ರಾಜ್ಯ ಕ್ರಿಕೆಟ್ ಸಂಸ್ಥೆಗಳ ಉನ್ನತ ಮಂಡಳಿಗೆ 19 ಸದಸ್ಯರು?

ಸೋಮವಾರ, ಮೇ 27, 2019
24 °C

ರಾಜ್ಯ ಕ್ರಿಕೆಟ್ ಸಂಸ್ಥೆಗಳ ಉನ್ನತ ಮಂಡಳಿಗೆ 19 ಸದಸ್ಯರು?

Published:
Updated:

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾನ್ಯತೆ ಪಡೆದಿರುವ ರಾಜ್ಯ ಸಂಸ್ಥೆಗಳಿಗೆ ಸಂತಸದ ಸುದ್ದಿಯೊಂದು ಕಾದಿದೆ.

ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸ್ಸಿನ ಅನ್ವಯ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಲ್ಲಿ ನೇಮಕ ಮಾಡಲಾಗುವ ಉನ್ನತ ಮಂಡಳಿಯ ಸದಸ್ಯರ ಸಂಖ್ಯೆಯನ್ನು 9 ರಿಂದ 19ಕ್ಕೆ ಹೆಚ್ಚಿಸಲು ಸುಪ್ರೀಂ ಕೋರ್ಟ್ ಸಮ್ಮತಿಸುವ ಸಾಧ್ಯತೆ ಇದೆ.

ರಾಜ್ಯ ಸಂಸ್ಥೆಗಳಲ್ಲಿ ಆಡಳಿತದ ಮೇಲೆ ನಿಗಾ ಇಡುವ ಉನ್ನತ ಸಮಿತಿಗೆ ಕೇವಲ ಒಂಬತ್ತು ಸದಸ್ಯರನ್ನು ನೇಮಕ ಮಾಡಬೇಕು. ಅದರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಪುರುಷ ಮತ್ತು ಮಹಿಳಾ ಆಟಗಾರರ ವಿಭಾಗದಿಂದ ತಲಾ ಒಬ್ಬೊಬ್ಬರು ಪ್ರತಿನಿಧಿ, ರಾಜ್ಯ ಸಂಸ್ಥೆಯಿಂದ ಒಬ್ಬ ಸದಸ್ಯ ಮತ್ತು ಮಹಾಲೇಖಪಾಲರ ಇಲಾಖೆಯ ಪ್ರತಿನಿಧಿಯನ್ನು ಒಳಗೊಂಡಿರಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆದರೆ, 36 ರಾಜ್ಯ ಸಂಸ್ಥೆಗಳ ಪೈಕಿ 30 ಸಂಸ್ಥೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದವು.

‘ಕ್ರಿಕೆಟ್ ಆಡಳಿತ ಸಮಿತಿ ಮತ್ತು ಅಮಿಕಸ್ ಕ್ಯೂರಿ ಪರಸ್ಪರ ಚರ್ಚಿಸಿದ್ದಾರೆ. ಶೇ 85ಕ್ಕೂ ಹೆಚ್ಚು ರಾಜ್ಯ ಸಂಸ್ಥೆಗಳು ಅರ್ಜಿ ಸಲ್ಲಿಸಿರುವುದನ್ನು ಪರಿಗಣಿಸಿ, ಉನ್ನತ ಸಮಿತಿಯ ಸದಸ್ಯರ ಸಂಖ್ಯೆಯನ್ನು 19ಕ್ಕೆ ಹೆಚ್ಚಿಸಲು ಮುಂದಾಗಿವೆ. ಈ ಕುರಿತು ಮುಂದಿನ ಗುರುವಾರ ಸುಪ್ರೀಂ ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸುವ ಸಾಧ್ಯತೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

‘ಅಮಿಕಸ್ ಕ್ಯೂರಿ ಆಗಿರುವ ವಕೀಲ ನರಸಿಂಹ ಅವರು ಪ್ರಕರಣ ಬೇಗ ಇತ್ಯರ್ಥವಾಗುವಂತೆ ಮಾಡಲು ಸಹಕರಿಸುತ್ತಿದ್ದಾರೆ. ರಾಜ್ಯ ಸಂಸ್ಥೆಗಳ ಕಾರ್ಯಕ್ಷಮತೆಯಿಂದಾಗಿ ಕ್ರಿಕೆಟ್‌ ಉತ್ತಮವಾಗಿ ಬೆಳೆಯುತ್ತಿದೆ ಎಂಬುದನ್ನು ಅವರು ಅರಿತಿದ್ದಾರೆ. ಸಿಒಎ ಜೊತೆಗೆ  ಚರ್ಚಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿದವು.

ಕರ್ನಾಟಕದ ಬೇಡಿಕೆ: ಉನ್ನತ ಸಮಿತಿಯಲ್ಲಿ 26 ಸದಸ್ಯರು ಇರಬೇಕು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಆದರೆ ಈಗ 19 ಸದಸ್ಯರ ನೇಮಕ ಪ್ರಸ್ತಾವಕ್ಕೆ ಸಮ್ಮತಿಸಲು ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ 16 ಜನ ಚುನಾಯಿತ ಸದಸ್ಯರು, ಆಟಗಾರರ ಇಬ್ಬರು ಪ್ರತಿನಿಧಿಗಳು ಮತ್ತು ಸಿಎಜಿ ಪ್ರತಿನಿಧಿ ಒಳಗೊಂಡಿದ್ದಾರೆ.

ವಿದರ್ಭ ಕ್ರಿಕೆಟ್ ಸಂಸ್ಥೆಯು ಈಗಾಗಲೇ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಿದೆ. ಅದರಿಂದಾಗಿ ಹೊಸ ನಿಯಮದ ಪ್ರಕಾರ ಉನ್ನತ ಸಮಿತಿಯನ್ನು ರಚಿಸುವ ಅವಕಾಶವೂ ಅದಕ್ಕೇ ಮೊದಲು ಲಭಿಸಲಿದೆ.

ಈ ನಿಯಮ ಜಾರಿಗೆ ಬಂದ ಕೂಡಲೇ ರಾಜ್ಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ  ಆರಂಭವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !