ಎಲ್ಲೇ ಹೋದರೂ ನಾನು ಕನ್ನಡತಿ: ಇದು ರಶ್ಮಿಕಾ ಮಂದಣ್ಣ ಮಾತು

ಚಂದನವನದಿಂದ ಸಿನಿ ಜರ್ನಿ ಶುರು ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿ. ಟಾಲಿವುಡ್ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಟಿಗೆ ಬೇಡಿಕೆ ಈಗ ತಮಿಳಿಗೂ ವಿಸ್ತರಿಸಿದೆ. ಅವಕಾಶ ಸಿಕ್ಕಿದರೆ ಬಾಲಿವುಡ್ಗೂ ಅಡಿ ಇಡುವತ್ತ ರಶ್ಮಿಕಾ ಮಂದಣ್ಣ ಕಣ್ಣುಗಳು ನೆಟ್ಟಿವೆ.
‘ಕಿರಿಕ್ ಪಾರ್ಟಿ’, ‘ಅಂಜನಿಪುತ್ರ’ ‘ಚಮಕ್’, ‘ಯಜಮಾನ’ ಕನ್ನಡ ಸಿನಿಮಾಗಳಲ್ಲದೇ, ತೆಲುಗಿನ ಛಲೋ, ಗೀತಾ ಗೋವಿಂದಂ, ದೇವದಾಸ್ ಸಿನಿಮಾಗಳಲ್ಲಿನ ಮನೋಜ್ಞ ನಟನೆಯಿಂದ ಸಿನಿಮಾಪ್ರಿಯರ ಮನಗೆದ್ದಿದ್ದಾರೆ ರಶ್ಮಿಕಾ. ವಿಜಯ ದೇವರಕೊಂಡ ಜತೆಗಿನ ‘ಗೀತಾ ಗೋವಿಂದಂ’ ಸೂಪರ್ ಹಿಟ್ ಆಗಿ ನೂರು ಕೋಟಿ ಕ್ಲಬ್ ಸೇರಿದ ಮೇಲಂತೂ ರಶ್ಮಿಕಾ ಅವರ ಜನಪ್ರಿಯತೆ ಮತ್ತು ಸಂಭಾವನೆಯ ಗ್ರಾಫ್ ಆಕಾಶಮುಖವಾಗಿದೆ. ದೇವರಕೊಂಡ ಜತೆಗಿನ ಚತುರ್ ಭಾಷೆಯ ‘ಡಿಯರ್ ಕಾಮ್ರೇಡ್’ ಇನ್ನಷ್ಟೆ ತೆರೆಕಾಣಬೇಕಿದ್ದು, ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳ ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಇಷ್ಟೇ ಅಲ್ಲದೆ, ರಶ್ಮಿಕಾ ಅವರು ಅರ್ಜುನ್ ಅಲ್ಲುಡು, ನಿತಿನ್, ಶಿವಕಾರ್ತಿಕೇಯನ್ ಜತೆಗೂ ಅಭಿನಯಿಸುತ್ತಿದ್ದಾರೆ. ಮಹೇಶ್ ಬಾಬು ಜತೆಗೂ ಒಂದು ಸಿನಿಮಾ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆಯಂತೆ.
