ಸೋಮವಾರ, ಸೆಪ್ಟೆಂಬರ್ 16, 2019
22 °C

‘ಐಐಎಸ್‌ಸಿ ದಾಳಿ ಮಾಹಿತಿ ಉಗ್ರ ಕಸಬ್‌ಗೆ ಗೊತ್ತಿತ್ತು’

Published:
Updated:

ಬೆಂಗಳೂರು: ‘ಮುಂಬೈ ದಾಳಿ ವೇಳೆ ಸೆರೆ ಸಿಕ್ಕಿದ್ದ ಮೊಹಮ್ಮದ್‌ ಅಜ್ಮಲ್‌ ಕಸಬ್‌ಗೆ, ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೇಲೆ 2005ರಲ್ಲಿ ಉಗ್ರರು ನಡೆಸಿದ್ದ ದಾಳಿಯ ಸಂಪೂರ್ಣ ಮಾಹಿತಿ ತಿಳಿದಿತ್ತು’ ಎಂದು ರಾಜ್ಯ ಗುಪ್ತದಳದ ಎಡಿಜಿಪಿ ಆಗಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರ್ ಹೇಳಿದರು.

ನಿವೃತ್ತ ಡಿಜಿಪಿ ಡಿ.ವಿ. ಗುರು ಪ್ರಸಾದ್ ರಚಿತ ‘ಕಾರಿಡಾರ್ಸ್ ಆಫ್ ಇಂಟೆಲಿಜೆನ್ಸ್ – ರಿವೈಲಿಂಗ್ ಪಾಲಿಟಿಕ್ಸ್’ (ಇಂಗ್ಲಿಷ್) ಹಾಗೂ ‘ಗೂಢಚರ್ಯೆಯ ಆ ದಿನ ಗಳು’  (ಕನ್ನಡ) ಪುಸ್ತಕವನ್ನು ಬನಶಂಕರಿಯ ಸುಚಿತ್ರಾ ಆರ್ಟ್ ಸೆಂಟರ್‌ ಸಭಾಂಗಣದಲ್ಲಿ ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.   

‘ಪಾಕಿಸ್ತಾನದ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯು ಭಾರತದ ಹಲವು ಪ್ರದೇಶಗಳಲ್ಲಿ ದಾಳಿ ಮಾಡಲು ಸಂಚು ರೂಪಿಸಿತ್ತು. ಬಿಹಾರದ ಶಬಾಬುದ್ದೀನ್‌ನನ್ನು ವಿದ್ಯಾಭ್ಯಾಸದ ಸೋಗಿನಲ್ಲಿ ಬೆಂಗಳೂರಿಗೆ ಕಳುಹಿಸಿತ್ತು. ಇಲ್ಲಿಯ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ ಆತ, ಪಂಚತಾರಾ ಹೋಟೆಲ್‌ಗಳು, ಪ್ರತಿಷ್ಠಿತ ಕಾಲೇಜುಗಳು ಹಾಗೂ ಹಲವು ಸ್ಥಳಗಳ ಬಗ್ಗೆ ತಿಳಿದುಕೊಂಡಿದ್ದ. ಆ ಮಾಹಿತಿಯನ್ನು ಸಂಘಟನೆಯವರಿಗೆ ರವಾನಿಸಿದ್ದ’ ಎಂದರು.

‘ಬೆಂಗಳೂರಿನಲ್ಲಿ ಯಾವ ಸ್ಥಳಗಳ ಮೇಲೆ ದಾಳಿ ಮಾಡಬೇಕು? ಯಾವ ರಸ್ತೆ ಮೂಲಕ ಹೋಗಬೇಕು? ಎಂಬ ಬಗ್ಗೆ ಉಗ್ರರು ಮೊದಲೇ ಯೋಜನೆ ರೂಪಿಸಿದ್ದರು. ಅದೆಲ್ಲ ಮಾಹಿತಿ ಕಸಬ್‌ಗೆ ಗೊತ್ತಿತ್ತು. ಐಐಎಸ್‌ಸಿ ದಾಳಿ ಪ್ರಕರಣದಲ್ಲಿ ಆತನೂ ಆರೋಪಿ ಎಂಬ ಅನುಮಾನ ಇಂದಿಗೂ ಪೊಲೀಸರಲ್ಲಿದೆ’ ಎಂದರು ಅವರು ಹೇಳಿದರು.

Post Comments (+)