ಸೋಮವಾರ, ಸೆಪ್ಟೆಂಬರ್ 16, 2019
22 °C
ಜಿಲ್ಲೆಯ ಆಯ್ದ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ತರಗತಿಗಳಿಗೆ ಚಾಲನೆ

20 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ

Published:
Updated:
Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಸುಮಾರು 20 ಶಾಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲು ಸಿದ್ಧತೆ ನಡೆಸಿದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಳೆದ ಬಜೆಟ್‌ನಲ್ಲಿ ನೀಡಿದ ಘೋಷಣೆಯಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ರಾಜ್ಯ ಸರ್ಕಾರ ಈ ವರ್ಷದಿಂದಲೇ ಎಲ್‌ಕೆಜಿಯಿಂದ 1ರ ತನಕ ತರಗತಿಗಳನ್ನು ಹೊಂದಿರುವ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿ ಆರಂಭಿಸಲು ಮುಂದಾಗಿದೆ.

ಈ ಯೋಜನೆಯ ಭಾಗವಾಗಿ ಜಿಲ್ಲೆಯಲ್ಲಿ ಐದು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (ಚೇಳೂರು, ಕೈವಾರ, ಬಶೆಟ್ಟಹಳ್ಳಿ, ಮಂಡಿಕಲ್, ಡಿ.ಪಾಳ್ಯ) ಈ ವರ್ಷದಿಂದ ಹೊಸದಾಗಿ ಎಲ್‌ಕೆಜಿ ತರಗತಿಗಳು ಆರಂಭಗೊಳ್ಳಲಿವೆ. ಈ ಶಾಲೆಗಳೂ ಸೇರಿದಂತೆ 20 ಶಾಲೆಗಳಲ್ಲಿ ಒಂದನೇ ತರಗತಿಗಳನ್ನು ಆಂಗ್ಲಮಾಧ್ಯಮಗಳಲ್ಲಿ ಆರಂಭಿಸಲಾಗುತ್ತಿದೆ. ಈ ಕುರಿತಂತೆ ಈಗಾಗಲೇ ಸಂಬಂಧಪಟ್ಟ ಶಾಲೆಗಳ ಶಿಕ್ಷಕರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಸಿದ್ಧತೆಗೆ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸದ್ಯಕ್ಕೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ ತಲಾ 4, ಬಾಗೇಪಲ್ಲಿ ತಾಲ್ಲೂಕಿನಲ್ಲಿ 3 ಹಾಗೂ ಗುಡಿಬಂಡೆಯ 1 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳು ಆರಂಭಗೊಳ್ಳಲಿವೆ.

ಎಲ್ಲೆಲ್ಲಿ ಹೊಸ ತರಗತಿ ಆರಂಭ?

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ನಗರದ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಾಪಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೇರೇಸಂದ್ರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಂಡಿಕಲ್, ಚಿಂತಾಮಣಿ ತಾಲ್ಲೂಕಿನಲ್ಲಿ ನಗರದ ವೆಂಕಟಗಿರಿಕೋಟೆ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೆನರಾ ಬ್ಯಾಂಕ್ ಸಮೀಪ ಇರುವ ಬಾಲಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಟ್ಲಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೈವಾರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಚೇಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರ್ಗನುಕುಂಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಾಗೇಪಲ್ಲಿ ಪಟ್ಟಣದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪಟ್ಟಣದ ಕೋಟೆ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡತೇಕಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಶೆಟ್ಟಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾದಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ

ಗೌರಿಬಿದನೂರು ತಾಲ್ಲೂಕಿನಲ್ಲಿ ಪಟ್ಟಣದ ಕೋಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸೊಣಗಾನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಡಿ.ಪಾಳ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುದಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡಿಬಂಡೆ ಪಟ್ಟಣದಲ್ಲಿ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲು ಇಲಾಖೆ ಕ್ರಮ ಕೈಗೊಂಡಿದೆ.

‘ಪ್ರಸಕ್ತ ವರ್ಷದಿಂದ ಜಿಲ್ಲೆಯಲ್ಲಿ ಐದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಎಲ್‌ಕೆಜಿ ತರಗತಿಗಳು ಆರಂಭಗೊಳ್ಳಲಿವೆ. ಜತೆಗೆ 20 ಶಾಲೆಗಳಲ್ಲಿ 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಗೊಳ್ಳಲಿವೆ. ಜೂನ್‌ ಒಂದರಿಂದ ಈ ತರಗತಿಗಳು ಆರಂಭಗೊಳ್ಳಲಿವೆ. ಎಲ್‌ಕೆಜಿ ತರಗತಿಗೆ ಮೂರೂವರೆ ವರ್ಷ ದಾಟಿದ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಈ ತರಗತಿಗೆ ಒಬ್ಬ ಶಿಕ್ಷಕರು, ಒಬ್ಬ ಆಯಾ ಅವರನ್ನು ನೇಮಕ ಮಾಡಲಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್ ತಿಳಿಸಿದರು.

‘ಎಲ್‌ಕೆಜಿ ಮತ್ತು ಆಂಗ್ಲ ಮಾಧ್ಯಮದ ಒಂದನೇ ತರಗತಿಗೆ ಶುಲ್ಕ ಎಷ್ಟು? ಎಷ್ಟು ಮಕ್ಕಳನ್ನು ದಾಖಲು ಮಾಡಿಕೊಳ್ಳಬೇಕು ಎಂಬ ಬಗ್ಗೆ ಇಲಾಖೆಯಿಂದ ಈವರೆಗೆ ಮಾಹಿತಿ ಬಂದಿಲ್ಲ. ಈ ವರ್ಷ ಎಲ್‌ಕೆಜಿ, ಒಂದನೇ ತರಗತಿಗೆ ಆರಂಭಗೊಳ್ಳುವ ಆಂಗ್ಲ ಮಾಧ್ಯಮ ತರಗತಿಗಳು ಮುಂದಿನ ವರ್ಷದಿಂದ ಪ್ರತಿ ವರ್ಷ ಮುಂದಿನ ಹಂತದ ಒಂದು ತರಗತಿಗೆ ವಿಸ್ತರಣೆಯಾಗುತ್ತ ಹೋಗಲಿವೆ’ ಎಂದು ಹೇಳಿದರು.

‘ಈ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ತರಗತಿಗಳನ್ನು ಸಜ್ಜುಗೊಳಿಸುವಂತೆ ಸೂಚನೆ ನೀಡಲಾಗಿದೆ. ಬ್ಯಾನರ್ ಸೇರಿದಂತೆ ಪ್ರಚಾರ ಸಾಮಗ್ರಿಗಳ ಸಮೇತ ಶಿಕ್ಷಕರಿಗೆ ಪ್ರಚಾರ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಪ್ರವೇಶ ಪಡೆಯಬೇಕು ಎಂದು ನಿರ್ದೇಶನ ನೀಡಲಾಗಿದೆ’ ಎಂದರು.

 

Post Comments (+)