ಶುಕ್ರವಾರ, ಸೆಪ್ಟೆಂಬರ್ 20, 2019
29 °C
ಜಿಲ್ಲಾ ಕ್ರೀಡಾಂಗಣದಲ್ಲಿ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟ್‌ನಿಂದ ಒತ್ತುವರಿ, ಶನಿವಾರದವರೆಗೆ ಜಿಲ್ಲಾಧಿಕಾರಿ ಕಾಲಾವಕಾಶ

ಕಟ್ಟಡ ತೆರವಿಗೆ ಅಧಿಕಾರಿಗಳ ಗಡುವು

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ ಎಚ್‌.ಎಸ್.ಗಾರ್ಡನ್‌ನಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟ್‌ನಿಂದ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಅರ್ಚಕರ ವಸತಿ ಕಟ್ಟಡವನ್ನು ತೆರವುಗೊಳಿಸಲು ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗುತ್ತಿದ್ದಂತೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಬೆಳಿಗ್ಗೆ ತಹಶೀಲ್ದಾರ್ ನರಸಿಂಹಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ, ಪೊಲೀಸ್‌ ಸಿಬ್ಬಂದಿ ಸಮೇತ ಕ್ರೀಡಾಂಗಣದ ಜಾಗದಲ್ಲಿರುವ ವಸತಿ ಕಟ್ಟಡ ತೆರವುಗೊಳಿಸಲು ಬಂದಾಗ ದೇವಾಲಯದ ಟ್ರಸ್ಟ್‌ ಪದಾಧಿಕಾರಿಗಳು, ಅರ್ಚಕರು, ಭಕ್ತರು ಕಟ್ಟಡ ತೆರವುಗೊಳಿಸದಂತೆ ಮನವಿ ಮಾಡಿಕೊಳ್ಳುವ ಜತೆಗೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ‘ದೇವಾಲಯ ರೈಲ್ವೆ ಇಲಾಖೆಯ ಜಾಗದಲ್ಲಿದೆ. ಆದರೆ ಟ್ರಸ್ಟ್‌ನವರು ಕ್ರೀಡಾಂಗಣಕ್ಕೆ ಸೇರಿದ ಜಾಗಕ್ಕೆ ಬೇಲಿ ಹಾಕಿಕೊಂಡಿದ್ದಾರೆ. ದೇವಾಲಯ ಹೊರತುಪಡಿಸಿದಂತೆ ಉಳಿದೆಲ್ಲವನ್ನು ತೆರವು ಮಾಡಲಾಗುತ್ತದೆ. ಇಲ್ಲಿ ಯಾರನ್ನು ಅನಧಿಕೃತವಾಗಿ ಇರಲು ಬಿಡುವುದಿಲ್ಲ’ ಎಂದು ಹೇಳಿದರು.

‘ಸರ್ಕಾರದ ಅನುಮತಿ ಪಡೆಯದೇ ಈ ರೀತಿ ದೇವಾಲಯ ಕಟ್ಟಿಕೊಂಡು, ಅನಧಿಕೃತ ಟ್ರಸ್ಟ್ ಮಾಡಿಕೊಂಡು ಸರ್ಕಾರಿ ಜಮೀನು ಅತಿಕ್ರಮ ಪ್ರವೇಶ ಮಾಡಿದ್ದು ತಪ್ಪು. ಕ್ರೀಡಾಂಗಣದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಜಾಗ ಬೇಕಿದೆ. ಅದಕ್ಕಾಗಿ ಈ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆಗಳು ನಡೆದಿವೆ. ಹೀಗಾಗಿ ಕಾಲಾವಕಾಶ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ ಅವರು ಅಂತಿಮ ಆದೇಶ ನೀಡಿದ್ದಾರೆ. ಅದರಂತೆ ತೆರವು ಕಾರ್ಯಾಚರಣೆ ನಡೆಸುತ್ತೇವೆ. ಈ ಹಿಂದೆ ಅನೇಕ ಬಾರಿ ಕಟ್ಟಡ ತೆರವುಗೊಳಿಸುವಂತೆ ಸೂಚನೆ ನೀಡಿದರೂ ಏಕೆ ತೆರವು ಮಾಡಲಿಲ್ಲ’ ಎಂದು ಅರ್ಚಕರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಅರ್ಚಕ ಸದಾನಂದ ಭಟ್ ಅವರು ದೂರವಾಣಿ ಮೂಲಕ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರೊಂದಿಗೆ ಮಾತನಾಡಿ ಕಟ್ಟಡ ತೆರವಿಗೆ ಕಾಲಾವಕಾಶಕ್ಕಾಗಿ ಮನವಿ ಮಾಡಿಕೊಂಡರು. ಬಳಿಕ ಜಿಲ್ಲಾಧಿಕಾರಿ ಅವರು ವಿಧಿಸಿದ ಷರತ್ತಿನಂತೆ ಶನಿವಾರದ ಒಳಗೆ ಕಟ್ಟಡ ತೆರವುಗೊಳಿಸುವುದಾಗಿ ತಹಶೀಲ್ದಾರ್ ಅವರಿಗೆ ಮುಚ್ಚಳಿಕೆ ಬರೆದುಕೊಟ್ಟರು. ಆಗ ನರಸಿಂಹಮೂರ್ತಿ ಅವರು, ‘ಶನಿವಾರದ ಒಳಗೆ ಕಟ್ಟಡವನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಭಾನುವಾರ ಕಟ್ಟಡ ಒಡೆದು ಹಾಕುವುದು ಶತಸಿದ್ಧ’ ಎಂದು ತಿಳಿಸಿ ಅಲ್ಲಿಂದ ವಾಪಾಸಾದರು.

ಸರ್ವೇ ನಂಬರ್ 112/3 ಮತ್ತು 115ರಲ್ಲಿ ಟ್ರಸ್ಟ್‌ನವರು 29 ಮೂಕ್ಕಾಲು ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ದೇವಾಲಯ, ಉದ್ಯಾನ, ವಸತಿ ಗೃಹ, ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಜನವರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕ್ರೀಡಾಂಗಣದ ಬದಿ ದೇವಾಲಯಕ್ಕೆ ಹಾಕಿದ ತಡೆಬೇಲಿಯನ್ನು ತೆರವುಗೊಳಿಸಿದ್ದರು.

Post Comments (+)