ಬಹು ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಜತೆಗೆ ‘ಸಿನಿಮಾ ಪುರವಣಿ’ ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಕ್ಯಾರೆಕ್ಟರ್ ಸೆಲೆಕ್ಟ್ ಮಾಡಿಕೊಳ್ಳುವುದರಲ್ಲಿ ತುಂಬಾ ಚ್ಯೂಸಿಯಾಗಿದ್ದೀರಂತೆ ಹೌದಾ? ಎಂದು ಮಾತಿಗೆಳೆದಾಗ ‘ಹೌದು ಸ್ಕ್ರಿಪ್ಟ್ ಚೆನ್ನಾಗಿರಬೇಕು. ಕ್ಯಾರೆಕ್ಟರ್ ಸ್ಟ್ರಾಂಗ್ ಆಗಿರಬೇಕು. ಯಾವುದೋ ನಾಲ್ಕು ಸೀನು, ಮೂರು ಡಾನ್ಸ್ಗಳಲ್ಲಿ ಬಂದುಹೋಗುವಂತಹ ಸಿನಿಮಾಗಳಲ್ಲಿ ನಾನು ನಟಿಸುವುದಿಲ್ಲ. ನನ್ನ ಕ್ಯಾರೆಕ್ಟರ್ ನೋಡಿದರೆ ನಮ್ಮ ಫ್ಯಾನ್ಸ್ಗೆ ಇಷ್ಟವಾಗಬೇಕು. ‘ನಿಮ್ಮನ್ನು ಈ ರೋಲ್ನಲ್ಲಿ ನೋಡಿ ತುಂಬಾ ಖುಷಿಯಾಗಿದೆ. ನಿಮ್ಮ ಪಾತ್ರ ನಮಗೆ ತೃಪ್ತಿ ನೀಡಿದೆ’ ಅಂತ ಹೇಳುವಂತಿರಬೇಕು. ಬರೀ ಗ್ಲಾಮರ್ ತೋರಿಸುವ ಪಾತ್ರ ನನಗೆ ಇಷ್ಟವಿಲ್ಲವೆಂದು ಖಡಕ್ಕಾಗಿ ಹೇಳುತ್ತಾರೆ ಈ ಕೂರ್ಗಿ.
ರಶ್ಮಿಕಾ ಅವರ ತಾಯಿ ಸುಮನಾ ಮಂದಣ್ಣ ಅವರೂ ‘ಮಗಳಿಗೆ ಬಹಳಷ್ಟು ಸ್ಕ್ರಿಪ್ಟ್ ಬರುತ್ತಿವೆ. ಇಬ್ಬರು, ಮೂವರು ನಾಯಕಿಯರು ಇರುವ ಸಿನಿಮಾಗಳಲ್ಲಿ ಅಭಿನಯಿಸುತ್ತೀರಾ? ಎಂದು ಬಹಳಷ್ಟು ನಿರ್ದೇಶಕರು ಕೇಳುತ್ತಾರೆ. ನಾವು ಒಂದು ಸಿನಿಮಾದಲ್ಲಿ ಕನಿಷ್ಠ ಒಂದೂವರೆ ತಾಸಿನ ಸ್ಪೇಸ್ ಕೊಡ್ತಿರಾ ಎಂದೇ ಕೇಳುತ್ತಿದ್ದೇವೆ’ ಎಂದು ಮಗಳ ಮಾತಿಗೆ ದನಿಗೂಡಿಸಿದರು.
ಎಂತಹ ಪಾತ್ರಗಳನ್ನು ಬಯಸುತ್ತಿದ್ದೀರಿ? ಎಂದಾಗ, ‘ಯಜಮಾನ, ಕಿರಿಕ್ ಪಾರ್ಟಿ, ಚಮಕ್ ಸಿನಿಮಾಗಳಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿವೆ. ತೆಲುಗಿನ ‘ಗೀತಾ ಗೋವಿಂದಂ’ನಲ್ಲಿ ಮಾಡಿರುವ ಗೀತಾ ಕ್ಯಾರೆಕ್ಟರ್ ರೀತಿ ಇನ್ನೊಂದು ಕ್ಯಾರೆಕ್ಟರ್ ಸಿಕ್ಕಿಲ್ಲ. ‘ಡಿಯರ್ ಕಾಮ್ರೆಡ್’ನಲ್ಲಿ ಲಿಲ್ಲಿ ತರದ್ದು ಇನ್ನೊಂದು ಕ್ಯಾರೆಕ್ಟರ್ ಸಿಗಲ್ಲ. ಕನ್ನಡದಲ್ಲಿ ಮಾಡಿದ ‘ಚಮಕ್’ ರೀತಿ ಇನ್ನೊಂದು ಸಿನಿಮಾ ಬಂದಿಲ್ಲ. ಆ ಸಿನಿಮಾದಲ್ಲಿ ನಾಯಕಿಯ ಪಾತ್ರವೂ ನಾಯಕನಿಗೆ ಸರಿಸಮಾನವಾಗಿ ಚಿತ್ರದಲ್ಲಿ ಆವರಿಸಿದೆ. ಅಭಿನಯಕ್ಕೆ ಸಾಕಷ್ಟು ಅವಕಾಶವೂ ಸಿಕ್ಕಿದೆ. ಹೆಚ್ಚು ಸ್ಕೋಪ್ ಇರುವಂತಹ ಸ್ಕ್ರಿಪ್ಟ್ಗಳನ್ನು ಎದುರು ನೋಡುತ್ತಿದ್ದೇನೆ. ಆ ಕ್ಯಾರೆಕ್ಟರ್ ಮಾಡಬೇಕೆಂದರೆ ಅದು ನನಗೇ ಕಷ್ಟದ, ಚಾಲೆಂಜಿಂಗ್ ಕ್ಯಾರೆಕ್ಟರ್ ಆಗಿರಬೇಕು. ಈ ಪಾತ್ರವನ್ನು ತುಂಬಾ ಕಷ್ಟಪಟ್ಟು ಮಾಡಿದ್ದೇನೆ ಎನ್ನುವ ಸಂತೃಪ್ತಿಯೂ ಇರುತ್ತದೆ. ಸ್ಕ್ರೀನ್ ಮೇಲೆ ನೋಡುವಾಗ ನನಗೂ ನನ್ನ ಪಾತ್ರ ಖುಷಿಯಾಗುವಂತಿರಬೇಕು ಎನ್ನುವ ಮಾತು ಸೇರಿಸಿದರು ರಶ್ಮಿಕಾ.
