ಕುರಿಗಾಹಿಗಳ ರಕ್ಷಣೆಗೆ ಟೆಂಟ್, ವಿಶೇಷ ಕಿಟ್!

ಶನಿವಾರ, ಮೇ 25, 2019
22 °C
ನೈಸರ್ಗಿಕ ವಿಕೋಪಕ್ಕೆ ತುತ್ತಾಗುವವರ ನೆರವಿಗೆ ಮುಂದಾದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

ಕುರಿಗಾಹಿಗಳ ರಕ್ಷಣೆಗೆ ಟೆಂಟ್, ವಿಶೇಷ ಕಿಟ್!

Published:
Updated:

ಬಾಗಲಕೋಟೆ: ಬೇಸಿಗೆಯಲ್ಲಿ ವಿಷಕಾರಿ ಜಂತುಗಳು ಕಚ್ಚಿ ಹಾಗೂ ಮಳೆಗಾಲದಲ್ಲಿ ಸಿಡಿಲಿನ ಅಘಾತಕ್ಕೆ ಒಳಗಾಗಿ ಸಾವನ್ನಪ್ಪುವ ಕುರಿಗಾಹಿಗಳ ರಕ್ಷಣೆಗಾಗಿ ಅವರಿಗೆ  ಸುರಕ್ಷಾ ಕಿಟ್ ಹಾಗೂ ವಿಶೇಷ ಸಂಚಾರಿ ಟೆಂಟ್ ಒದಗಿಸಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಮುಂದಾಗಿದೆ.

ಅದಕ್ಕಾಗಿ ಆಯಾ ಜಿಲ್ಲೆಯಲ್ಲಿರುವ ಸಂಚಾರಿ ಹಾಗೂ ಅರೆ ಸಂಚಾರಿ ಕುರಿಗಾಹಿಗಳ ಮಾಹಿತಿಯನ್ನು ಕಳುಹಿಸುವಂತೆ ನಿಗಮದ ಅಧಿಕಾರಿಗಳಿಗೆ ಮೇ 4ರಂದು ಸುತ್ತೋಲೆ ಕಳುಹಿಸಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಗುಡುಗು–ಸಿಡಿಲು ಮತ್ತಿತರ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಹಾಗೂ ತಿರುಗಾಟದ ವೇಳೆ ಹಾವು–ಚೇಳು ಕಚ್ಚಿ ಕುರಿಗಾಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.

‘ಹೀಗೆ ಸಾವನ್ನಪ್ಪಿದವರಿಗೆ ಕಂದಾಯ ಇಲಾಖೆ ಪರಿಹಾರ ನೀಡುತ್ತಿದೆ. ಆದರೂ ಮುಂಜಾಗರೂಕತೆ ಕ್ರಮಗಳ ಮೂಲಕ ಅಕಾಲಿಕ ಸಾವು ತಡೆಗಟ್ಟಲು ಅವರಿಗೆ ನೆರವಿನ ಹಸ್ತ ಚಾಚಲು ನಿರ್ಧರಿಸಲಾಗಿದೆ’ ಎಂದು ನಿಗಮದ  ಬಾಗಲಕೋಟೆ ಕಚೇರಿ ಸಹಾಯಕ ನಿರ್ದೇಶಕ ಡಾ.ಗೋವಿಂದ ಸೊಕನಾದಗಿ ಹೇಳುತ್ತಾರೆ.

ಪ್ರತಿ ಕುರಿಗಾಹಿ ಕುಟುಂಬಕ್ಕೆ 9x12 ವಿಸ್ತೀರ್ಣದ ಟೆಂಟ್, ಹಾಸಿಕೊಳ್ಳಲು ತಾಡಪಾಲು, ಮೊಣಕಾಲುವರೆಗೂ ರಕ್ಷಣೆ ನೀಡುವ ಗಮ್‌ಬೂಟ್, ಸೋಲಾರ್ ಬ್ಯಾಟರಿ ಒದಗಿಸಲಾಗುತ್ತಿದೆ.

₹4 ಕೋಟಿ ಮೀಸಲು:

ನಿಗಮದಿಂದ ಈ ಪರಿಕರಗಳನ್ನು ನೀಡಲು ಈ ವರ್ಷ ₹4 ಕೋಟಿ ಮೀಸಲಿಡಲಾಗಿದೆ. ಅದರಲ್ಲಿ 2353 ಕುಟುಂಬಗಳಿಗೆ ನೆರವು ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಜಿಲ್ಲೆಯ ಸಂಚಾರಿ ಹಾಗೂ ಅರೆ ಸಂಚಾರಿ ಕುರಿಗಾರರ ಸಮೀಕ್ಷೆ ಆರಂಭಿಸಿದ್ದೇವೆ ಎಂದು ಡಾ.ಸೊಕನಾದಗಿ ತಿಳಿಸಿದರು.

ಎರಡು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಅನ್ವಯ ಬಾಗಲಕೋಟೆ ಜಿಲ್ಲೆಯಲ್ಲಿಯೇ 700ಕ್ಕೂ ಹೆಚ್ಚು ಸಂಚಾರಿ ಹಾಗೂ ಅರೆ ಸಂಚಾರಿ ಕುರಿಗಾಹಿಗಳು ಇದ್ದಾರೆ ಎಂದು ಹೇಳುತ್ತಾರೆ.

’ಸಂಚಾರಿ ಕುರಿಗಾಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ, ನಿ‍ಪ್ಪಾಣಿ ಹಾಗೂ ಹುಕ್ಕೇರಿ ಭಾಗದಲ್ಲಿ ಇದ್ದಾರೆ. ಅವರು ಅಲ್ಲಿಂದ ಬಳ್ಳಾರಿ ಜಿಲ್ಲೆಯ ತುದಿಯವರೆಗೂ ವರ್ಷವಿಡೀ ಓಡಾಟ ನಡೆಸುತ್ತಾರೆ. ಜಿಲ್ಲೆಯ ಅರೆ ಸಂಚಾರಿಗಳು ಬೇಸಿಗೆಯಲ್ಲಿ ನವಲಗುಂದ–ನರಗುಂದ ಭಾಗದವರೆಗೆ ತೆರಳುತ್ತಾರೆ. ಮಳೆ ಬರುತ್ತಿದ್ದಂತೆಯೇ ಊರಿಗೆ ಮರಳುತ್ತಾರೆ. ರಾಮದುರ್ಗ ತಾಲ್ಲೂಕಿನ ಅರೆ ಸಂಚಾರಿಗಳು ಮುಧೋಳ ತಾಲ್ಲೂಕಿನತ್ತ ವಲಸೆ ಬರುತ್ತಾರೆ’ ಎಂದು ಸೊಕನಾದಗಿ ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !