರು.

ಮೊಹಮ್ಮದ್ ಅಶ್ವಾಕ್ ಮಣಿಮುಂಡ ಅವರಿಂದ ಗಝಲ್ ಗಾಯನ ನಡೆಯಿತು. ಶ್ವೇತಾ ಕಜೆ ಅವರು ಸ್ವರಚಿತ ಗಝಲ್ ವಾಚನ ಮಾಡಿದರು. ಶ್ಯಾಮಲಾ ರವಿರಾಜ್ ಕುಂಬಳೆ ಪ್ರಾರ್ಥಿಸಿದರು. ಚೇತನಾ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮೇಘನಾ ರಾಜಗೋಪಾಲ್ ವಂದಿಸಿದರು. ಜಯ ಮಣಿಯಂಪಾರೆ ನಿರೂಪಿಸಿದರು. ಹಿರಿಯ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

Post Comments (+)