‘ಡಿಯರ್ ಕಾಮ್ರೆಡ್‘ ನಾಯಕಿ ಪ್ರಧಾನ ಸಿನಿಮಾ ಹೌದಾ? ಎಂದು ಕೇಳಿದರೆ, ‘ನೋ ನೋ.. ಅದರಲ್ಲಿ ಒಬ್ಬರು ಹೀರೊನೂ (ವಿಜಯ ದೇವರಕೊಂಡ) ಇದ್ದಾರೆ. ಇಬ್ಬರೂ ಅದರಲ್ಲಿ ನಟಿಸಿದ್ದೇವೆ. ಅದೊಂದು ಬ್ಯೂಟಿಫುಲ್ ಸಿನಿಮಾ, ಸ್ಟೋರಿ ಓರಿಯೆಂಟೆಡ್ ಸಿನಿಮಾ’ ಎಂದು ಬಣ್ಣಿಸಿದರು.
ಸದ್ಯ ನಟಿಸುತ್ತಿರುವ ಸಿನಿಮಾ ಮತ್ತು ಮುಂದಿನ ಯೋಜನೆಗಳ ಬಗ್ಗೆ ಹೇಳಿ ಎಂದಾಗ, ‘ಕನ್ನಡದಲ್ಲಿ ‘ಪೊಗರು’ ಸಿನಿಮಾದಲ್ಲಿ ಧ್ರುವ ಸರ್ಜಾ ಜತೆ ನಟಿಸುತ್ತಿದ್ದೇನೆ. ಅದು ಬಿಟ್ಟರೆ ಸದ್ಯಕ್ಕೆ ಯಾವುದೇ ಕನ್ನಡ ಸಿನಿಮಾ ನನ್ನ ಕೈಯಲ್ಲಿ ಇಲ್ಲ. ಕನ್ನಡದ ಒಂದು ಹೊಸ ಸಿನಿಮಾ ಬಗ್ಗೆ ಅಮ್ಮ ಚರ್ಚೆ ಮಾಡ್ತಾ ಇದ್ದಾರೆ’ ಎಂದ ಅವರು, ಆ ಸಿನಿಮಾ ಬಗ್ಗೆ ಹೆಚ್ಚು ಗುಟ್ಟು ಬಿಡಲಿಲ್ಲ.
