ಶುಕ್ರವಾರ, ಸೆಪ್ಟೆಂಬರ್ 17, 2021
27 °C

ಹಿಂದೂ ಧರ್ಮ ಕೇಡು ಬಯಸದು: ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಪ್ರಜಾವಾಣಿ ವಾರ್ತ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಜಗತ್ತಿನ ಸಕಲ ಜೀವರಾಶಿಗೂ ಲೇಸು ಬಯಸುವುದೇ ಹಿಂದೂ ಧರ್ಮದ ಮೂಲ ಮಂತ್ರ. ಹಿಂದೂ ಧರ್ಮ ಯಾರಿಗೂ ಕೇಡು ಬಯಸುವುದಿಲ್ಲ ಎಂದು ಸುಬ್ರಹ್ಮಣ್ಯದ ಸಂಪುಟ ಶ್ರೀ ನರಸಿಂಹ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ, ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಮತ್ತೊಬ್ಬರನ್ನು ಹಿಂಸಿಸದೇ ಇರುವುದು, ದುರ್ಬಲರ ಮೇಲೆ ಸವಾರಿ ಮಾಡದೇ ಇರುವುದೇ ಧರ್ಮ. ಈ ಎಲ್ಲ ಅಂಶಗಳು ಹಿಂದೂ ಧರ್ಮದಲ್ಲಿವೆ. ಆಸ್ತಿಕ ಸಮಾಜದಿಂದ ಜಗತ್ತಿಗೆ ಆಪತ್ತು ಇಲ್ಲ. ಅತಿಶಯವಾದ ಬಯಕೆಗಳನ್ನು ಹೊತ್ತಿರುವವರಿಂದ ಮಾತ್ರ ಅಪಾಯವಿದೆ. ಮನೆ, ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕೊಟ್ಟಾಗ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ ಎಂದರು.

ಜಗತ್ತಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ಶಕ್ತಿಗಳಿವೆ. ಕೋಟ್ಯಂತರ ಕೆಟ್ಟ ಶಕ್ತಿಗಳ ನಡುವೆಯೂ ಜಗತ್ತು ಸಮತೋಲನ ಕಳೆದುಕೊಳ್ಳದೇ ಇರುವುದಕ್ಕೆ ಸಾತ್ವಿಕ ಶಕ್ತಿ ಮತ್ತು ಚಿಂತನೆಗಳ ವಿಜೃಂಭಣೆಯೇ ಕಾರಣ. ಈ ದಿಸೆಯಲ್ಲಿ ಭಾರತದ ಕೊಡುಗೆ ಅಪೂರ್ವವಾದುದು. ಇಲ್ಲಿ ತಪಸ್ಸು ನಡೆಸಿರುವ ಮತ್ತು ನಡೆಸುತ್ತಿರುವ ಸಾಧು, ಸಂತರ ಕೊಡುಗೆಯ ಫಲವಾಗಿ ಜಗತ್ತಿನಲ್ಲಿ ಶಾಂತಿ ನೆಲೆಸಿದೆ ಎಂದು ಹೇಳಿದರು.

ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವರದರಾಜ್ ನಾಗ್ವೇಕರ್, ರಥಬೀದಿ ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಆಚಾರ್ಯ, ದಾನಿ ಲಿಂಗಮಾರುಗುತ್ತು ಸುಬ್ಬಯ್ಯ ಶೆಟ್ಟಿ, ಯೂನಿಯನ್ ಬ್ಯಾಂಕ್‌ನ ಪ್ರಾಂತೀಯ ಮುಖ್ಯಸ್ಥ ನಂಜುಂಡಪ್ಪ ತಿಮ್ಮಯ್ಯ, ಮುರತ್ತಕೋಡಿ ವಾಸುದೇವ ಭಟ್ ಮುಖ್ಯ ಅತಿಥಿಗಳಾಗಿದ್ದರು.

ಸೇನಾನಿಗಳಾದ ನವೀನ್ ಸುಬ್ರಹ್ಮಣ್ಯ, ನವೀನ್ ಕದ್ರಿ, ಜಯಪ್ರಕಾಶ್, ಅಹಲ್ಯಾ ಅವರನ್ನು ಈ ವೇಳೆ ಸಮ್ಮಾನಿಸಲಾಯಿತು. ಬ್ರಹ್ಮಕಲಶೋತ್ಸವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ.ಶೆಟ್ಟಿ, ಸದಸ್ಯರಾದ ಸುರೇಶ್‍ಕುಮಾರ್ ಕದ್ರಿ, ಸುಂದರ್ ಶೆಟ್ಟಿ , ಕೃಷ್ಣ ಭಟ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.