‘ಸಮ್ ಹೌ ತುಂಬಾ ಪ್ರಾಜೆಕ್ಟ್ಗಳು ನನ್ನ ಮುಂದಿವೆ. ಅವು ನನಗೇ ಗೊತ್ತಿಲ್ಲ. ಆದರೆ, ಯಾವೆಲ್ಲ ರಿಲೀಸ್ ಆಗುತ್ತಿವೆ ಎನ್ನುವ ಬಗ್ಗೆ ಮಾತ್ರ ಹೇಳಬಲ್ಲೆ. ತೆಲುಗಿನಲ್ಲಿ ನಿತಿನ್ ಜತೆ ಅಭಿನಯಿಸಿರುವ ‘ಭೀಷ್ಮಾ’, ಅಲ್ಲು ಅರ್ಜುನ್ ಜತೆ ಅಭಿನಯಿಸುತ್ತಿರುವ ಇನ್ನೂ ಟೈಟಲ್ ಇಡದ ಒಂದು ಸಿನಿಮಾ, ಶಿವಕಾರ್ತಿಕೇಯನ್ ಜತೆ ನಟಿಸಿರುವ ತಮಿಳು ಸಿನಿಮಾ ‘ಎಸ್ಕೆ 17’ ಈ ವರ್ಷ ಬಿಡುಗಡೆಯಾಗಲಿವೆ. ನಾನು ಈಗ ಒಪ್ಪಿಕೊಂಡಿರುವ ಸಿನಿಮಾಗಳು ಒಂದು ವರ್ಷದೊಳಗೆ ಪೂರ್ಣವಾಗಲಿವೆ’ ಎಂದರು.
ಕನ್ನಡ ಸಿನಿಮಾಗಳಿಂದ ದೂರವಾಗಿತ್ತಿದ್ದೀರಿ ಎನ್ನುವ ಮಾತಿದೆಯಲ್ಲ ಎಂದಾಗ, ‘ಹಾಗೇನು ಇಲ್ಲ. ಪರಭಾಷೆಗಳ ಸಾಲು ಸಾಲು ಸಿನಿಮಾಗಳು ಕೈಯಲ್ಲಿರುವ ನಡುವೆಯೇ ಕನ್ನಡದಲ್ಲೂ ನಟಿಸಿದ್ದೇನೆ. ಬೇರೆ ಭಾಷೆಯಲ್ಲಿ ಸಿನಿಮಾ ಮಾಡ್ತಾ ಇದ್ದೀನಿ. ಹಾಗಾಗಿ ಇಲ್ಲಿನ ಸಿನಿಮಾಗಳಲ್ಲಿ ಮಾಡುವುದಿಲ್ಲವೆಂದು ಯಾವತ್ತೂ ಹೇಳುವುದಿಲ್ಲ. ಯಾವುದೇ ಭಾಷೆಯಾಗಿರಲಿ ಒಳ್ಳೆಯ ಸ್ಕ್ರಿಪ್ಟ್ ಬಂದರೆ, ನನಗೆ ಸ್ಕ್ರಿಪ್ಟ್ ಇಷ್ಟವಾದರೆ ಖಂಡಿತಾ ನಟಿಸುತ್ತೇನೆ. ಪ್ರೇಕ್ಷಕರಿಗೆ ಮನರಂಜನೆ ನೀಡುವುದು ನನ್ನ ಕೆಲಸ ಅಷ್ಟೆ. ನಾವು ಎಲ್ಲಿಗೇ ಹೋದರೆ ನಾವು ಬೆಂಗಳೂರಿನವರು, ಕರ್ನಾಟಕದವರು ಎಂದೇ ಗುರುತಿಸಿಕೊಳ್ಳುವುದು. ಕನ್ನಡದ ನನ್ನ ಅಭಿಮಾನಿಗಳಿಗಾಗಿ, ನನ್ನನ್ನು ಇಷ್ಟಪಡುವವರಿಗಾಗಿ ವರ್ಷಕ್ಕೊಂದು ಕನ್ನಡ ಸಿನಿಮಾ ಮಾಡುತ್ತೇನೆ ಎಂದರು.
ಸಿನಿಮಾ ಇಂಡಸ್ಟ್ರಿಗೆ ಬಂದಿದ್ದು ಹೇಗೆ ಎಂದು ಕೇಳಿದರೆ, ‘ಸಿನಿಮಾ ರಂಗಕ್ಕೆ ಬರುವ ಯಾವುದೇ ಕನಸು ಕಟ್ಟಿಕೊಂಡಿರಲಿಲ್ಲ. ಅಚಾನಕ್ಕಾಗಿ ಬಂದವಳು ನಾನು. ರಾಮಯ್ಯ ಕಾಲೇಜಿನಲ್ಲಿ ನಡೆದ ‘ಫ್ರೆಸ್ ಫೇಸ್’ನಲ್ಲಿ ನನ್ನನ್ನು ನೋಡಿ ಸಿನಿಮಾಕ್ಕೆ ಆಯ್ಕೆ ಮಾಡಿದ್ದರು. ಅಲ್ಲದೆ, ಒಂದು ಸಿನಿಮಾ ಆಡಿಷನ್ಗೆ ಹೋಗಿದ್ದೆ. ಅದು ವರ್ಕ್ಔಟ್ ಆಗಿರಲಿಲ್ಲ. ನಂತರ ಕಿರಿಕ್ ಪಾರ್ಟಿ ಪ್ರೊಡ್ಯೂಸರ್ ನನಗೆ ಆ್ಯಕ್ಟ್ ಮಾಡ್ತೀರಾ ಎಂದು ಕೇಳಿ, ಅವಕಾಶ ನೀಡಿದರು. ಕಿರಿಕ್ ಪಾರ್ಟಿಯಲ್ಲಿ ನನ್ನ ಅಭಿನಯ ನೋಡಿ ತೆಲುಗು ಇಂಡಸ್ಟ್ರಿಯಲ್ಲಿ ಅವಕಾಶ ಕೊಟ್ಟರು. ಗೀತಾ ಗೋವಿಂದಂ ಸಿನಿಮಾ ನೋಡಿ, ಈಗ ತಮಿಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದರು.
ನಿಮ್ಮ ತಾಯಿ ನಿಮ್ಮನ್ನು ಜರ್ನಲಿಸ್ಟ್ ಮಾಡಬೇಕೆಂದುಕೊಂಡಿದ್ರಂತಲ್ಲಾ ಎಂದಾಗ, ‘ನಾನು ಓದುವಾಗಲೇ ಜರ್ನಲಿಸ್ಟ್ ಆಗಬೇಕೆಂದು ಮಾಸ್ ಮೀಡಿಯಾ ಮತ್ತು ಜರ್ನಲಿಸಂ ಕೋರ್ಸ್ ಸೇರಿಕೊಂಡಿದ್ದೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು, ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಜರ್ನಲಿಸ್ಟ್ ಆಗಲು ಏನು ಬೇಕಿತ್ತೂ ಬೇಸಿಕ್ಸ್ ಅದನ್ನು ಕಲಿತಿದ್ದೆ. ಫೋಟೋಗ್ರಫಿ, ವಿಡಿಯೋಗ್ರಫಿ, ಎಡಿಟಿಂಗ್, ಇಂಟರ್ವ್ಯೂವ್ ಹೀಗೆ ಏನು ಬೇಕೋ ಅದೆಲ್ಲವನ್ನೂ ಕಲಿತ್ತಿದ್ದೆ. ನನ್ನ ಮುಖ್ಯ ಗಮನವೆಲ್ಲ ಇದ್ದಿದ್ದು ಜರ್ನಲಿಸಂ ಇಲ್ಲವೇ ಸೈಕಾಲಜಿ ಆಗಿತ್ತು. ಆದರೆ, ಬದುಕು ಸಿನಿಮಾ ಕ್ಷೇತ್ರದತ್ತ ಕೈಬೀಸಿ ಕರೆತಂದಿತು ಎಂದರು ರಶ್ಮಿಕಾ.
ಯಾಕಾಗಿ ಬ್ರೇಕ್ ಅಪ್ ಆಯಿತು? ಎಂದು ವೈಯಕ್ತಿಕ ಬದುಕಿನ ಬಗ್ಗೆ ಮಾತು ಹೊರಳಿಸಿದಾಗ, ‘ವೃತ್ತಿ ಬದುಕಿನ ಮಧ್ಯೆ ವೈಯಕ್ತಿಕ ಬದುಕನ್ನು ಬೆರೆಸಲಾರೆ. ವೈಯಕ್ತಿಕ ಬದುಕಿನ ಬಗ್ಗೆ ನಾನು ಹೇಳಿಕೊಂಡರೆ ಅಥವಾ ಸ್ಟೇಟಸ್ ಹಾಕಿಕೊಂಡರೆ ಈಗ ಸೋಷಿಯಲ್ ಮೀಡಿಯಾದಲ್ಲಿ ನನಗಿರುವ 2.4 ಮಿಲಿಯನ್ ಫಾಲೋವರ್ಸ್ ಸಂಖ್ಯೆ 6.6 ಮಿಲಿಯನ್ಗೆ ಏರಬಬಹುದು ಅಷ್ಟೇ. ನನಗೆ ಅಂತಹ ಪ್ರಚಾರ ಬೇಕಾಗಿಲ್ಲ’ ಎಂದು ಜಾಣ್ಮೆಯ ಉತ್ತರ ಕೊಟ್ಟರು.
ನೀವು ಸೆರೆ ಹಿಡಿದ ವಿಜಯ ದೇವರಕೊಂಡ ಫೋಟೊ ವೈರಲ್ ಆಗಿದೆಯಲ್ಲಾ? ಎಂದು ಕೇಳಿದರೆ, ‘ನಾವು ಎಲ್ಲರದೂ ಫೋಟೊ ತೆಗಿತಾ ಇರ್ತೀವಿ. ನಾನೊಂದು ಫೋಟೊ ತೆಗೆದು, ಸರ್ ನಿಮ್ಮ ಫೋಟೊ ಅಂತ ಕಳುಹಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ರು, ಕ್ರೆಡಿಟ್ಸ್ ಕೊಟ್ರು. ಲೈಕ್ಸ್ ಬಂತು ಅಷ್ಟೆ’ ಎಂದು ನಗುತ್ತಾ ಉತ್ತರಿಸಿದರು.
ಹೋಗ್ಲಿ ಯಾವಾಗ ಮದುವೆ ಆಗ್ತೀರಾ ಎಂದು ಕೇಳಿದರೆ, ‘ಗೊತ್ತಿಲ್ಲ... ಆ ಆಲೋಚನೆ ಸದ್ಯಕ್ಕಂತೂ ಇಲ್ಲ. ಮುಂದೆ ನೋಡೊಣ, ಅದನ್ನು ಅಪ್ಪ–ಅಮ್ಮ ನಿರ್ಧರಿಸುತ್ತಾರೆ’ ಎಂದು ಮಾತು ಮುಗಿಸಿದರು.
ರಶ್ಮಿಕಾ ಬಗ್ಗೆ ಕೆಲವು ಕುತೂಹಲದ ಸಂಗತಿಗಳ ಪ್ರಶ್ನೆಗೆ ಅವರಿಂದ ಬಂದ ನೇರ ಉತ್ತರ ಇಲ್ಲಿದೆ
* ತಂದೆತಾಯಿ, ಕುಟುಂಬದ ಸಪೋರ್ಟ್ ಹೇಗಿದೆ
ಅವರ ಬೆಂಬಲದಿಂದಲೇ ಸಿನಿಮಾ ರಂಗದಲ್ಲಿದ್ದೇನೆ. ಅವರಿಂದಲೇ ಇಷ್ಟು ಪೀಸ್ಫುಲ್ ಆಗಿ ಕೆಲಸ ಮಾಡ್ತಾ ಇದ್ದೀನಿ. ಅವರ ಬಗ್ಗೆ ಏನಂಥಾ ಹೇಳುವುದು ಗೊತ್ತಾಗುತ್ತಿಲ್ಲ. ಗ್ರೇಟ್ಫುಲ್ ಆ್ಯಂಡ್ ಥ್ಯಾಂಕ್ಫುಲ್.
*ಏನನ್ನು ನೀವು ತುಂಬಾ ಇಷ್ಟಪಡ್ತೀರಿ?
ನನಗೆ ಸ್ವೀಟ್ ಅಂದ್ರೆ ತುಂಬಾ ಇಷ್ಟ. ಅದು ಯಾವುದೇ ಸ್ವೀಟ್ ಆಗಿರಬಹುದು.
* ನಿಮ್ಮ ಮುಂಗೈನಲ್ಲಿರುವ ಟ್ಯಾಟು ಏನದು?
ಇರ್ರೀಪ್ಲೇಸಬಲ್ ಅಂತ. ಅದರ ಅರ್ಥ ವೀ ಕಾಂಟ್ ಚೇಂಜ್, ವೀ ಕಾಂಟ್ ರೀಪ್ಲೇಸ್ ಸಮ್ಥಿಂಗ್ (ಇದನ್ನು ಬದಲಿಸಲು ಸಾಧ್ಯವೇ ಇಲ್ಲ). ಅದು ನಾನು 16ನೇ ವಯಸ್ಸಿನಲ್ಲಿರುವಾಗ ಹಾಕಿಸಿಕೊಂಡ ಟ್ಯಾಟು.
* ತುಂಬಾ ಸಿಟ್ಟು ಬರೋದು
ನನಗೆ ಅರ್ಲಿ ಮಾರ್ನಿಂಗ್ ವೇಕ್ ಅಪ್ ಕಾಲ್ ಬಂದ್ರೆ ತುಂಬಾ ಕೋಪ ಬರುತ್ತೆ. ಬೆಳಿಗ್ಗೆ ವೇಕಪ್ ಕಾಲ್ ಕೊಡೊರಿಗೆ ಸ್ವಲ್ಪ ಕಷ್ಟವಾಗಬಹುದು. ಕೆಲಸ ಮಾಡೋರಿಗೆ ಕೆಲಸ ಮಾಡದೆ ಇರೋರು ತುಂಬಾ ಇರಿಟೇಟ್ ಮಾಡಿದ್ರೆ ಕೋಪ ಬರುತ್ತೆ.
* ಬಿಡುವಿನ ಸಮಯ ಹೇಗೆ ಕಳೆಯುತ್ತೀರಿ?
ಮಲ್ಕೊಂಡು ನಿದ್ದೆ ಮಾಡ್ತೀನಿ. ಇಲ್ಲವೇ ಟಿವಿ ನೋಡ್ತೀನಿ. ಟೈಮ್ ಸಿಕ್ಕಿದರೆ ಸೈಕಾಲಜಿ, ಜರ್ನಲಿಸಂಗೆ ಸಂಬಂಧಿಸಿದ ಪುಸ್ತಕಗಳ್ನು ಓದುತ್ತೇನೆ.
* ಬಾಲಿವುಡ್ಗೆ ಹೋಗ್ತಾರೆ ಅನ್ನುವ ಸುದ್ದಿ ಇತ್ತಲ್ಲಾ
ಎಂದರೆ, ‘ನಮಗೆ ಅಷ್ಟೆಲ್ಲ ಸೀನ್ ಇಲ್ಲ ಸರ್. ಬಾಲಿವುಡ್ ಸೀನ್ ಇಲ್ಲವೇ ಇಲ್ಲ. ಮುಂದೆ ಸಿಕ್ಕಿದರೆ ನೋಡೊಣ. ಇನ್ನು ನಾಲ್ಕೈದು ವರ್ಷ ಇದೆಯಲ್ಲ ಕಾದು ನೋಡೋಣ’ ಎಂದರು.
*ನಿಮ್ಮ ರಿಯಲ್ ಲೈಫ್ ಬಗ್ಗೆ ಹೇಳ್ತೀರಾ?
‘ನಮ್ಮ ಲೈಫ್ ತುಂಬಾ ಬೋರಿಂಗ್ ಹಹಹಹ.... ಸಿನಿಮಾ, ಜಿಮ್, ಮನೆ ಇಷ್ಟೇ ಸರ್. ಊಟ ಮಾಡ್ತೀವಿ, ಮಲ್ಕೊತೀವಿ. ಇಷ್ಟೇ ಲೈಫು.
* ಫ್ರೆಂಡ್ಸ್ ಸರ್ಕಲ್ ಹೇಗಿದೆ?
ತುಂಬಾ ಚಿಕ್ಕದು. ಪಾಪ ಫ್ರೆಂಡ್ಸ್ಗಳನ್ನು ಮೀಟ್ ಮಾಡಿ ಐದಾರು ತಿಂಗಳು ಆಗೋಯ್ತು. ಮೂರು ಜನ ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಅದರಲ್ಲಿ ಇಬ್ಬರು ಅಬ್ರಾಡ್ನಲ್ಲಿದ್ದಾರೆ. ಇನ್ನೊಬ್ಬಳು ಫ್ರೆಂಡ್ ಬೆಂಗಳೂರಿನಲ್ಲಿ ಓದುತ್ತಾ ಇದ್ದಾರೆ. ನಾವುಗಳು ಯಾವತ್ತೂ ಒಟ್ಟಿಗೆ ಸೇರಲು ಆಗಿಲ್ಲ. ನಾನು ಮಡಿಕೇರಿಗೆ ಬಂದೇ ಐದು ತಿಂಗಳು ಆಗಿ ಹೋಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.